IND vs PAK: ಏಷ್ಯಾಕಪ್ ಇತಿಹಾಸದಲ್ಲಿ ಇದುವರೆಗೆ ಫೈನಲ್ ಆಡದ ಭಾರತ-ಪಾಕಿಸ್ತಾನ್
India-Pakistan: ಏಷ್ಯಾಕಪ್‌ನಲ್ಲಿ ಪ್ರಾಬಲ್ಯ ಮುಂದುವರಿಸಿದ್ದ ಭಾರತ ತಂಡವು ಶ್ರೀಲಂಕಾವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
15ನೇ ಏಷ್ಯಾಕಪ್ (Asia Cup 2022) ಟೂರ್ನಿಗಾಗಿ ದಿನಗಣನೆ ಶುರುವಾಗಿದೆ. ಆಗಸ್ಟ್ 27 ರಿಂದ ಯುಎಇನಲ್ಲಿ ಶುರುವಾಗಲಿರುವ ಈ ಟೂರ್ನಿಯ ಹಾಟ್ ಫೇವರೇಟ್ ತಂಡಗಳಾಗಿ ಭಾರತ-ಪಾಕಿಸ್ತಾನ್ ಗುರುತಿಸಿಕೊಂಡಿದೆ. ವಿಶೇಷ ಎಂದರೆ ಉಭಯ ತಂಡಗಳು ಆಗಸ್ಟ್ 28 ರಂದು ಮುಖಾಮುಖಿಯಾಗುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಎರಡೂ ತಂಡಗಳು ಸೂಪರ್-4 ಹಂತಕ್ಕೇರಲಿದ್ದು, ಇದರಿಂದ 2ನೇ ಬಾರಿ ಸಹ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಉಭಯ ತಂಡಗಳು ಫೈನಲ್ ಪ್ರವೇಶಿಸಿದರೆ ಮೂರನೇ ಬಾರಿ ಭಾರತ-ಪಾಕ್ ನಡುವಣ ರೋಮಾಂಚಕ ಕದನವನ್ನು ಎದುರು ನೋಡಬಹುದು. ಆದರೆ ಇಲ್ಲಿ ಇಂಟ್ರೆಸ್ಟಿಂಗ್ ಸಂಗತಿ ಏನೆಂದರೆ, ಕಳೆದ 14 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ್ ಫೈನಲ್ನಲ್ಲಿ ಮುಖಾಮುಖಿಯಾಗಿಲ್ಲ ಎಂಬುದು.
ಅಂದರೆ ಭಾರತ ಫೈನಲ್ ಪ್ರವೇಶಿಸಿದಾಗೆಲ್ಲಾ ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ತಂಡಗಳು ಎದುರಾಳಿಗಳಾಗಿ ಸಿಕ್ಕಿವೆ. ಹಾಗೆಯೇ ಪಾಕಿಸ್ತಾನ್ ಫೈನಲ್ ಪ್ರವೇಶಿಸಿದಾಗ ಭಾರತ ತಂಡವು ಅಂತಿಮ ಹಣಾಹಣಿ ಹಂತಕ್ಕೆ ತಲುಪಿರಲಿಲ್ಲ ಎಂಬುದು ವಿಶೇಷ. ಹಾಗಿದ್ರೆ ಏಷ್ಯಾಕಪ್ ಫೈನಲ್ ಇತಿಹಾಸದ ಹೇಗಿದೆ ನೋಡೋಣ…
- 1984: ಚೊಚ್ಚಲ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ಫೈನಲ್ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
- 1986: 2ನೇ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಶ್ರೀಲಂಕಾ ಮೊದಲ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
- 1988: ಏಷ್ಯಾಕಪ್‌ನ ಮೂರನೇ ಆವೃತ್ತಿಯಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಸೋಲಿಸಿ ಮತ್ತೊಮ್ಮೆ ಟ್ರೋಫಿಗೆ ಮುತ್ತಿಕ್ಕಿತು.
- 1991: ಏಷ್ಯಾಕಪ್‌ನಲ್ಲಿ ಪ್ರಾಬಲ್ಯ ಮುಂದುವರಿಸಿದ್ದ ಭಾರತ ತಂಡವು ಶ್ರೀಲಂಕಾವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
- 1995: ಐದನೇ ಆವೃತ್ತಿಯ ಏಷ್ಯಾಕಪ್‌ನ ಫೈನಲ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಶ್ರೀಲಂಕಾ ಮತ್ತೊಮ್ಮೆ ಸೋಲನುಭವಿಸಿತು.
- 1997: ಆರನೇ ಏಷ್ಯಾಕಪ್ ಫೈನಲ್ನಲ್ಲಿ ಭಾರತವನ್ನು ಮಣಿಸಿ ಶ್ರೀಲಂಕಾ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
- 2000: 7ನೇ ಏಷ್ಯಾಕಪ್‌ನಲ್ಲಿ ಶ್ರೀಲಂಕಾವನ್ನು ಮಣಿಸುವ ಮೂಲಕ ಪಾಕಿಸ್ತಾನ್ ತಂಡವು ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.
- 2004: ಸತತವಾಗಿ ಏಷ್ಯಾಕಪ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಶ್ರೀಲಂಕಾ ಭಾರತಕ್ಕೆ ಸೋಲುಣಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.
- 2008: 9ನೇ ಏಷ್ಯಾಕಪ್‌ನಲ್ಲಿ ಮತ್ತೊಮ್ಮೆ ಭಾರತಕ್ಕೆ ಸೋಲಿನ ರುಚಿ ತೋರಿಸಿದ ಶ್ರೀಲಂಕಾ ಚಾಂಪಿಯನ್ ಪಟ್ಟವನ್ನು ಕಾಯ್ದುಕೊಂಡಿತು.
- 2010: ಸತತ ಎರಡು ಬಾರಿ ಸೋಲುಣಿಸಿದ ಶ್ರೀಲಂಕಾವನ್ನು ಬಗ್ಗು ಬಡಿಯುವ ಮೂಲಕ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.
- 2012: ಬಾಂಗ್ಲಾದೇಶ್ ತಂಡವನ್ನು ಫೈನಲ್ನಲ್ಲಿ ಮಣಿಸಿ ಪಾಕಿಸ್ತಾನ್ 2ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು.
- 2014: ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
- 2016: ಫೈನಲ್ನಲ್ಲಿ ಬಾಂಗ್ಲಾದೇಶ್ ತಂಡವನ್ನು ಸೋಲಿಸಿದ ಭಾರತ ಮತ್ತೊಮ್ಮೆ ಏಷ್ಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
- 2018: 14ನೇ ಏಷ್ಯಾಕಪ್‌ನಲ್ಲಿ ಭಾರತ-ಬಾಂಗ್ಲಾದೇಶ್ ಮತ್ತೊಮ್ಮೆ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಚಾಂಪಿಯನ್ ಪಟ್ಟವನ್ನು ಕಾಯ್ದುಕೊಂಡಿತು.
ಅಂದರೆ ಏಷ್ಯಾಕಪ್‌ನಲ್ಲಿ ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರೆ ಇದುವರೆಗೆ ಭಾರತ-ಪಾಕಿಸ್ತಾನ್ ಫೈನಲ್ನಲ್ಲಿ ಮುಖಾಮುಖಿಯಾಗಿಲ್ಲ ಎಂಬುದು ವಿಶೇಷ. ಈ ಬಾರಿ ಉಭಯ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಅದರಂತೆ ಸೂಪರ್-4 ಹಂತಕ್ಕೇರಿ ಫೈನಲ್ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.