Mayank Agarwal: ತೂಫಾನ್ ಬ್ಯಾಟಿಂಗ್: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಮಯಾಂಕ್
Maharaja Trophy 2022: ಈ ವೇಳೆ ರೋಹನ್ ಕದಮ್ 52 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 84 ರನ್ ಬಾರಿಸಿದರೆ, ಶರತ್ 45 ಎಸೆತಗಳಲ್ಲಿ 51 ರನ್ಗಳಿಸಿದರು.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಲೀಗ್ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಟೂರ್ನಿಯ 12ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಶಿವಮೊಗ್ಗ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕನ ನಿರ್ಧಾರ ತಪ್ಪು ಎಂಬಂತೆ ಶಿವಮೊಗ್ಗ ಸ್ಟೈಕರ್ಸ್ ತಂಡದ ಆರಂಭಿಕರು ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಆರಂಭಿಕರಾಗಿ ಕಣಕ್ಕಿಳಿದ ರೋಹನ್ ಕದಮ್ ಹಾಗೂ ಶರತ್ ಬಿಆರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಜೋಡಿ ಮೊದಲ ವಿಕೆಟ್ಗೆ 116 ರನ್ಗಳ ಜೊತೆಯಾಟವಾಡುವ ಮೂಲಕ ಅಬ್ಬರಿಸಿದರು.
ಈ ವೇಳೆ ರೋಹನ್ ಕದಮ್ 52 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 84 ರನ್ ಬಾರಿಸಿದರೆ, ಶರತ್ 45 ಎಸೆತಗಳಲ್ಲಿ 51 ರನ್ಗಳಿಸಿದರು. ಆ ಬಳಿಕ ಬಂದ ಶಿವಮೊಗ್ಗ ತಂಡದ ನಾಯಕ ಕೃಷ್ಣಪ್ಪ ಗೌತಮ್ 12 ಎಸೆತಗಳಲ್ಲಿ 18 ರನ್ ಬಾರಿಸಿದರೆ, ಡಿ ಅವಿನಾಶ್ 13 ರನ್ಗಳಿಸಿದರು. ಮಳೆಯ ಭೀತಿಯ ಕಾರಣ 19 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಶಿವಮೊಗ್ಗ ಸ್ಟೈಕರ್ಸ್ ತಂಡವು 2 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು.
114 ಎಸೆತಗಳಲ್ಲಿ 173 ರನ್ಗಳ ಗುರಿ ಪಡೆದ ಬೆಂಗಳೂರು ಬ್ಲಾಸ್ಟರ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್ ಬ್ಲಾಸ್ಟಿಂಗ್ ಇನಿಂಗ್ಸ್ ಆರಂಭಿಸಿದ್ದರು. ಎಲ್ಆರ್ ಚೇತನ್ ಜೊತೆಗೂಡಿ ಮೊದಲ 5 ಓವರ್ಗಳಲ್ಲಿ 69 ರನ್ ಚಚ್ಚಿದ ಮಯಾಂಕ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು. ಈ ವೇಳೆ ಕೇವಲ 15 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 34 ರನ್ ಬಾರಿಸಿದ ಚೇತನ್ ದೇವಯ್ಯಗೆ ವಿಕೆಟ್ ಒಪ್ಪಿಸಿದರು.
ಆದರೆ ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ ಮಯಾಂಕ್ ಶಿವಮೊಗ್ಗ ಬೌಲರ್ಗಳ ಬೆಂಡೆತ್ತಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶೇಷ ಎಂದರೆ ಅಷ್ಟರಲ್ಲಾಗಲೇ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಗುರಿಯ ಸಮೀಪಕ್ಕೆ ಬಂದು ನಿಂತಿತು.
ಅಂತಿಮವಾಗಿ ಕೇವಲ 49 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಅಜೇಯ 102 ರನ್ ಬಾರಿಸುವ ಮೂಲಕ ಮಯಾಂಕ್ ಅಗರ್ವಾಲ್ ತಂಡವನ್ನು ಗುರಿ ಮುಟ್ಟಿಸಿದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ಅನೀಶ್ ಕೆವಿ 30 ಎಸೆತಗಳಲ್ಲಿ 35 ರನ್ ಬಾರಿಸಿದರು. ಅದರಂತೆ 15.4 ಓವರ್ಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು 1 ವಿಕೆಟ್ ನಷ್ಟಕ್ಕೆ 176 ರನ್ಗಳಿಸಿತು. ಈ ಮೂಲಕ 9 ವಿಕೆಟ್ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಇತ್ತ ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.