
‘ಡಿಯರ್ ಕ್ರಿಕೆಟ್ ನನಗೆ ಮತ್ತೊಂದು ಅವಕಾಶ ಕೊಡು’.. ಡಿಸೆಂಬರ್ 10, 2022 ರಲ್ಲಿ ಕನ್ನಡಿಗ ಕರುಣ್ ನಾಯರ್ (Karun Nair) ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದರು. ಅಂದು ಕರುಣ್ ಅವರ ಈ ಟ್ವೀಟ್ ನೋಡಿದ ಕ್ರಿಕೆಟ್ ಅಭಿಮಾನಿಗಳ ಮನಸು ಒಂದು ಕ್ಷಣ ಮರುಕ ಪಟ್ಟಿತ್ತು. ಪ್ರತಿಭಾವಂತ ಕ್ರಿಕೆಟಿಗನ ವೃತ್ತಿಜೀವನಕ್ಕೆ ಮತ್ತೊಂದು ಅವಕಾಶ ಸಿಗಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಇದಕ್ಕೆ ಪೂರಕವಾಗಿ ದೇಶಿ ಟೂರ್ನಿಯಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿದ್ದ ಕರುಣ್ ನಾಯರ್ಗೆ ಕೊನೆಗೂ 8 ವರ್ಷಗಳ ನಂತರ ಟೀಂ ಇಂಡಿಯಾದ (Team India) ಕದ ತೆರದಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸೂಚನೆಯನ್ನು ನೀಡಿದ ಕರುಣ್, ಅಭ್ಯಾಸ ಪಂದ್ಯದಲ್ಲಿ ಭರ್ಜರಿ ದ್ವಿಶತಕವನ್ನೂ ಸಿಡಿಸಿದ್ದರು. ಆದರೆ ಟೆಸ್ಟ್ ಸರಣಿ ಆರಂಭವಾದ ಬಳಿಕ ಕರುಣ್ ನಾಯರ್ ಅವರ ಬ್ಯಾಟ್ ಬೇರೆಯದ್ದೇ ಕಥೆ ಬರೆಯಿತು. ಆಡಿದ 6 ಇನ್ನಿಂಗ್ಸ್‌ಗಳಲ್ಲಿ ಕರುಣ್ ಬ್ಯಾಟ್ ಒಮ್ಮೆಯೂ ಆಗಸವನ್ನು ನೋಡಲಿಲ್ಲ. ಇದಕ್ಕೆ ಬೆಲೆಯಾಗಿ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ (Manchester Test) ಕರುಣ್ ನಾಯರ್ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ.
ವಾಸ್ತವವಾಗಿ ಕರುಣ್ ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಭಾರತದಲ್ಲಿ ನಡೆದ ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಇಂಗ್ಲೆಂಡ್ನಲ್ಲೂ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸಾಕಷ್ಟು ಪಂದ್ಯಗಳನ್ನಾಡಿದ್ದರು. ಹೀಗಾಗಿ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಕರುಣ್ ನಾಯರ್ ಅವರಿಂದ ಒಂದೇ ಒಂದು ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಅದರಲ್ಲೂ ಉತ್ತಮ ಆರಂಭ ಪಡೆದ ಬಳಿಕ ಕರುಣ್ ವಿಕೆಟ್ ಕೈಚೆಲ್ಲಿದ್ದು, ಮಾಜಿ ಆಟಗಾರರಿಗೆ ಹಾಗೂ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಹೀಗಾಗಿ ಕರುಣ್ರನ್ನು ಕೈಬಿಟ್ಟು ಬೇರೆ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಕೂಗು ಜೋರಾಗಿ ಕೇಳಿಬಂದಿತ್ತು. ಅದರಂತೆ ಇದೀಗ 4ನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ಬದಲಿಗೆ ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಲಾಗಿದೆ.
IND vs ENG: ಕರುಣ್ರನ್ನು ತಂಡದಿಂದ ತೆಗೆಯಬಾರದು ಎಂದ ಅನಿಲ್ ಕುಂಬ್ಳೆ; ನೀಡಿದ ಕಾರಣವೇನು?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ. ತಂಡದ ಟಾಪ್ 6 ಬ್ಯಾಟ್ಸ್‌ಮನ್‌ಗಳಲ್ಲಿ ಅರ್ಧಶತಕ ಬಾರಿಸದ ಏಕೈಕ ಆಟಗಾರನೆಂದರೆ ಅದು ಕರುಣ್ ನಾಯರ್. ಸರಣಿಯಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿರುವ ಕರುಣ್ 21.83 ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ. ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 0 ಮತ್ತು 20 ರನ್ ಬಾರಿಸಿ ಔಟಾಗಿದ್ದ ಕರುಣ್, ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಕ್ರಮವಾಗಿ 31 ಮತ್ತು 26 ರನ್ ಕಲೆಹಾಕಿದ್ದರು. ಆ ಬಳಿಕ ನಡೆದ ಲಾರ್ಡ್ಸ್ ಟೆಸ್ಟ್‌ನಲ್ಲಿ 40 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 14 ರನ್‌ಗಳಿಗೆ ಸುಸ್ತಾಗಿದ್ದರು. ಹೀಗಾಗಿ ಗೌತಮ್ ಗಂಭೀರ್ ಮತ್ತು ಶುಭ್ಮನ್ ಗಿಲ್ 4ನೇ ಟೆಸ್ಟ್ ಪಂದ್ಯದಿಂದ ಕರುಣ್ ನಾಯರ್ ಅವರನ್ನು ಹೊರಗಿಡಲು ನಿರ್ಧರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Wed, 23 July 25