ENG vs IND: ಇಂದು ಟೀಮ್ ಇಂಡಿಯಾ ತಪ್ಪು ಮಾಡಿದ್ರೆ, ಸೋಲು ಕಟ್ಟಿಟ್ಟ ಬುತ್ತಿ..!
IND vs ENG: ಒಂದು ವೇಳೆ ನಾಲ್ಕನೇ ದಿನದಾಟವನ್ನು ಸಂಪೂರ್ಣವಾಗಿ ಆಡಿದರೆ ಈ ಮೊತ್ತವು 500ರ ಗಡಿದಾಟಬಹುದು. ಅಲ್ಲದೆ 5ನೇ ದಿನದಾಟದ ಮೊದಲ ಸೆಷನ್ನಲ್ಲಿ ಡಿಕ್ಲೇರ್ ಮಾಡಿಕೊಂಡರೆ ಮಾತ್ರ ಇಂಗ್ಲೆಂಡ್ ತಂಡದ ಗೆಲುವನ್ನು ತಪ್ಪಿಸಬಹುದು.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ 416 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವು 284 ರನ್ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್ನ 132 ರನ್ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್ಗಳಿಸಿದೆ. ಈ ಮೂಲಕ ಒಟ್ಟು 257 ರನ್ಗಳ ಮುನ್ನಡೆ ಪಡೆದುಕೊಂಡಿದೆ. ವಿಶೇಷ ಎಂದರೆ ಉಭಯ ತಂಡಗಳಿಗೂ ನಾಲ್ಕನೇ ದಿನದಾಟ ಬಹಳ ಮುಖ್ಯವಾಗಿದೆ. ಏಕೆಂದರೆ ನಾಲ್ಕನೇ ದಿನದಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ ಅವರೇ ಪಂದ್ಯ ಗೆಲ್ಲುವ ಚಾನ್ಸ್ ಜಾಸ್ತಿಯಿದೆ.
ಸದ್ಯ ಟೀಮ್ ಇಂಡಿಯಾ ಮೇಲುಗೈ ಹೊಂದಿದ್ದರೂ ಬೃಹತ್ ಮುನ್ನಡೆ ಪಡೆದುಕೊಂಡಿಲ್ಲ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ನಾಲ್ಕನೇ ದಿನದಾಟವನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಮಾತ್ರ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಅದರಲ್ಲೂ ನಾಲ್ಕನೇ ದಿನದಾಟದೊಳಗೆ ಭಾರತ ತಂಡ ಆಲೌಟ್ ಆದರೆ ಇಂಗ್ಲೆಂಡ್ ತಂಡಕ್ಕೆ ಗೆಲ್ಲುವ ಅವಕಾಶ ಇರಲಿದೆ.
ಏಕೆಂದರೆ ಭಾರತ ತಂಡವು ಕನಿಷ್ಠ ಎಂದರೂ 450 ರನ್‌ಗಳಿಗಿಂತ ಮುನ್ನಡೆ ಪಡೆಯಬೇಕಿದೆ. ಒಂದು ವೇಳೆ 350 ರ ಅಸುಪಾಸಿನ ಟಾರ್ಗೆಟ್ ನೀಡಿದರೆ ಇಂಗ್ಲೆಂಡ್ ತಂಡ ಚೇಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಇತ್ತೀಚೆಗೆ ಮುಕ್ತಾಯವಾಗಿದ್ದ ನ್ಯೂಜಿಲೆಂಡ್ ವಿರುದ್ದ 3ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಕೊನೆಯ ದಿನದಾಟದಲ್ಲಿ ಚೇಸ್ ಮಾಡಿ ಗೆದ್ದುಕೊಂಡಿತ್ತು. ಅದು ಕೂಡ 22 ಓವರ್ಗಳನ್ನು ಬಾಕಿಯಿರಿಸಿ 299 ರನ್ಗಳನ್ನು ಚೇಸ್ ಮಾಡಿ ಎಂಬುದು ವಿಶೇಷ.
ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಸಂಪೂರ್ಣವಾಗಿ ಬ್ಯಾಟಿಂಗ್ ಮಾಡುವ ಮೂಲಕ 5ನೇ ದಿನದಾಟದಲ್ಲಿ ಡಿಕ್ಲೇರ್ ಘೋಷಿಸುವುದು ಉತ್ತಮ. ಏಕೆಂದರೆ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಸರಣಿ ಟೀಮ್ ಇಂಡಿಯಾ ವಶವಾಗಲಿದೆ. ಏಕೆಂದರೆ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆಯಲ್ಲಿದ್ದು, ಹೀಗಾಗಿ ಡ್ರಾಗೊಂಡರೂ ಸರಣಿ ಜಯ ಟೀಮ್ ಇಂಡಿಯಾ ಪಾಲಾಗಲಿದೆ.
ಇತ್ತ ಐದನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಚೇಸ್ ಮಾಡಿ ಗೆಲ್ಲುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ. ಏಕೆಂದರೆ ಸರಣಿ ಸಮಬಲಗೊಳಿಸಬೇಕಿದ್ದರೆ ಇಂಗ್ಲೆಂಡ್ಗೆ ಗೆಲುವು ಅನಿವಾರ್ಯ. ಹೀಗಾಗಿ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಧ್ಯತೆ ಹೆಚ್ಚು. ಹಾಗಾಗಿ ನಾಲ್ಕನೇ ದಿನದಾಟದಲ್ಲಿ ಸಂಪೂರ್ಣ ಬ್ಯಾಟಿಂಗ್ ಮಾಡುವ ಮೂಲಕ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಕೊನೆಯ ದಿನದಾಟದಲ್ಲಿ ಕನಿಷ್ಠ ಎಂದರೂ 450 ರನ್ಗಳ ಟಾರ್ಗೆಟ್ ನೀಡಬೇಕಿದೆ. ಸದ್ಯ 257 ರನ್ಗಳ ಮುನ್ನಡೆ ಹೊಂದಿರುವ ಟೀಮ್ ಇಂಡಿಯಾ 200 ರನ್ ಕಲೆಹಾಕಿದರೂ ಬೃಹತ್ ಮೊತ್ತದ ಟಾರ್ಗೆಟ್ ಆಗಲಿದೆ.
ಒಂದು ವೇಳೆ ನಾಲ್ಕನೇ ದಿನದಾಟವನ್ನು ಸಂಪೂರ್ಣವಾಗಿ ಆಡಿದರೆ ಈ ಮೊತ್ತವು 500ರ ಗಡಿದಾಟಬಹುದು. ಅಲ್ಲದೆ 5ನೇ ದಿನದಾಟದ ಮೊದಲ ಸೆಷನ್ನಲ್ಲಿ ಡಿಕ್ಲೇರ್ ಮಾಡಿಕೊಂಡರೆ ಮಾತ್ರ ಇಂಗ್ಲೆಂಡ್ ತಂಡದ ಗೆಲುವನ್ನು ತಪ್ಪಿಸಬಹುದು. ಒಂದು ವೇಳೆ ಟೀಮ್ ಇಂಡಿಯಾ ಟಾರ್ಗೆಟ್ 400ರ ಅಸುಪಾಸಿನಲ್ಲಿದ್ದರೆ ಇಂಗ್ಲೆಂಡ್ ತಂಡದಿಂದ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಎದುರು ನೋಡಬಹುದು. ಹೀಗಾಗಿ 4ನೇ ದಿನದಾಟವು ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಎಚ್ಚರಿಕೆಯಿಂದ ಆಡಬೇಕಾದ ಅನಿವಾರ್ಯತೆಯಿದೆ.
ಒಟ್ಟಿನಲ್ಲಿ ಮೊದಲ 3 ದಿನಗಳಲ್ಲಿ ನೀರಸವಾಗಿ ಸಾಗಿದ್ದ ಪಂದ್ಯವು ಇದೀಗ 4ನೇ ದಿನದಾಟದ ಕುತೂಹಲಕ್ಕೆ ಬಂದು ನಿಂತಿದೆ. ಸದ್ಯ 3 ವಿಕೆಟ್ ಕಳೆದುಕೊಂಡು 2ನೇ ಇನಿಂಗ್ಸ್ನಲ್ಲಿ 125 ರನ್ ಕಲೆಹಾಕಿರುವ ಟೀಮ್ ಇಂಡಿಯಾ 4ನೇ ದಿನದಾಟದಲ್ಲಿ ಎಷ್ಟು ರನ್ ಬಾರಿಸಲಿದೆ ಎಂಬುದರ ಮೇಲೆ ಇಡೀ ಪಂದ್ಯ ಫಲಿತಾಂಶ ನಿಂತಿದೆ.
Published On - 11:07 am, Mon, 4 July 22