ಟೀಮ್ ಇಂಡಿಯಾ (Team India) ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (Cheteshwar Pujara) ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ನಲ್ಲಿ (Royal London Cup) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಏಕದಿನ ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯ ಗ್ರೂಪ್-ಎ ನಲ್ಲಿ ನಡೆದ ಪಂದ್ಯದಲ್ಲಿ ವಾರ್ವಿಕ್ಶೈರ್ ಹಾಗೂ ಸಸೆಕ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಾರ್ವಿಕ್ಶೈರ್ ತಂಡದ ಪರ ಆರಂಭಿಕ ಆಟಗಾರ ರೋಬಾರ್ಟ್ ಯಾಟ್ಸ್ 111 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 114 ರನ್ ಬಾರಿಸಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೈಕೆಲ್ ಬರ್ಗಸ್ 58 ರನ್ ಸಿಡಿಸುವುದರೊಂದಿಗೆ ವಾರ್ವಿಕ್ಶೈರ್ ತಂಡವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿದರು. ಈ ಬೃಹತ್ ಗುರಿ ಬೆನ್ನತ್ತಿದ ಸಸೆಕ್ಸ್ ತಂಡಕ್ಕೆ ಒಲಿಸ್ಟರ್ ಓರ್ ಉತ್ತಮ ಆರಂಭ ಒದಗಿಸಿದ್ದರು.
81 ರನ್ ಬಾರಿಸುವ ಮೂಲಕ ಚೇಸಿಂಗ್ಗೆ ಉತ್ತಮ ಅಡಿಪಾಯ ಹಾಕಿಕೊಟ್ಟು ಒಲಿಸ್ಟರ್ ಓರ್ ವಿಕೆಟ್ ಒಪ್ಪಿಸಿದ್ದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಸೆಕ್ಸ್ ತಂಡದ ನಾಯಕ ಚೇತೇಶ್ವರ ಪೂಜಾರ ಎಲ್ಲರೂ ನಿಬ್ಬೆರಗಾಗುವಂತಹ ಇನಿಂಗ್ಸ್ ಆಡಿದರು.
ವಾರ್ವಿಕ್ಶೈರ್ ತಂಡದ ಬೌಲರ್ಗಳ ಬೆಂಡೆತ್ತಿದ ಪೂಜಾರ ವೇಗಿ ಲಿಯಾಮ್ ನಾರ್ವೆಲ್ ಎಸೆದ 45ನೇ ಓವರ್ನಲ್ಲಿ ಬರೋಬ್ಬರಿ 22 ರನ್ ಚಚ್ಚಿದ್ದರು. ಅಷ್ಟೇ ಅಲ್ಲದೆ ಕೇವಲ 73 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಬ್ಯಾಟ್ ಮೇಲೆಕ್ಕೆತ್ತಿದರು.
ಇನ್ನು ತಮ್ಮ ಈ ಸ್ಪೋಟಕ ಇನಿಂಗ್ಸ್ನಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಬಾರಿಸಿ ಅಬ್ಬರಿಸಿದರು. ಅಂತಿಮವಾಗಿ 79 ಎಸೆತಗಳಲ್ಲಿ 107 ರನ್ಗಳಿಸಿ ಪೂಜಾರ 49ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಭಾರತೀಯ ಆಟಗಾರನ ಈ ವಿಕೆಟ್ ವಾರ್ವಿಕ್ಶೈರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಏಕೆಂದರೆ ಅಂತಿಮವಾಗಿ ಸಸೆಕ್ಸ್ ತಂಡವು 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ವಾರ್ವಿಕ್ಶೈರ್ ತಂಡವು 4 ರನ್ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.
4 2 4 2 6 4
TWENTY-TWO off the 47th over from @cheteshwar1. ? pic.twitter.com/jbBOKpgiTI
— Sussex Cricket (@SussexCCC) August 12, 2022
ಈ ಸೋಲಿನ ಹೊರತಾಗಿಯೂ ಸಸೆಕ್ಸ್ ತಂಡದ ನಾಯಕ ಚೇತೇಶ್ವರ ಪೂಜಾರ ಅವರ ಸಿಡಿಲಬ್ಬರದ ಬ್ಯಾಟಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಆಟಗಾರ ಇದೀಗ ಸಿಡಿಲಬ್ಬರದ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನು ಇಂಗ್ಲೆಂಡ್ ಪಿಚ್ನಲ್ಲಿ ನಿರೂಪಿಸಿರುವುದು ವಿಶೇಷ.