Ashes 2023: ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ (Joe Root) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಆದರೆ ಈ ಬಾರಿ ಬ್ಯಾಟಿಂಗ್ನಿಂದ ಅಲ್ಲ ಎಂಬುದು ವಿಶೇಷ. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ (Australia) ವಿರುದ್ಧದ ಈ ಪಂದ್ಯದಲ್ಲಿ ಜೋ ರೂಟ್ 2 ಅತ್ಯುತ್ತಮ ಕ್ಯಾಚ್ ಹಿಡಿದು ಮಿಂಚಿದರು. ಅದರಲ್ಲೂ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಟ್ರಾವಿಸ್ ಹೆಡ್ ಕ್ಯಾಚ್ ಹಿಡಿಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ಹೆಸರಿನಲ್ಲಿತ್ತು.
ಕುಕ್ 300 ಇನಿಂಗ್ಸ್ಗಳಲ್ಲಿ ಒಟ್ಟು 175 ಕ್ಯಾಚ್ಗಳನ್ನು ಹಿಡಿದು ದಾಖಲೆ ನಿರ್ಮಿಸಿದ್ದರು. ಇದೀಗ ಜೋ ರೂಟ್ 250 ಇನಿಂಗ್ಸ್ಗಳಲ್ಲಿ ಒಟ್ಟು 176 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ವಿಶೇಷ ಎಂದರೆ ಜೋ ರೂಟ್ ಹಾಗೂ ಅಲಿಸ್ಟರ್ ಕುಕ್ ಅವರನ್ನು ಹೊರತುಪಡಿಸಿ ಇಂಗ್ಲೆಂಡ್ನ ಯಾವುದೇ ಫೀಲ್ಡರ್ ಟೆಸ್ಟ್ ಕ್ರಿಕೆಟ್ನಲ್ಲಿ 122 ಕ್ಕಿಂತ ಹೆಚ್ಚಿನ ಕ್ಯಾಚ್ ಹಿಡಿದಿಲ್ಲ. ಇದೀಗ 5 ವರ್ಷಗಳ ಹಿಂದೆ 175 ಕ್ಯಾಚ್ಗಳ ಮೂಲಕ ಇತಿಹಾಸ ನಿರ್ಮಿಸಿದ್ದ ಕುಕ್ ಅವರನ್ನು ಜೋ ರೂಟ್ ಹಿಂದಿಕ್ಕಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (110) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 416 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು 325 ರನ್ಗಳಿಗೆ ಆಲೌಟ್ ಆಯಿತು.
ಇದೀಗ ದ್ವಿತೀಯ ಇನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವು 86 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ನಷ್ಟಕ್ಕೆ 239 ರನ್ ಕಲೆಹಾಕಿದೆ. ಅಲ್ಲದೆ ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯೊಂದಿಗೆ ಒಟ್ಟು 330 ರನ್ ಪೇರಿಸಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲಿ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್) , ಸ್ಟುವರ್ಟ್ ಬ್ರಾಡ್ , ಒಲ್ಲಿ ರಾಬಿನ್ಸನ್ , ಜೋಶ್ ಟಂಗ್ , ಜೇಮ್ಸ್ ಅ್ಯಂಡರ್ಸನ್.
ಇದನ್ನೂ ಓದಿ: Joe Root: ಮೊದಲ ಬಾರಿ ಸ್ಟಂಪ್ ಔಟ್ ಆಗಿ ವಿಶೇಷ ದಾಖಲೆ ಬರೆದ ಜೋ ರೂಟ್
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ , ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ ( ವಿಕೆಟ್ ಕೀಪರ್ ) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮಿನ್ಸ್ (ನಾಯಕ) , ನಾಥನ್ ಲಿಯಾನ್ , ಜೋಶ್ ಹ್ಯಾಝಲ್ವುಡ್.