ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಹಾಗೂ ಸಿಎಸ್‌ಕೆ (CSK) ಫ್ರಾಂಚೈಸಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಕೆಲ ದಿನಗಳ ಹಿಂದೆಯೇ ಜಗಜ್ಜಾಹೀರಾಗಿತ್ತು. ಇದೀಗ ಅದನ್ನು ಮತ್ತಷ್ಟು ಪುಷ್ಠೀಕರಿಸುವಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದು ಕೂಡ ರವೀಂದ್ರ ಜಡೇಜಾ ಸಿಎಸ್‌ಕೆ ತಂಡವನ್ನು ತೊರೆಯಲಿದ್ದಾರೆ ಎನ್ನುವ ಶಾಕಿಂಗ್ ನ್ಯೂಸ್. ಅಂದರೆ ರವೀಂದ್ರ ಜಡೇಜಾ ಸದ್ಯ ಸಿಎಸ್‌ಕೆ ಫ್ರಾಂಚೈಸಿಯ ಸಂಪರ್ಕದಲ್ಲಿಲ್ಲ. ಸಿಎಸ್‌ಕೆ ಫ್ರಾಂಚೈಸಿ ವಿರುದ್ದ ಮುನಿಸಿಕೊಂಡಿರುವ ಜಡ್ಡು ಎಲ್ಲಾ ರೀತಿಯ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಐಪಿಎಲ್ 16ನೇ ಸೀಸನ್ನಲ್ಲಿ ಜಡ್ಡು ಸಿಎಸ್‌ಕೆ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಐಪಿಎಲ್ ಸೀಸನ್ 15 ನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಜಡೇಜಾರನ್ನು ನಾಯಕರಾಗಿ ಆಯ್ಕೆ ಮಾಡಿಕೊಂಡಿತು. ಆದರೆ ತಂಡದ ಕಳಪೆ ಪ್ರದರ್ಶನದ ನಂತರ ಅವರು ನಾಯಕತ್ವವನ್ನು ತೊರೆದರು. ಇದಾದ ಬಳಿಕ ಎಂಎಸ್ ಧೋನಿ ಮತ್ತೆ ತಂಡವನ್ನು ಮುನ್ನಡೆಸಿದರು. ಆದರೆ ನಾಯಕತ್ವ ತೊರೆದ ಬಳಿಕ ಜಡೇಜಾ ಗಾಯದ ಕಾರಣ ಸಂಪೂರ್ಣ ಪಂದ್ಯವನ್ನು ಆಡಿರಲಿಲ್ಲ.
ಇದೀಗ ಜಡೇಜಾ ಹಾಗೂ ಸಿಎಸ್‌ಕೆ ಫ್ರಾಂಚೈಸಿ ಮುನಿಸಿಕೊಂಡಿರುವುದು ಸ್ಪಷ್ಟವಾಗಿದೆ. ಏಕೆಂದರೆ ರವೀಂದ್ರ ಜಡೇಜಾ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಐಪಿಎಲ್ 2022 ರ ಬಳಿಕ ಪರಸ್ಪರ ಸಂಪರ್ಕದಲ್ಲಿಲ್ಲ. ಐಪಿಎಲ್ 15ನೇ ಸೀಸನ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಿಎಸ್‌ಕೆ ತಂಡಕ್ಕೆ ಸಂಬಂಧಿಸಿದ ಪೋಸ್ಟ್ಗಳನ್ನು ಜಡೇಜಾ ಡಿಲೀಟ್ ಕೂಡ ಮಾಡಿದ್ದರು. ಇದೀಗ ಸಿಎಸ್‌ಕೆ ಫ್ರಾಂಚೈಸಿ ಜೊತೆ ಜಡ್ಡು ಯಾವುದೇ ಸಂಪರ್ಕದಲ್ಲಿ ಇರದ ಕಾರಣ ತಂಡವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ.
ಐಪಿಎಲ್2022 ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ರವೀಂದ್ರ ಜಡೇಜಾ ಅವರನ್ನು ಗರಿಷ್ಠ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಮತ್ತೊಂದೆಡೆ ಎಂಎಸ್ ಧೋನಿ ಪಡೆದದ್ದು ಕೇವಲ 12 ಕೋಟಿ ರೂ. ಮಾತ್ರ. ಧೋನಿ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ತಂಡದ ದುಬಾರಿ ಆಟಗಾರ ಜಡೇಜಾ ಅವರಿಗೆ ನಾಯಕನ ಪಟ್ಟ ಕೂಡ ನೀಡಲಾಗಿತ್ತು.
ಆದರೆ ಟೂರ್ನಿಯ ನಡುವೆ ಜಡೇಜಾ ಹಾಗೂ ಸಿಎಸ್‌ಕೆ ಮ್ಯಾನೇಜ್ಮೆಂಟ್ ನಡುವೆ ಅಹಿತಕರ ಘಟನೆಗಳು ನಡೆದಿವೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಜಡೇಜಾ ನಾಯಕತ್ವವನ್ನು ತೊರೆದಿದ್ದರು. ಅಷ್ಟೇ ಅಲ್ಲದೆ ಆ ಬಳಿಕ ತಂಡದಿಂದ ಹೊರಗುಳಿದ ಜಡ್ಡು ಸಿಎಸ್‌ಕೆ ಜೊತೆಗೆ ಯಾವುದೇ ಸಂಪರ್ಕದಲ್ಲಿಲ್ಲ. ಹೀಗಾಗಿಯೇ ಮುಂದಿನ ಸೀಸನ್ನಲ್ಲಿ ಜಡೇಜಾ ಮತ್ತೆ ಸಿಎಸ್‌ಕೆ ಪರ ಆಡುವುದು ಅನುಮಾನ.
ಅಲ್ಲದೆ ಟಿ20 ವಿಶ್ವಕಪ್ ಬಳಿಕ ಜಡೇಜಾ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಂದರೆ ವಿಶ್ವಕಪ್ನಲ್ಲಿ ಜಡೇಜಾ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿಬಂದರೆ ಅವರು ಸಿಎಸ್‌ಕೆ ತಂಡವನ್ನು ತೊರೆಯುವುದು ಖಚಿತಪಡಿಸಲಿದ್ದಾರೆ. ಇತ್ತ ಸಿಎಸ್‌ಕೆ ಫ್ರಾಂಚೈಸಿ ರವೀಂದ್ರ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದರೂ ಅವರು ಅದರ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ. ಇದೇ ಕಾರಣದಿಂದಾಗಿ ಸಿಎಸ್‌ಕೆ ಮ್ಯಾನೇಜ್ಮೆಂಟ್ ಜೊತೆಗಿನ ಎಲ್ಲಾ ರೀತಿಯ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ರವೀಂದ್ರ ಜಡೇಜಾ ಮುಂದಿನ ಐಪಿಎಲ್ಗಾಗಿ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಇತ್ತ ಇತರೆ ಫ್ರಾಂಚೈಸಿಗಳು ಕೂಡ ಸಿಎಸ್‌ಕೆ ತಂಡದಿಂದ ಜಡೇಜಾ ಹೊರಬರುವುದನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಹರಾಜಿನಲ್ಲಿ ಕಾಣಿಸಿಕೊಂಡರೆ ಎಡಗೈ ಆಲ್ರೌಂಡರ್ ಕೋಟಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಏಕೆಂದರೆ ಐಪಿಎಲ್ನಲ್ಲಿ ಇದುವರೆಗೆ 210 ಪಂದ್ಯಗಳನ್ನು ಆಡಿರುವ ಜಡೇಜಾ 132 ವಿಕೆಟ್ ಪಡೆದಿದ್ದಾರೆ. 16 ರನ್‌ಗೆ 5 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ. ಹಾಗೆಯೇ 2502 ರನ್ ಕೂಡ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿದ್ದರು. ಅಂದರೆ 100 ಕ್ಕೂ ಅಧಿಕ ವಿಕೆಟ್ ಹಾಗೂ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ರವೀಂದ್ರ ಜಡೇಜಾ ಐಪಿಎಲ್ನಲ್ಲಿ ಪರಿಪೂರ್ಣ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸಿಎಸ್‌ಕೆ ತಂಡದಿಂದ ಜಡೇಜಾ ಹೊರಬಂದರೆ 9 ಫ್ರಾಂಚೈಸಿಗಳು ಟೀಮ್ ಇಂಡಿಯಾ ಆಲ್ರೌಂಡರ್ನ ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸುವುದಂತು ಪಕ್ಕಾ ಎನ್ನಬಹುದು.