Virat Kohli: ವಿರಾಟ್ ಕೊಹ್ಲಿಯ ಬಗ್ಗೆ ಕಪಿಲ್ ದೇವ್ ಶಾಕಿಂಗ್ ಹೇಳಿಕೆ

| Updated By: ಝಾಹಿರ್ ಯೂಸುಫ್

Updated on: Jul 16, 2022 | 12:55 PM

Kapil Dev: ವಿರಾಟ್ ಕೊಹ್ಲಿ 2019 ರ ಬಳಿಕ ಯಾವುದೇ ಶತಕ ಬಾರಿಸಿಲ್ಲ. ಹೀಗಾಗಿ ಕಪಿಲ್ ದೇವ್ 2 ವರ್ಷಗಳಿಂದ ಅವರ ದೊಡ್ಡ ಇನಿಂಗ್ಸ್​ಗಾಗಿ ಕಾಯುತ್ತಿದ್ದೇವೆ ಎಂಬುದನ್ನು ಸಹ ಇಲ್ಲಿ ಪ್ರಸ್ತಾಪಿಸಿದ್ದಾರೆ.

Virat Kohli: ವಿರಾಟ್ ಕೊಹ್ಲಿಯ ಬಗ್ಗೆ ಕಪಿಲ್ ದೇವ್ ಶಾಕಿಂಗ್ ಹೇಳಿಕೆ
Virat Kohli - Kapil Dev
Follow us on

ಟೀಮ್ ಇಂಡಿಯಾದ (Team India) ಮಾಜಿ ನಾಯಕ ಕಪಿಲ್ ದೇವ್ (Kapil Dev) ಇತ್ತೀಚೆಗೆ ವಿರಾಟ್ ಕೊಹ್ಲಿಯನ್ನು (Virat Kohli) ಟಿ20 ತಂಡದಿಂದ ಬಿಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಪಿಲ್ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರತಿಭಾವಂತ ಸ್ಪಿನ್ ಬೌಲರ್ ಅಶ್ವಿನ್ ಅವರನ್ನು ಟೆಸ್ಟ್​​ ತಂಡದ ಪ್ಲೇಯಿಂಗ್ 11 ನಿಂದ ಕೈಬಿಡಲು ಸಾಧ್ಯವಾದರೆ, ಫಾರ್ಮ್​ನಲ್ಲಿ ಇಲ್ಲದ ವಿರಾಟ್ ಕೊಹ್ಲಿಯನ್ನು ಏಕೆ ಹೊರಗಿಡಬಾರದು ಎಂದು ಕಪಿಲ್ ದೇವ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ ಅನ್ನು ನೇರವಾಗಿ ಪ್ರಶ್ನಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಇದು ವಿಶ್ರಾಂತಿಯಲ್ಲ ಎಂಬ ಅಭಿಪ್ರಾಯವನ್ನು ಕಪಿಲ್ ದೇವ್ ಮುಂದಿಟ್ಟಿದ್ದಾರೆ.

ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿತ್ತು. ಆದರೆ 18 ಸದಸ್ಯರ ಈ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್ ಬುಮ್ರಾ ಹೆಸರು ಇರಲಿಲ್ಲ. ಇಬ್ಬರೂ ಈ ಪ್ರವಾಸದಿಂದ ಹೊರಗುಳಿಯಲು ಬಿಸಿಸಿಐ ಯಾವುದೇ ಕಾರಣ ನೀಡಿಲ್ಲ. ಇದಾಗ್ಯೂ ಇಬ್ಬರೂ ಹಿರಿಯ ಆಟಗಾರರಿಗೆ ಕೆಲಸದ ಹೊರೆ ನಿಮಿತ್ತ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರದಲ್ಲಿ ಕಪಿಲ್ ದೇವ್ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಕಪಿಲ್ ದೇವ್, “ವಿರಾಟ್ ಕೊಹ್ಲಿಯಂತಹ ದೊಡ್ಡ ಆಟಗಾರನನ್ನು ಕೈಬಿಡಬೇಕು ಎಂದು ನಾನು ಹೇಳಲಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ಗೌರವ ಸಲ್ಲಿಸಲು ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ನೀವು ಹೇಳಿದರೆ, ಅದು ಒಳ್ಳೆಯದೇ ಎಂದಿದ್ದಾರೆ. ಅಂದರೆ ವಿಶ್ರಾಂತಿ ಹೆಸರಿನಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡಲಾಗಿದೆ. ಆದರೆ ಅವರು ದೊಡ್ಡ ಆಟಗಾರನಾಗಿರುವ ಕಾರಣ ಗೌರವ ನೀಡುವ ಸಲುವಾಗಿ ವಿಶ್ರಾಂತಿ ಎಂದಿದ್ದಾರೆಂದು ಕಪಿಲ್ ದೇವ್ ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಇನ್ನು ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಮಾತನಾಡಿದ ಕಪಿಲ್ ದೇವ್, ಆಟಗಾರರನ್ನು ಮತ್ತೆ ಫಾರ್ಮ್‌ಗೆ ತರುವುದು ಹೇಗೆ ಎಂಬುದು ಅತ್ಯಂತ ಮುಖ್ಯವಾದ ವಿಷಯ? ಆತ ಸಾಮಾನ್ಯ ಕ್ರಿಕೆಟಿಗನಲ್ಲ. ತನ್ನ ಕಳೆದುಕೊಂಡ ಫಾರ್ಮ್ ಮರಳಿ ಪಡೆಯಲು ಗರಿಷ್ಠ ಅಭ್ಯಾಸದೊಂದಿಗೆ ಪಂದ್ಯಗಳನ್ನು ಆಡಬೇಕು. ಟಿ20ಯಲ್ಲಿ ಕೊಹ್ಲಿಗಿಂತ ದೊಡ್ಡ ಆಟಗಾರ ಈ ಜಗತ್ತಿನಲ್ಲಿ ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರದಿದ್ದರೆ, ಆಯ್ಕೆದಾರರು ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನನ್ನ ಸ್ವಂತ ಅಭಿಪ್ರಾಯವೆಂದರೆ ಒಬ್ಬ ಆಟಗಾರನು ಸ್ಥಿರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಅವನಿಗೆ ವಿಶ್ರಾಂತಿ ನೀಡಬಹುದು ಅಥವಾ ತಂಡದಿಂದ ಕೈಬಿಡಬಹುದು ಎಂದು ಕಪಿಲ್ ದೇವ್ ಹೇಳಿದರು.

ಕೊಹ್ಲಿ ರನ್ ಗಳಿಸಲು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಅವರಂತಹ ಶ್ರೇಷ್ಠ ಆಟಗಾರರು ಫಾರ್ಮ್‌ಗೆ ಮರಳಲು ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಕಳೆದ ಐದಾರು ವರ್ಷಗಳಲ್ಲಿ ಭಾರತ ವಿರಾಟ್ ಇಲ್ಲದೆ ಆಡಿಲ್ಲ. ಹೀಗಾಗಿ ಅಂತಹ ಆಟಗಾರನು ಫಾರ್ಮ್‌ಗೆ ಮರಳಬೇಕೆಂದು ನಾನು ಬಯಸುತ್ತೇನೆ. ಹೌದು, ಅವರಿಗೆ ವಿಶ್ರಾಂತಿ ನೀಡಲಾಗಿದೆ ಅಥವಾ ಹೊರಹಾಕಲಾಗಿದೆ, ಅದೇನೆ ಆದರೂ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರು ರನ್ ಗಳಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಬಹುಶಃ ರಣಜಿ ಟ್ರೋಫಿಯನ್ನು ಆಡಬಹುದು ಅಥವಾ ಎಲ್ಲಿಯಾದರೂ ರನ್ ಗಳಿಸಬಹುದು. ಅವರನ್ನು ಹೊರಹಾಕಿದ್ರೆ ಅಥವಾ ವಿಶ್ರಾಂತಿ ನೀಡಿದ್ರೆ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ಅವರು ಮತ್ತೆ ಫಾರ್ಮ್​ಗೆ ಬರಬೇಕೆಂದು ನಾನು ಬಯಸುತ್ತೇನೆ. ಒಂದು ಇನ್ನಿಂಗ್ಸ್ ಶ್ರೇಷ್ಠ ಆಟಗಾರನ ಭವಿಷ್ಯವನ್ನು ಬದಲಾಯಿಸಬಹುದು. ಆದರೆ ಅದು ಯಾವಾಗ ಬರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಏಕೆಂದರೆ ನಾವು ಎರಡು ವರ್ಷಗಳಿಂದ ಆ ಇನಿಂಗ್ಸ್​ಗಾಗಿ ಕಾಯುತ್ತಿದ್ದೇವೆ ಎಂದು ಇದೇ ವೇಳೆ ಕಪಿಲ್ ದೇವ್ ತಿಳಿಸಿದರು.

ವಿರಾಟ್ ಕೊಹ್ಲಿ 2019 ರ ಬಳಿಕ ಯಾವುದೇ ಶತಕ ಬಾರಿಸಿಲ್ಲ. ಹೀಗಾಗಿ ಕಪಿಲ್ ದೇವ್ 2 ವರ್ಷಗಳಿಂದ ಅವರ ದೊಡ್ಡ ಇನಿಂಗ್ಸ್​ಗಾಗಿ ಕಾಯುತ್ತಿದ್ದೇವೆ ಎಂಬುದನ್ನು ಸಹ ಇಲ್ಲಿ ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್​ಗಳ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ಗೂ ಮುನ್ನ ನಡೆಯಲಿರುವ ಉಳಿದ ಸರಣಿಗಳ ಮೂಲಕ ಕೊಹ್ಲಿ ಫಾರ್ಮ್​ ಕಂಡುಕೊಳ್ಳಬೇಕಿದೆ.

 

 

Published On - 12:53 pm, Sat, 16 July 22