Jonny Bairstow vs Virat Kohli: ಕರಡಿಯನ್ನು ಕೆಣಕಿದ್ರಾ ಕೊಹ್ಲಿ? ಈ ಬಗ್ಗೆ ಬೈರ್​ಸ್ಟೋವ್ ಹೇಳಿದ್ದೇನು?

| Updated By: ಪೃಥ್ವಿಶಂಕರ

Updated on: Jul 04, 2022 | 6:15 PM

Jonny Bairstow vs Virat Kohli: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ವಾಕ್ಸಮರದ ವೇಳೆ ಬೈರ್​ಸ್ಟೋವ್ ಕಲೆಹಾಕಿದ್ದು ಕೇವಲ 13 ರನ್​​. ಈ ಹದಿಮೂರು ರನ್ ಕಲೆಹಾಕಲು ಬರೋಬ್ಬರಿ 61 ಎಸೆತಗಳನ್ನು ಎದುರಿಸಿದ್ದರು.

Jonny Bairstow vs Virat Kohli: ಕರಡಿಯನ್ನು ಕೆಣಕಿದ್ರಾ ಕೊಹ್ಲಿ? ಈ ಬಗ್ಗೆ ಬೈರ್​ಸ್ಟೋವ್ ಹೇಳಿದ್ದೇನು?
Virat Kohli vs Jonny Bairstow
Follow us on

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಕಾದಾಟ ಕಂಡು ಬರುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕಲೆಹಾಕಿದ 416 ರನ್‌ಗಳಿಗೆ ಉತ್ತರವಾಗಿ ಆತಿಥೇಯರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲೌಟ್ ಆಗಿದೆ. ಇತ್ತ ಫಸ್ಟ್​ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ. ಇನ್ನು ಎರಡು ದಿನದಾಟ ಬಾಕಿಯಿದ್ದು, ಹೀಗಾಗಿ ಈ ಪಂದ್ಯದ ಫಲಿತಾಂಶವನ್ನು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ 3ನೇ ದಿನದಾಟದೊಂದಿಗೆ ವಾಕ್ಸಮರ ಶುರುವಾಗಿದ್ದು, ಹೀಗಾಗಿ ಕೊನೆಯ 2 ದಿನದಾಟದಲ್ಲಿ ಆಟಗಾರರ ನಡುವಿನ ಮಾತಿನ ಚಕಮಕಿಯನ್ನು ನಿರೀಕ್ಷಿಸಬಹುದು.

ಏಕೆಂದರೆ ಮೂರನೇ ದಿನದಾಟದ ವೇಳೆ ವಿರಾಟ್ ಕೊಹ್ಲಿ ಹಾಗೂ ಜಾನಿ ಬೈರ್ ಸ್ಟೋ ನಡುವೆ ತೀವ್ರ ವಾಗ್ವಾದ ನಡೆದಿದೆ. 32ನೇ ಓವರ್​ ವೇಳೆ ಬೈರ್​ಸ್ಟೋವ್​ ಅವರನ್ನು ಕೆರಳಿಸಲು ಕೊಹ್ಲಿ ಕೆಲ ಮಾತುಗಳನ್ನು ಆಡಿದ್ದರು. ಇದರಿಂದ ಕುಪಿತಗೊಂಡಿದ್ದ ಬೈರ್​ಸ್ಟೋವ್ ಸಹ ತಿರುಗೇಟು ನೀಡಿದರು. ಇಬ್ಬರ ನಡುವಿನ ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ಫೀಲ್ಡ್​ ಅಂಪೈರ್​ಗಳು ಮಧ್ಯಪ್ರವೇಶಿಸಬೇಕಾಯಿತು. ಆ ಬಳಿಕ ಅಬ್ಬರಿಸಿದ್ದ ಬೈರ್​ಸ್ಟೋವ್ ಶತಕ ಸಿಡಿಸಿ ಮಿಂಚಿದ್ದರು.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಇನ್ನು ಮೂರನೇ ದಿನದಾಟದ ಬಳಿಕ ಮೈದಾನದಲ್ಲಿನ ವಾಕ್ಸಮರದ ಬಗ್ಗೆ ಬೈರ್‌ಸ್ಟೋವ್ ಪ್ರತಿಕ್ರಿಯಿಸಿದ್ದಾರೆ . ಪಂದ್ಯದ ನಂತರ ಮಾತನಾಡಿದ ಇಂಗ್ಲೆಂಡ್​ ಬ್ಯಾಟ್ಸ್‌ಮನ್​ಗೆ ಶತಕದ ಬಗ್ಗೆ ಕೇಳಲಾಗಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಕರಡಿಯನ್ನು ಕೆಣಕಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆಯನ್ನು ಬೈರ್​ಸ್ಟೋವ್ ಮುಂದಿಡಲಾಗಿತ್ತು. ಇದಕ್ಕೆ ಜಾನಿ ಬೈರ್​​ಸ್ಟೋ ವರ್ಣನೆ ತುಂಬಾ ಚೆನ್ನಾಗಿದೆ ಎಂದು ನಗುತ್ತಾ ಉತ್ತರಿಸಿದರು.

ಮಾತು ಮುಂದುವರೆಸಿದ ಬೈರ್​ಸ್ಟೋವ್, ನಾವು ಕಳೆದ 10 ವರ್ಷಗಳಿಂದ ಪರಸ್ಪರ ವಿರುದ್ಧ ಆಡುತ್ತಿದ್ದೇವೆ. ಈಗ ನಡೆದಿರುವುದು ತಮಾಷೆಯ ಭಾಗ ಅಷ್ಟೇ. ನಾವು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇವೆ. ನಾವಿಬ್ಬರೂ ಸ್ಪರ್ಧಾತ್ಮಕವಾಗಿದ್ದೇವೆ. ನಮ್ಮ ಕೈಲಾದಷ್ಟು ತಂಡವನ್ನು ಗೆಲ್ಲಿಸಲು ಪ್ರಯತ್ನ ಮಾಡಬೇಕು. ಆಟದಲ್ಲಿ ನಿಮ್ಮ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಬಯಸುತ್ತೀರಿ ಅಂದರೆ ಅದಕ್ಕೆ ಬೇಕಾದುದನ್ನು ಮಾಡುತ್ತಾರೆ. ಇದು ಆಟದ ಭಾಗವಾಗಿದೆ ಎಂದು ಬೈರ್​ಸ್ಟೋವ್ ಹೇಳಿದ್ದಾರೆ.

ಅಲ್ಲದೆ ನನ್ನ ಹಾಗೂ ವಿರಾಟ್ ಕೊಹ್ಲಿಯ ನಡುವೆ ಅಂತಹ ಯಾವುದೇ ವೈಮನಸ್ಸು ಇಲ್ಲ. ಈಗಲೂ ನಾವಿಬ್ಬರೂ ಜೊತೆಯಾಗಿ ಡಿನ್ನರ್​ಗೆ ಹೋಗಬಹುದು ಎಂಬ ನಂಬಿಕೆಯಿದೆ. ಹಾಗಾಗಿ ನಡೆದಿರುವ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆಯಿಲ್ಲ. ಅದೆಲ್ಲವೂ ಆಟದ ಒಂದು ಭಾಗ ಅಷ್ಟೇ ಎಂದು ಜಾನಿ ಬೈರ್​ಸ್ಟೋವ್ ಹೇಳಿದ್ದಾರೆ.

ವಿಶೇಷ ಎಂದರೆ 2ನೇ ದಿನದಾಟದ ವೇಳೆ ಮೈದಾನದಲ್ಲಿ ಜೊತೆಯಾಗಿ ಹಾಸ್ಯ ಚಟಾಕಿ ಹಾರಿಸುತ್ತಾ ನಗುತ್ತಾ ಹೆಗಲ ಮೇಲೆ ಕೈ ಹಾಕಿ ಹೋಗುತ್ತಿದ್ದ ಬೈರ್​ಸ್ಟೋವ್ ಹಾಗೂ ವಿರಾಟ್ ಕೊಹ್ಲಿ ಮೂರನೇ ದಿನದಾಟದಲ್ಲಿ ಜಗಳಕ್ಕೆ ಇಳಿದಿದ್ದರು. ಇತ್ತ ಬರ್ಮಿಂಗ್​ಹ್ಯಾಮ್​ನ ಹವಾಮಾನ ಬದಲಾಗುತ್ತಿದ್ದಂತೆ ಕೊಹ್ಲಿ-ಬೈರ್​ಸ್ಟೋವ್ ಬದಲಾದ್ರು ಎಂದು ಸ್ಲೆಡ್ಜಿಂಗ್​ ಬಗ್ಗೆ ಕಾಮೆಂಟೇಟರ್ಸ್​ ವಿಶ್ಲೇಷಿಸಿದ್ದರು. ಇದೀಗ ಇದೆಲ್ಲವೂ ಆಟದ ಭಾಗವಷ್ಟೇ ಎಂದೇಳುವ ಮೂಲಕ ಜಾನಿ ಬೈರ್​​ಸ್ಟೋವ್ ಎಲ್ಲಾ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ವಾಕ್ಸಮರದ ವೇಳೆ ಬೈರ್​ಸ್ಟೋವ್ ಕಲೆಹಾಕಿದ್ದು ಕೇವಲ 13 ರನ್​​. ಈ ಹದಿಮೂರು ರನ್ ಕಲೆಹಾಕಲು ಬರೋಬ್ಬರಿ 61 ಎಸೆತಗಳನ್ನು ಎದುರಿಸಿದ್ದರು. ಆದರೆ ಕೆಣಕಿದ ಬಳಿಕ ಕೆಂಡವಾದ ಬೈರ್​ಸ್ಟೋವ್ ಅಕ್ಷರಶಃ ಅಬ್ಬರಿಸಿದರು. ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಬೈರ್​ಸ್ಟೋವ್ ಕೇವಲ 119 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಂದರೆ ವಾಕ್ಸಮರದ ಬಳಿಕ ಕೇವಲ 58 ಎಸೆತಗಳಲ್ಲಿ ಬೈರ್​ಸ್ಟೋವ್ 87 ರನ್​ಗಳನ್ನು ಚಚ್ಚಿ ಬಿಸಾಕಿದ್ದರು. ಈ ಮೂಲಕ 14 ಫೋರ್ ಹಾಗೂ 2 ಸಿಕ್ಸರ್​ಗಳನ್ನು ಒಳಗೊಂಡಂತೆ 106 ರನ್​ ಬಾರಿಸಿ ಮಿಂಚಿದ್ದರು.

 

 

Published On - 11:47 am, Mon, 4 July 22