Murali Vijay: ಬರೋಬ್ಬರಿ 12 ಸಿಕ್ಸ್: ಸಿಡಿಲಬ್ಬರದ ಶತಕ ಸಿಡಿಸಿದ ಮುರಳಿ ವಿಜಯ್
TNPL 2022: ಇನಿಂಗ್ಸ್ ಆರಂಭಿಸಿದ ರಾಯಲ್ ಕಿಂಗ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 29 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಬಾಬಾ ಅಪರಜಿತ್ ಹಾಗೂ ಸಂಜಯ್ ಯಾದವ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ಐಪಿಎಲ್ ಮೂಲಕ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ (Team India) ಕಂಬ್ಯಾಕ್ ಮಾಡಿದ ಬೆನ್ನಲ್ಲೇ ಅತ್ತ ಮತ್ತೋರ್ವ ತಮಿಳುನಾಡು ಆಟಗಾರ ಮುರಳಿ ವಿಜಯ್ (Murali Vijay) ಟಿ20 ಲೀಗ್ಗೆ ಮರಳಿದ್ದರು. ಹೌದು, 38 ವರ್ಷದ ಮುರಳಿ ವಿಜಯ್ ಪ್ರಸ್ತುತ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಮೂಲಕ ಮತ್ತೆ ಬ್ಯಾಟ್ ಬೀಸಲಾರಂಭಿಸಿದ್ದಾರೆ. ಆದರೆ ಆರಂಭಿಕ ಪಂದ್ಯಗಳಲ್ಲಿ ವಿಫಲರಾಗಿದ್ದ ವಿಜಯ್ ಇದೀಗ ತಮ್ಮ ಬ್ಯಾಟಿಂಗ್ ಖದರ್ ತೋರಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಕೇಳಿ ಬಂದಿದ್ದ ಎಲ್ಲಾ ಟೀಕೆಗಳಿಗೂ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಟಿಎನ್ಪಿಎಲ್ನಲ್ಲಿ ನಡೆದ 19ನೇ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ಹಾಗೂ ರುಬಿ ತಿರುಚ್ಚಿ ವಾರಿಯರ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಚ್ಚಿ ವಾರಿಯರ್ಸ್ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ರಾಯಲ್ ಕಿಂಗ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 29 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಬಾಬಾ ಅಪರಜಿತ್ ಹಾಗೂ ಸಂಜಯ್ ಯಾದವ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಆರಂಭದಲ್ಲೇ ಮೇಲುಗೈ ಹೊಂದಿದ್ದ ತಿರುಚ್ಚಿ ವಾರಿಯರ್ಸ್ ವಿರುದ್ದ ಅಪರಜಿತ್ ಹಾಗೂ ಸಂಜಯ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 48 ಎಸೆತಗಳಲ್ಲಿ ಅಪರಜಿತ್ 8 ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಅಜೇಯ 92 ರನ್ ಬಾರಿಸಿದರೆ, ಸಂಜಯ್ ಯಾದವ್ 55 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ ಶತಕ (103) ಸಿಡಿಸಿದರು. ಅಲ್ಲದೆ ಸಿಕ್ಸ್-ಫೋರ್ಗಳ ಸುರಿಮಳೆಗೈದ ಈ ಜೋಡಿಯು 3ನೇ ವಿಕೆಟ್ಗೆ 207 ರನ್ಗಳ ಜೊತೆಯಾಟವಾಡಿದರು. ಪರಿಣಾಮ ರಾಯಲ್ ಕಿಂಗ್ಸ್ ಕೇವಲ 2 ವಿಕೆಟ್ ನಷ್ಟಕ್ಕೆ 236 ರನ್ ಕಲೆಹಾಕಿತು.
237 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ತಿರುಚ್ಚಿ ವಾರಿಯರ್ಸ್ ಪರ ಆರಂಭಿಕ ಆಟಗಾರ ಮುರುಳಿ ವಿಜಯ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಕಿಂಗ್ಸ್ ಬೌಲರ್ಗಳ ಬೆಂಡೆತ್ತಿದ ವಿಜಯ್ ಬರೋಬ್ಬರಿ 12 ಸಿಕ್ಸ್ ಹಾಗೂ 7 ಫೋರ್ಗಳನ್ನು ಬಾರಿಸಿದ್ದರು. ಒಂದೆಡೆ ಮುರಳಿ ವಿಜಯ್ ಅಬ್ಬರಿಸುತ್ತಿದ್ದರೆ ಮತ್ತೊಂದೆಡೆಯಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ತಿರುಚ್ಚಿ ತಂಡವು 108 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು.
ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಮುರಳಿ ವಿಜಯ್ ಅಂತಿಮವಾಗಿ 66 ಎಸೆತಗಳಲ್ಲಿ 121 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಭರ್ಜರಿ ಶತಕದ ಹೊರತಾಗಿಯೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಅಂತಿಮವಾಗಿ ತಿರುಚ್ಚಿ ವಾರಿಯರ್ಸ್ ತಂಡವು 7 ವಿಕೆಟ್ ನಷ್ಟಕ್ಕೆ 170 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 66 ರನ್ಗಳಿಂದ ಜಯ ಸಾಧಿಸಿತು. ವಿಶೇಷ ಎಂದರೆ ತಿರುಚ್ಚಿ ವಾರಿಯರ್ಸ್ ಕಲೆಹಾಕಿದ 170 ರನ್ಗಳಲ್ಲಿ ಏಕಾಂಗಿಯಾಗಿ 121 ರನ್ ಬಾರಿಸಿ ಮುರಳಿ ವಿಜಯ್ ಗಮನ ಸೆಳೆದರು. ಅಲ್ಲದೆ ತಮ್ಮ ಹಳೆಯ ಸ್ಪೋಟಕ ಬ್ಯಾಟಿಂಗ್ ಖದರ್ ಪ್ರದರ್ಶಿಸಿ ಟೀಕಾಗಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದರು.
Published On - 11:32 am, Sat, 16 July 22