ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಮಾಜಿ ವೇಗಿ ಜೂಲನ್ ಗೋಸ್ವಾಮಿ (Jhulan Goswami) ಅವರು ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ಮಹಿಳಾ ತಂಡದ ಮೆಂಟರ್ ಆಗಿ ನೇಮಕವಾಗಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವನ್ನು ಹೊಂದಿದ್ದು, ಇದೀಗ ಟಿಕೆಆರ್ ಮಹಿಳಾ ತಂಡದ ಮಾರ್ಗದರ್ಶಕವಾಗಿ ಜೂಲನ್ ಅವರನ್ನು ನೇಮಿಸಲಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನಲ್ಲಿ ಜೂಲನ್ ಗೋಸ್ವಾಮಿ ಮುಂಬೈ ಇಂಡಿಯನ್ಸ್ (MI) ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ವಿದೇಶಿ ಲೀಗ್ನಲ್ಲಿ ಕಾರ್ಯ ನಿರ್ವಹಿಸಲು ಭಾರತದ ಮಾಜಿ ವೇಗಿ ಸನ್ನದ್ಧರಾಗಿದ್ದಾರೆ.
ಇನ್ನು ಈ ಬಾರಿಯ ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾರತೀಯ ಆಟಗಾರ್ತಿಯರು ಸಹ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಟೀಮ್ ಇಂಡಿಯಾದ ಜೆಮಿಮಾ ರೊಡ್ರಿಗಸ್ ಮತ್ತು ಶಿಖಾ ಪಾಂಡೆ ಆಯ್ಕೆಯಾಗಿದ್ದಾರೆ.
ಈ ತಂಡವನ್ನು ವೆಸ್ಟ್ ಇಂಡೀಸ್ನ ಡಿಯಾಂಡ್ರಾ ಡಾಟಿನ್ ಮುನ್ನಡೆಸಲಿದ್ದು, ಇದೇ ತಂಡದಲ್ಲಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ಜೆಸ್ ಜೊನಾಸ್ಸೆನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲು ಕೆಕೆಆರ್ ಫ್ರಾಂಚೈಸಿ ಮುಂದಾಗಿದೆ.
ಡಿಯಾಂಡ್ರಾ ಡಾಟಿನ್, ಮೆಗ್ ಲ್ಯಾನಿಂಗ್, ಜೆಸ್ ಜೊನಾಸೆನ್, ಜೆಮಿಮಾ ರೊಡ್ರಿಗಸ್, ಶಿಖಾ ಪಾಂಡೆ, ಕಿಸಿಯಾ ನೈಟ್, ಶಮಿಲಾ ಕಾನ್ನೆಲ್, ಜೈದಾ ಜೇಮ್ಸ್, ಸಮರಾ ರಾಮನಾಥ್.
ಇದನ್ನೂ ಓದಿ: James Anderson: 3 ವಿಶ್ವ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಜೇಮ್ಸ್ ಅ್ಯಂಡರ್ಸನ್
ಈ ಬಾರಿಯ ಡಬ್ಲ್ಯೂಸಿಪಿಎಲ್ ಟೂರ್ನಿಯು ಆಗಸ್ಟ್ 21 ರಿಂದ 29 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಬಾರ್ಬಡೋಸ್ ರಾಯಲ್ಸ್, ಗಯಾನಾ ಅಮೆಝಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯಲಿವೆ.