ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ (Ranji Trophy 2024) ಗ್ರೂಪ್-ಸಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ (Karnataka) ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ವಾಸುಕಿ ಕೌಶಿಕ್ ಅವರ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ ತಂಡವು ಕೇವಲ 152 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ 15 ಓವರ್ಗಳನ್ನು ಎಸೆದ ವಾಸುಕಿ ಕೌಶಿಕ್ ಕೇವಲ 41 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ (0) ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಗೂಡಿದ ರವಿಕುಮಾರ್ ಸಮರ್ಥ್ (38) ಹಾಗೂ ದೇವದತ್ ಪಡಿಕ್ಕಲ್ 2ನೇ ವಿಕೆಟ್ಗೆ 76 ರನ್ಗಳ ಜೊತೆಯಾಟವಾಡಿದರು.
ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕಿನ್ ಜೋಸ್ ಕೇವಲ 8 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ದೇವದತ್ ಪಡಿಕ್ಕಲ್ 115 ಎಸೆತಗಳಲ್ಲಿ ಶತಕ ಪೂರೈಸಿದರು. ಮನೀಶ್ ಪಾಂಡೆ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಪಡಿಕ್ಕಲ್ ಶತಕದ ಬಳಿಕ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು.
ಪರಿಣಾಮ ದೇವದತ್ ಪಡಿಕ್ಕಲ್ ಬ್ಯಾಟ್ನಿಂದ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು. ಪರಿಣಾಮ 216 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 24 ಫೋರ್ಗಳೊಂದಿಗೆ 193 ರನ್ ಬಾರಿಸಿದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿ, ಕೇವಲ 7 ರನ್ಗಳಿಂದ ದ್ವಿಶತಕ ವಂಚಿತರಾದರು.
ಮತ್ತೊಂದೆಡೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕರ್ನಾಟಕ ತಂಡದ ಹಿರಿಯ ಬ್ಯಾಟರ್ ಮನೀಶ್ ಪಾಂಡೆ 142 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಆದರೆ ಶತಕ ಬೆನ್ನಲ್ಲೇ ಪಾಂಡೆ (118) ಕೂಡ ವಿಕೆಟ್ ಒಪ್ಪಿಸಿ ಹೊರ ನಡೆದರು.
ಈ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ (55) ಅಜೇಯ ಅರ್ಧಶತಕ ಬಾರಿಸಿದರೆ, ಶುಭಾಂಗ್ ಹೆಗ್ಡೆ 27 ರನ್ಗಳ ಕೊಡುಗೆ ನೀಡಿದರು. ಅದರಂತೆ 2ನೇ ದಿನದಾಟದ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು 6 ವಿಕೆಟ್ ಕಳೆದುಕೊಂಡು 461 ರನ್ ಕಲೆಹಾಕಿದೆ. ಈ ಮೂಲಕ 309 ರನ್ಗಳ ಬೃಹತ್ ಮುನ್ನಡೆ ಗಳಿಸಿದೆ. ಸದ್ಯ ಶ್ರೀನಿವಾಸ್ ಶರತ್ (55) ಹಾಗೂ ವಿಜಯಕುಮಾರ್ ವೈಶಾಕ್ (15) ಕ್ರೀಸ್ನಲ್ಲಿದ್ದು, 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ರವಿಕುಮಾರ್ ಸಮರ್ಥ್ , ಮನೀಶ್ ಪಾಂಡೆ , ನಿಕಿನ್ ಜೋಸ್ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಶುಭಾಂಗ್ ಹೆಗ್ಡೆ , ವಿಜಯ್ ಕುಮಾರ್ ವೈಶಾಕ್ , ರೋಹಿತ್ ಕುಮಾರ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್.
ಇದನ್ನೂ ಓದಿ: David Warner: ದಾಖಲೆಯೊಂದಿಗೆ ವಿದಾಯ ಹೇಳಿದ ಡೇವಿಡ್ ವಾರ್ನರ್
ಪಂಜಾಬ್ ಪ್ಲೇಯಿಂಗ್ 11: ಪ್ರಭ್‌ಸಿಮ್ರಾನ್ ಸಿಂಗ್ , ಅಭಿಷೇಕ್ ಶರ್ಮಾ , ಮನ್‌ದೀಪ್ ಸಿಂಗ್ (ನಾಯಕ) , ನೆಹಾಲ್ ವಧೇರ , ನಮನ್ ಧೀರ್ , ಗೀತಾಂಶ್ ಖೇರಾ (ವಿಕೆಟ್ ಕೀಪರ್) , ಬಲ್ತೇಜ್ ಸಿಂಗ್ , ಮಯಾಂಕ್ ಮಾರ್ಕಾಂಡೆ , ಪ್ರೀತ್ ದತ್ತಾ , ಸಿದ್ದಾರ್ಥ್ ಕೌಲ್ , ಅರ್ಷದೀಪ್ ಸಿಂಗ್.