ರಣಜಿ ಟೂರ್ನಿಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Karnataka Squad: ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಮಧ್ಯಪ್ರದೇಶ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಅಕ್ಟೋಬರ್ 11 ರಂದು ನಡೆಯಲಿರುವ ಈ ಪಂದ್ಯಕ್ಕೆ ಇಂದೋರ್ನ ಹೋಲ್ಕರ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಅಕ್ಟೋಬರ್ 18 ರಿಂದ ಶುರುವಾಗಲಿರುವ 2ನೇ ಪಂದ್ಯದಲ್ಲಿ ಕರ್ನಾಟಕ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಲಿದೆ.
ಅಕ್ಟೋಬರ್ 11 ರಿಂದ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದು, ಉಪನಾಯಕರಾಗಿ ಮನೀಶ್ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ಕರ್ನಾಟಕ ತಂಡದ ಉಪನಾಯರಾಗಿ ನಿಕಿನ್ ಜೋಸ್ ಆಯ್ಕೆಯಾಗಿದ್ದರು. ಆದರೀಗ ಅನುಭವಿ ಆಟಗಾರ ಮನೀಶ್ ಪಾಂಡೆಗೆ ವೈಸ್ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
ಹಾಗೆಯೇ 2023-24ರಲ್ಲಿ ಐದು ಪಂದ್ಯಗಳಿಂದ 25 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಪೀಡ್‌ಸ್ಟರ್ ವಿದ್ವತ್ ಕಾವೇರಪ್ಪ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ದುಲೀಪ್ ಟ್ರೋಫಿ ಪಂದ್ಯದ ವೇಳೆ ಗಾಯಗೊಂಡಿರುವ ಕಾರಣ ಕೊಡಗಿನ ವೇಗಿ ರಣಜಿ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಇನ್ನು ಕಳೆದ ಸೀಸನ್ನಲ್ಲಿ 39 ವಿಕೆಟ್ ಕಬಳಿಸಿದ್ದ ವೈಶಾಕ್ ವಿಜಯಕುಮಾರ್ ಹಾಗೂ 28 ವಿಕೆಟ್ ಪಡೆದಿದ್ದ ವಿ ಕೌಶಿಕ್ ಈ ಬಾರಿ ಕೂಡ ತಂಡದಲ್ಲಿದ್ದು, ಇವರೊಂದಿಗೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಪ್ರಸಿದ್ಧ್ ಕೃಷ್ಣ ಕೂಡ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡದ ಬೌಲಿಂಗ್ ವಿಭಾಗವು ಮತ್ತಷ್ಟು ಬಲಿಷ್ಠವಾದಂತಾಗಿದೆ.
ಹಾಗೆಯೇ ಸಿಕೆ ನಾಯುಡು (23 ವರ್ಷದೊಳಗಿನವರ) ಟ್ರೋಫಿ ವಿಜೇತ ತಂಡದ ನಾಯಕ ಆರ್.ಸ್ಮರನ್ ಹಾಗೂ ಮೊಹ್ಸಿನ್ ಖಾನ್ ಈ ಬಾರಿ ರಣಜಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಾಗ್ಯೂ ರಾಹುಲ್ ದ್ರಾವಿಡ್ ಸುಪುತ್ರ ಸಮಿತ್ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: 11 ಎಸೆತಗಳಲ್ಲಿ 63 ರನ್: ಸಿಡಿಲಬ್ಬರದ ಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್
ಇನ್ನು ವಿಕೆಟ್ ಕೀಪರ್ಗಳಾಗಿ ಈ ಬಾರಿ ತಂಡದಲ್ಲಿ ಕಾಣಿಸಿಕೊಂಡಿರುವುದು ಸುಜಯ್ ಸಾತೇರಿ ಹಾಗೂ ಲವ್ನೀತ್ ಸಿಸೋಡಿಯಾ. ಕರ್ನಾಟಕದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಶರತ್ ಶ್ರೀನಿವಾಸ್ ಈ ಬಾರಿ ತ್ರಿಪುರಾ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸುಜಯ್ಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕರ್ನಾಟಕ ತಂಡ ಈ ಕೆಳಗಿನಂತಿದೆ…
ಕರ್ನಾಟಕ ರಣಜಿ ತಂಡ (ಮೊದಲೆರಡು ಪಂದ್ಯಗಳಿಗೆ): ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಆರ್ ಸ್ಮರಣ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಸುಜಯ್ ಸಾತೇರಿ, ಹಾರ್ದಿಕ್ ರಾಜ್, ವೈಶಾಕ್ ವಿಜಯಕುಮಾರ್, ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ಲವ್ನೀತ್ ಸಿಸೋಡಿಯಾ, ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಕಿಶನ್ ಬೆದರೆ, ಅಭಿಲಾಶ್ ಶೆಟ್ಟಿ.
ಕರ್ನಾಟಕ ತಂಡದ ಮೊದಲ ಎದುರಾಳಿ ಯಾರು?
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಮಧ್ಯಪ್ರದೇಶ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಅಕ್ಟೋಬರ್ 11 ರಂದು ನಡೆಯಲಿರುವ ಈ ಪಂದ್ಯಕ್ಕೆ ಇಂದೋರ್ನ ಹೋಲ್ಕರ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಅಕ್ಟೋಬರ್ 18 ರಿಂದ ಶುರುವಾಗಲಿರುವ 2ನೇ ಪಂದ್ಯದಲ್ಲಿ ಕರ್ನಾಟಕ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಬೆಂಗಳೂರಿನ KSCA ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಎರಡು ಪಂದ್ಯಗಳಿಗೆ ಸದ್ಯ ಕರ್ನಾಟಕ ತಂಡವನ್ನು ಘೋಷಿಸಲಾಗಿದೆ.