The Hundred: 7 ಸಿಕ್ಸ್, 3 ಫೋರ್: ಅತೀ ವೇಗದ ಅರ್ಧಶತಕ ಬಾರಿಸಿ ದಾಖಲೆ ಬರೆದ ಯುವ ಬ್ಯಾಟ್ಸ್ಮನ್
The Hundred: ಕೇವಲ 44 ಎಸೆತಗಳಲ್ಲಿ 3 ವಿಕೆಟ್ ನಷ್ಟಕ್ಕೆ 147 ರನ್ ಬಾರಿಸುವ ಮೂಲಕ ಲಂಡನ್ ಸ್ಪಿರಿಟ್ ತಂಡವು ಭರ್ಜರಿ ಜಯ ಸಾಧಿಸಿತು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ (The Hundred) ಸ್ಪೋಟಕ ಬ್ಯಾಟಿಂಗ್ಗೆ ಸಾಕ್ಷಿಯಾಗುತ್ತಿದೆ. ದಿನಗಳ ಹಿಂದೆಯಷ್ಟೇ ವಿಲ್ ಸ್ಮೀಡ್ ಈ ಲೀಗ್ನಲ್ಲಿ ಮೊದಲ ಶತಕ ಬಾರಿಸಿದ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ವಿಲ್ ಜಾಕ್ಸ್ ಕೂಡ ಸ್ಪೋಟಕ ಸೆಂಚುರಿ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದೀಗ ಬಿರುಗಾಳಿಯ ಅರ್ಧಶತಕ ಬಾರಿಸಿ ಆ್ಯಡಂ ರೋಸಿಂಗ್ಟನ್ ಎಲ್ಲರನ್ನು ದಂಗಾಗಿಸಿದ್ದಾರೆ. ಟೂರ್ನಿಯ 13ನೇ ಪಂದ್ಯದಲ್ಲಿ ಈ ಸಿಡಿಲಬ್ಬರದ ಅರ್ಧಶತಕ ಮೂಡಿಬಂದಿದ್ದು, ಈ ಪಂದ್ಯದಲ್ಲಿ ನಾರ್ಥನ್ ಸೂಪರ್ ಚಾರ್ಜರ್ಸ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಫಾಫ್ ಡುಪ್ಲೆಸಿಸ್ ನಾಯಕತ್ವದ ಸೂಪರ್ ಚಾರ್ಜರ್ಸ್ ತಂಡವು ಉತ್ತಮ ಆರಂಭ ಪಡೆದಿತ್ತು.
ಆರಂಭಿಕನಾಗಿ ಕಣಕ್ಕಿಳಿದ ಡುಪ್ಲೆಸಿಸ್ ಕೇವಲ 35 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 56 ರನ್ ಸಿಡಿಸಿದ್ದರು. ಇನ್ನು ಅಂತಿಮ ಹಂತದಲ್ಲಿ ಆ್ಯಡಂ ಹೂಸ್ ಕೇವಲ 14 ಎಸೆತಗಳಲ್ಲಿ 30 ರನ್ ಸಿಡಿಸುವ ಮೂಲಕ 100 ಎಸೆತಗಳಲ್ಲಿ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 143 ಕ್ಕೆ ತಂದು ನಿಲ್ಲಿಸಿದರು.
ಸ್ಪರ್ಧಾತ್ಮಕ ಸವಾಲು ನೀಡುವ ಮೂಲಕ ಕಣಕ್ಕಿಳಿದ ನಾರ್ಥನ್ ಸೂಪರ್ ಚಾರ್ಜರ್ಸ್ ತಂಡದ ಬೌಲರ್ಗಳನ್ನು ಲಂಡನ್ ಸ್ಪಿರಿಟ್ ತಂಡದ ಆರಂಭಿಕ ಆಟಗಾರ ಆ್ಯಡಂ ರೋಸಿಂಗ್ಟನ್ ಚೆಂಡಾಡಿದರು. ಆರಂಭದಿಂದಲೇ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ ರೋಸಿಂಗ್ಟನ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ದಿ ಹಂಡ್ರೆಡ್ ಲೀಗ್ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದರು.
ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ 25 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 43 ರನ್ ಚಚ್ಚಿದರು. ಇತ್ತ ಕೇವಲ 25 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 66 ರನ್ ಬಾರಿಸಿ ಆ್ಯಡಂ ರೋಸಿಂಗ್ಟನ್ ಇನಿಂಗ್ಸ್ ಅಂತ್ಯಗೊಳಿಸಿದರು. ಅಷ್ಟರಲ್ಲಾಗಲೇ ಲಂಡನ್ ಸ್ಪಿರಿಟ್ ತಂಡವು ಗೆಲುವಿನತ್ತ ಮುಖಮಾಡಿತು.
ಅಂತಿಮವಾಗಿ ಕೇವಲ 44 ಎಸೆತಗಳಲ್ಲಿ 3 ವಿಕೆಟ್ ನಷ್ಟಕ್ಕೆ 147 ರನ್ ಬಾರಿಸುವ ಮೂಲಕ ಲಂಡನ್ ಸ್ಪಿರಿಟ್ ತಂಡವು ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಆ್ಯಡಂ ರೋಸಿಂಗ್ಟನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.