ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ವಿನ್ ದಿ ಮ್ಯಾಚ್ಸ್ ಎಂಬ ಮಾತಿದೆ. ಅದು ಅಕ್ಷರಶಃ ನಿಜ ಎಂದೆನಿಸಿದ್ದು 2019 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆ. ಏಕೆಂದರೆ ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಆ ಪಂದ್ಯದಲ್ಲಿ ಅಂತಹದೊಂದು ಕ್ಯಾಚ್ ಬಿಟ್ಟು ನ್ಯೂಜಿಲೆಂಡ್ ಸೋತಿದ್ದು ಈಗ ಇತಿಹಾಸ. ಹೌದು, 2019ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ಗೆ 9 ಎಸೆತಗಳಲ್ಲಿ 22 ರನ್ಗಳ ಅವಶ್ಯಕತೆಯಿತ್ತು. ಜಿಮ್ಮಿ ನೀಶಮ್ ಎಸೆತವನ್ನು ಬೆನ್ ಸ್ಟೋಕ್ಸ್ ಲಾಂಗ್ ಆನ್‌ನತ್ತ ಭರ್ಜರಿಯಾಗಿ ಬಾರಿಸಿದರು. ಚೆಂಡು ನೇರವಾಗಿ ಬೌಂಡರಿ ಲೈನ್ನಲ್ಲಿದ್ದ ಟ್ರೆಂಟ್ ಬೌಲ್ಟ್ ಕೈ ಸೇರಿಸಿತು. ಆದರೆ ನಿಯಂತ್ರಣ ತಪ್ಪಿದ ಬೌಲ್ಟ್ ಬೌಂಡರಿ ಲೈನ್ ಅನ್ನು ತುಳಿದಿದ್ದರು. ಬೌಲ್ಟ್ ಮಾಡಿದ ಆ ಒಂದು ಸಣ್ಣ ತಪ್ಪಿನಿಂದಾಗಿ ನ್ಯೂಜಿಲೆಂಡ್ ಗೆಲುವನ್ನು ಇಂಗ್ಲೆಂಡ್ ಕಸಿದುಕೊಂಡಿತು. ಬಳಿಕ ಟೈ ಆದ ಪಂದ್ಯವು, ಸೂಪರ್ನತ್ತ ಸಾಗಿತು. ಅಂತಿಮವಾಗಿ ಇಂಗ್ಲೆಂಡ್ ತಂಡವು ಬೌಂಡರಿ ಲೆಕ್ಕಚಾರದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದೇ ಕಾರಣದಿಂದ ಬುಧವಾರ ಟಿ20 ವಿಶ್ವಕಪ್ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯವು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಏಕೆಂದರೆ ಏಕದಿನ ವಿಶ್ವಕಪ್ ಫೈನಲ್ ಬಳಿಕ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಮತ್ತೆ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. 15 ಓವರ್ವರೆಗೂ ಪಂದ್ಯವು ಇಂಗ್ಲೆಂಡ್ ಹಿಡಿತದಲ್ಲಿತ್ತು. ಕೊನೆಯ 4 ಓವರ್ಗಳಲ್ಲಿ ನ್ಯೂಜಿಲೆಂಡ್ಗೆ ಗೆಲ್ಲಲು 57 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್ಗೆ ಆಗಮಿಸಿದ ಜಿಮ್ಮಿ ನೀಶಮ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕಾಕತಾಳೀಯ ಎಂಬಂತೆ ಈ ಬಾರಿ ಕೂಡ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿದ್ದು ಲಾಂಗ್ ಆನ್ನಲ್ಲಿನ ಒಂದು ಕ್ಯಾಚ್ ಎಂಬುದು ವಿಶೇಷ.
ಹೌದು, 17ನೇ ಓವರ್‌ನಲ್ಲಿ, ಕ್ರಿಸ್ ಜೋರ್ಡನ್ ಎಸೆತವನ್ನು ಜಿಮ್ಮಿ ನೀಶಮ್ ಲಾಂಗ್ ಆನ್‌ನತ್ತ ಬಾರಿಸಿದ್ದರು. ಜಾನಿ ಬೈರ್‌ಸ್ಟೋ ಓಡಿ ಬಂದು ಚೆಂಡು ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ನಿಯಂತ್ರಣ ತಪ್ಪಿದ ಬೈರ್‌ಸ್ಟೋ ಲಿಯಾಮ್ ಲಿವಿಂಗ್ಸ್ಟೋನ್ನತ್ತ ಚೆಂಡೆಸೆದು ರಿಲೇ ಕ್ಯಾಚ್ ಮಾಡಲು ಯತ್ನಿಸಿದರು. ಆದರೆ ಅದಾಗಲೇ ಬೈರ್‌ಸ್ಟೋ ಮೊಣಕಾಲು ಬೌಂಡರಿ ಗೆರೆಗೆ ತಾಗಿತ್ತು. ಅಂಪೈರ್ ಸಿಕ್ಸ್ ಎಂದು ತೀರ್ಪು ನೀಡಿದರು. ಸಿಕ್ಕ ಜೀವದಾನವನ್ನು ಬಳಸಿಕೊಂಡ ನೀಶಮ್ 11 ಎಸೆತಗಳಲ್ಲಿ 27 ರನ್ ಬಾರಿಸಿ ಇಂಗ್ಲೆಂಡ್ ಪರವಿದ್ದ ಪಂದ್ಯವನ್ನು ಸಂಪೂರ್ಣ ನ್ಯೂಜಿಲೆಂಡ್ನತ್ತ ವಾಲಿಸಿದರು. ಅಂತಿಮವಾಗಿ ಡೆರಿಲ್ ಮಿಚೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 19 ಓವರ್‌ನಲ್ಲಿ ನ್ಯೂಜಿಲೆಂಡ್ಗೆ 5 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
2019 ರಲ್ಲಿ ಟ್ರೆಂಟ್ ಬೌಲ್ಟ್ ಬೌಂಡರಿ ಲೈನ್ ತುಳಿದು ಬೆನ್ ಸ್ಟೋಕ್ಸ್ಗೆ ಜೀವದಾನ ನೀಡಿ ಪಂದ್ಯವನ್ನು ಕೈ ಚೆಲ್ಲಿದರೆ, ಕಾಕತಾಳೀಯ ಎಂಬಂತೆ ಈ ಬಾರಿ ಜಾನಿ ಬೈರ್ ಸ್ಟೋ ಕ್ಯಾಚ್ ಹಿಡಿದು ಬೌಂಡರಿ ಲೈನ್ ಮುಟ್ಟುವ ಮೂಲಕ ಜಿಮ್ಮಿ ನೀಶಮ್ಗೆ ಜೀವದಾನ ನೀಡಿ ಪಂದ್ಯವನ್ನು ಕಳೆದುಕೊಂಡರು. ಇಲ್ಲಿ ಮತ್ತೊಂದು ವಿಶೇಷ ಎಂದರೆ ಹೀಗೆ ಕ್ಯಾಚ್ ನೀಡಿ ಜೀವದಾನ ಪಡೆದಿದ್ದು ಎಡಗೈ ಬ್ಯಾಟರ್ಗಳು ಎಂಬುದು. ಅಷ್ಟೇ ಅಲ್ಲದೆ ಇಬ್ಬರೂ ಕೂಡ ಆಲ್ರೌಂಡರ್ ಎಂಬುದು. ಒಟ್ಟಿನಲ್ಲಿ 2019ರ ಏಕದಿನ ವಿಶ್ವಕಪ್ ಫೈನಲ್ ಬಳಿಕ, ಮತ್ತೊಮ್ಮೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ರೋಚಕ ಹಣಾಹಣಿಯ ಪಂದ್ಯದೊಂದಿಗೆ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಒದಗಿಸಿದರು.
This game is bloody cruel…
RHS : @cricketworldcup 2019 final
LHS : @T20WorldCup semi finalAnd as @nassercricket said @jbairstow21’s #TrentBoult moment
Or May be @JimmyNeesh’s @benstokes38 moment@englandcricket @BLACKCAPS pic.twitter.com/2I565rmTUi— Imran Munawar (@Imran_Munawar99) November 10, 2021
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ
(Jonny Bairstow has a ‘Trent Boult moment’ from 2019 final, touches rope after taking a catch)