Ranji Trophy 2025: ಮತ್ತೊಂದು ಅಜೇಯ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್

Karun Nair Century: ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ಪರ ಆಡಿದ ಕರುಣ್ ನಾಯರ್ ತಮಿಳುನಾಡು ವಿರುದ್ಧ ಅದ್ಭುತ ಶತಕ ಬಾರಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಶತಕಗಳನ್ನು ಬಾರಿಸಿದ್ದ ಕರುಣ್ ರಣಜಿಯಲ್ಲೂ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ. ಇದು ರಣಜಿಯಲ್ಲಿ ಅವರ ಸತತ ಎರಡನೇ ಶತಕ. ಈ ಪ್ರದರ್ಶನದಿಂದ ಭಾರತ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

Ranji Trophy 2025: ಮತ್ತೊಂದು ಅಜೇಯ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್
Karun Nair

Updated on: Feb 08, 2025 | 8:55 PM

ದೇಶೀಯ ಕ್ರಿಕೆಟ್‌ನಲ್ಲಿ ಭಾರತದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರ ಶತಕಗಳ ಸರಮಾಲೆ ರಣಜಿ ಟೂರ್ನಯಲ್ಲೂ ಮುಂದುವರೆದಿದೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಶತಕಗಳನ್ನು ಬಾರಿಸುವ ಮೂಲಕ ಟೀಂ ಇಂಡಿಯಾದ ಬಾಗಿಲು ತಟ್ಟಿದ್ದ ಕರುಣ್ ನಾಯರ್, ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದು, ಇಲ್ಲಿಯೂ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಶತಕಗಳನ್ನು ಸಿಡಿಸಿದ್ದ ಕರುಣ್ ಇದೀಗ ಮತ್ತೊಂದು ಶತಕ ಸಿಡಿಸಿದ್ದಾರೆ. ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ಪರ ಆಡುತ್ತಿದ್ದ ಕರುಣ್, ತಮಿಳುನಾಡು ವಿರುದ್ಧ 15 ಬೌಂಡರಿಗಳ ಸಹಾಯದಿಂದ ಅದ್ಭುತ ಶತಕ ಬಾರಿಸಿದರು.

ಕ್ವಾರ್ಟರ್ ಫೈನಲ್‌ನಲ್ಲಿ ಶತಕ

ವಿದರ್ಭ ಮತ್ತು ತಮಿಳುನಾಡು ನಡುವಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯವು ಫೆಬ್ರವರಿ 8 ರಂದು ನಾಗ್ಪುರದ ಕಲಾಮ್ನಾ ವಿಸಿಎ ಮೈದಾನದಲ್ಲಿ ಪ್ರಾರಂಭವಾಯಿತು. ಈ ಪಂದ್ಯದಲ್ಲಿ ಮೊದಲ ದಿನದ ಆಟ ಮುಗಿದಿದ್ದು, ಕರುಣ್ ಅವರ ಅಜೇಯ ಶತಕದ ಸಹಾಯದಿಂದ ವಿದರ್ಭ ಬಲಿಷ್ಠ ಸ್ಥಾನದಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ವಿದರ್ಭ ತಂಡ ಮೊದಲ ದಿನದಾಟದ ಅಂತ್ಯಕ್ಕೆ 89 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 264 ರನ್ ಗಳಿಸಿದೆ.

ತಂಡದ ಪರ ಸ್ಟಾರ್ ಆಟಗಾರರಾದ ಅಥರ್ವ ಟೇಡ್, ಧ್ರುವ್ ಶೌರಿ ಮತ್ತು ಆದಿತ್ಯ ಠಾಕ್ರೆ ನಿರ್ಣಾಯಕ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಥರ್ವ 10 ಎಸೆತಗಳಲ್ಲಿ ಖಾತೆ ತೆರೆಯದೆ ಔಟಾದರೆ, ಧ್ರುವ್ 51 ಎಸೆತಗಳಲ್ಲಿ 26 ರನ್ ಗಳಿಸಿದರು. ಆದಿತ್ಯ ಕೂಡ 18 ಎಸೆತಗಳಲ್ಲಿ ಕೇವಲ 5 ರನ್ ಗಳಿಸಲು ಶಕ್ತರಾದರು. ಆದರೆ ಡ್ಯಾನಿಶ್ ಮಾಲೆವಾರ್ 119 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ 75 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇತ್ತ ಕರುಣ್ ನಾಯರ್ 180 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗುಳಿದ್ದಾರೆ. ಈ ಶತಕದ ಇನ್ನಿಂಗ್ಸ್‌ನಲ್ಲಿ ಅವರು 14 ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಾರಿಸಿದ್ದಾರೆ.

ರಣಜಿಯಲ್ಲಿ ಸತತ ಎರಡನೇ ಶತಕ

ರಣಜಿ ಟ್ರೋಫಿಯಲ್ಲಿ ಕರುಣ್ ವಿದರ್ಭ ಪರ ಸತತ ಎರಡನೇ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕರುಣ್ ಶತಕ ಬಾರಿಸಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರುಣ್​ಗೆ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 193 ಎಸೆತಗಳಲ್ಲಿ 105 ರನ್ ಗಳಿಸಿದರು. ಆ ಇನ್ನಿಂಗ್ಸ್‌ನಲ್ಲಿ ಕರುಣ್ 1 ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಬಾರಿಸಿದರು.

ಕರುಣ್​ಗೆ ತೆರೆಯುತ್ತಾ ಟೀಂ ಇಂಡಿಯಾ ಕದ?

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ 8 ಇನ್ನಿಂಗ್ಸ್‌ಗಳಲ್ಲಿ 5 ಶತಕ ಮತ್ತು ಒಂದು ಅರ್ಧಶತಕದ ಸಹಾಯದಿಂದ 779 ರನ್ ಗಳಿಸಿದ್ದರು. ಈ ಟೂರ್ನಿಯಲ್ಲಿ ಅವರು ಸತತ ನಾಲ್ಕು ಶತಕಗಳನ್ನು ಬಾರಿಸಿದ್ದರು. ಹೀಗಾಗಿ ಕರುಣ್ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಬೇಕೆಂದು ಮಾಜಿ ಕ್ರಿಕೆಟಿಗರಿಂದ ಹಿಡಿದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೆ ಕರುಣ್​ಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ಕರುಣ್ ಒಂದರ ನಂತರ ಒಂದರಂತೆ ಶತಕಗಳನ್ನು ಗಳಿಸುವ ಮೂಲಕ ಆಯ್ಕೆದಾರರನ್ನು ಯೋಚಿಸುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕರುಣ್ ಟೀಂ ಇಂಡಿಯಾಗೆ ಪ್ರವೇಶ ಪಡೆಯುತ್ತಾರೋ ಇಲ್ಲವೋ ಎಂದು ನೋಡಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ