IND vs ZIM, 2nd ODI: ಅದ್ಭುತ ಪ್ರದರ್ಶನ ನೀಡಿದರು ಎರಡನೇ ಪಂದ್ಯದಿಂದ ದೀಪಕ್ರನ್ನು ತಂಡದಿಂದ ಕೈಬಿಟ್ಟಿದ್ಯಾಕೆ?
IND vs ZIM, 2nd ODI: ಟಾಸ್ ಸಮಯದಲ್ಲೂ ಟೀಂ ಇಂಡಿಯಾ ನಾಯಕ ರಾಹುಲ್, ದೀಪಕ್ ಅಲಭ್ಯತೆಯ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಲಿಲ್ಲ. ಹೀಗಾಗಿ ಮೊದಲ ಏಕದಿನ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಬೌಲರ್ನನ್ನು 2ನೇ ಏಕದಿನ ಪಂದ್ಯದಿಂದ ಕೈಬಿಟ್ಟಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.
ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ. ಆದರೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕಾಡುತ್ತಿರುವ ಪ್ರಶ್ನೆ ಎಂದರೆ, ದೀಪಕ್ ಏಕೆ ಆಡಲಿಲ್ಲ ಎಂಬುದು. ಆರು ತಿಂಗಳ ನಂತರ ಪುನರಾಗಮನ ಮಾಡಿದ ದೀಪಕ್ ಚಹಾರ್‌ಗೆ (Deepak Chahar) ಎರಡನೇ ಏಕದಿನದಲ್ಲಿ ಅವಕಾಶ ಸಿಗಲಿಲ್ಲ. ಮೊದಲ ಪಂದ್ಯದಲ್ಲಿ ತಮ್ಮ ತೀಕ್ಷ್ಣ ಬೌಲಿಂಗ್ ಪ್ರದರ್ಶಿಸಿದ್ದ ದೀಪಕ್ 3 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ 2ನೇ ಏಕದಿನ ಪಂದ್ಯದಲ್ಲಿ ದೀಪಕ್ ಚಹಾರ್ ಬದಲಿಗೆ ಶಾರ್ದೂಲ್ ಠಾಕೂರ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಗಾಯದ ಸಮಸ್ಯೆ ಇಂದ ದೀಪಕ್ 2ನೇ ಪಂದ್ಯವನ್ನು ಆಡಲಿಲ್ಲ ಎಂಬ ವದಂತಿಗಳು ಆರಂಭವಾಗಿವೆ.
ಟಾಸ್ ಸಮಯದಲ್ಲೂ ಟೀಂ ಇಂಡಿಯಾ ನಾಯಕ ರಾಹುಲ್, ದೀಪಕ್ ಅಲಭ್ಯತೆಯ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಲಿಲ್ಲ. ಹೀಗಾಗಿ ಮೊದಲ ಏಕದಿನ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಬೌಲರ್ನನ್ನು 2ನೇ ಏಕದಿನ ಪಂದ್ಯದಿಂದ ಕೈಬಿಟ್ಟಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ದೀಪಕ್ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ ಎಂಬ ವದಂತಿಗಳು ಕ್ರೀಡಾವಲಯದಲ್ಲಿ ಹರಿದಾಡುತ್ತಿವೆ. ಇದರ ಜೊತೆಗೆ ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ದೀಪಕ್ಗೆ ಹೆಚ್ಚಿನ ವಿಶ್ರಾಂತಿ ನೀಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿಬಂದಿದೆ.
ಇಂಜುರಿ?
ದೀಪಕ್ ಚಹಾರ್ ಸುಮಾರು ಆರು ತಿಂಗಳ ನಂತರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪುನರಾಗಮನ ಮಾಡಿದ್ದರು. ಈ ಹಿಂದೆ ಗಾಯದ ಸಮಸ್ಯೆಯಿಂದಾಗಿ ಅವರು ಸಂಪೂರ್ಣ ಐಪಿಎಲ್ ಸೀಸನ್ ಆಡಲಿಲ್ಲ. ಮೊದಲ ಪಂದ್ಯದಲ್ಲಿ 27 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಈ ಪ್ರವಾಸವು ಚಹರ್‌ಗೆ ತಮ್ಮ ಫಿಟ್‌ನೆಸ್ ಸಾಬೀತುಪಡಿಸಲು ಒಂದು ಅವಕಾಶವಾಗಿದೆ. ಟಿ20 ವಿಶ್ವಕಪ್ ತಂಡದ ಆಯ್ಕೆಗೆ ಹೆಚ್ಚು ಸಮಯ ಉಳಿದಿಲ್ಲ. ಹೀಗಾಗಿ ಚಹಾರ್ ತನ್ನ ಫಿಟ್ನೆಸ್ ಮತ್ತು ಫಾರ್ಮ್ ಅನ್ನು ಪ್ರದರ್ಶಿಸಿ ಆಸ್ಟ್ರೇಲಿಯಾಕ್ಕೆ ತನ್ನ ಟಿಕೆಟ್ ಸೀಲ್ ಮಾಡಲು ಇದು ಉತ್ತಮ ಅವಕಾಶವಾಗಿದೆ. ಇದೀಗ ಎರಡನೇ ಏಕದಿನ ಪಂದ್ಯದಿಂದ ನಿರ್ಗಮಿಸಿರುವ ಕಾರಣ ಅವರ ಫಿಟ್‌ನೆಸ್ ಪ್ರಶ್ನೆಯಾಗಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಚಹಾರ್ ಅವರನ್ನು ತಂಡದಿಂದ ಹೊರಗಿಡಲು ಯಾವುದೇ ಅಧಿಕೃತ ಕಾರಣವನ್ನು ಇನ್ನೂ ಮಂಡಳಿ ಬಹಿರಂಗಪಡಿಸಲಾಗಿಲ್ಲ.
ಟೀಮ್ ಇಂಡಿಯಾ ಪ್ಲೇಯಿಂಗ್ XI: ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
Published On - 9:42 pm, Sat, 20 August 22