PAK vs NZ: 22 ಎಸೆತಗಳಲ್ಲಿ 63 ರನ್; ಪಾಕ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಗ್ಲೆನ್ ಫಿಲಿಪ್ಸ್
Glenn Phillips Blasts Century: ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಅವರ ಅದ್ಭುತ ಶತಕದ ನೆರವಿನಿಂದ ನ್ಯೂಜಿಲೆಂಡ್ 330 ರನ್ ಗಳಿಸಿದೆ. ಪಾಕಿಸ್ತಾನದ ಬೌಲಿಂಗ್ ಆರಂಭದಲ್ಲಿ ಉತ್ತಮವಾಗಿತ್ತು ಆದರೆ ಫಿಲಿಪ್ಸ್ ಮತ್ತು ಮಿಚೆಲ್ ಅವರ ಪಾಲುದಾರಿಕೆ ನ್ಯೂಜಿಲೆಂಡ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯಿತು. ಫಿಲಿಪ್ಸ್ ಕೊನೆಯ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಭರ್ಜರಿ ಮೊತ್ತಕ್ಕೆ ಏರಿಸಿದರು.

2025 ರ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಪಾಕಿಸ್ತಾನದಲ್ಲಿ ಆತಿಥೇಯ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಏಕದಿನ ಸರಣಿಯನ್ನು ಆಡಲಾಗುತ್ತಿದೆ. ಆ ಪ್ರಕಾರ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವೆ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿದೆ. ಕಿವೀಸ್ ಪರ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಫಿಲಿಫ್ಸ್ ಸ್ಫೋಟಕ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
135 ರನ್‌ಗಳಿಗೆ 4 ವಿಕೆಟ್
ಸರಣಿಯ ಈ ಮೊದಲ ಪಂದ್ಯದಲ್ಲಿ ಪಾಕಿಸ್ತಾನಿ ಬೌಲರ್‌ಗಳು ಉತ್ತಮ ಆರಂಭವನ್ನು ಪಡೆದುಕೊಂಡರಾದರೂ, ಆ ನಂತರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಫಿಲಿಪ್ಸ್ ಪಾಕ್ ಬೌಲರ್‌ಗಳ ಬೆವರಿಳಿಸಿ ಅದ್ಭುತ ಶತಕ ಗಳಿಸಿದರು. ಒಂದು ಹಂತದಲ್ಲಿ ಕಿವೀಸ್ ತಂಡವು ಕೇವಲ 135 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಫಿಲಿಪ್ಸ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ, ಡ್ಯಾರಿಲ್ ಮಿಚೆಲ್ ಅವರೊಂದಿಗೆ 65 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮಿಚೆಲ್ ಔಟಾದ ನಂತರ ಫಿಲಿಪ್ಸ್ ಜವಾಬ್ದಾರಿ ವಹಿಸಿಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದರು.
ಫಿಲಿಪ್ಸ್ ಸ್ಫೋಟಕ ಶತಕ
ಕೊನೆಯ ಹಂತದಲ್ಲಿ ಇನ್ನಷ್ಟು ಉಗ್ರರೂಪ ತಾಳಿದ ಫಿಲಿಪ್ಸ್ 46ನೇ ಓವರ್‌ನಿಂದ ಪಾಕಿಸ್ತಾನಿ ಬೌಲರ್‌ಗಳ ಬೆವರಿಳಿಸಲು ಪ್ರಾರಂಭಿಸಿದರು. ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆಯಲಾರಂಭಿಸಿದರು. ಈ ವೇಳೆ ಶಾಹೀನ್ ಶಾ ಅಫ್ರಿದಿ ಬೌಲ್ ಮಾಡಿದ 48 ನೇ ಓವರ್‌ನಲ್ಲಿ ಫಿಲಿಪ್ಸ್ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸಿದರೆ, ನಂತರ 49 ನೇ ಓವರ್‌ನಲ್ಲಿ, ಫಿಲಿಪ್ಸ್ ನಸೀಮ್ ಶಾ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಹಾಗೆಯೇ ಶಾಹೀನ್ ಶಾ ಅಫ್ರಿದಿ ಬೌಲ್ ಮಾಡಿದ ಇನ್ನಿಂಗ್ಸ್ನ ಕೊನೆಯ ಓವರ್‌ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ತಂಡವನ್ನು 330 ರನ್‌ಗಳಿಗೆ ಕೊಂಡೊಯ್ದರು.
ಉಭಯ ತಂಡಗಳು
ನ್ಯೂಜಿಲೆಂಡ್ ತಂಡ: ರಚಿನ್ ರವೀಂದ್ರ, ವಿಲ್ ಯಂಗ್, ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಬೆನ್ ಸಿಯರ್ಸ್, ವಿಲ್ ಒ’ರೂರ್ಕ್.
ಪಾಕಿಸ್ತಾನ ತಂಡ: ಫಖರ್ ಜಮಾನ್, ಬಾಬರ್ ಆಝಂ, ಕಮ್ರಾನ್ ಗುಲಾಮ್, ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
