IND vs ENG: ಪೋಪ್ ಹಿಡಿದ ಅದ್ಭುತ ಕ್ಯಾಚ್​ಗೆ ಕಮರಿದ ಕರುಣ್ ಕನಸು; ವಿಡಿಯೋ ನೋಡಿ

Karun Nair's Disappointing Comeback: ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅವರ 8 ವರ್ಷಗಳ ನಂತರದ ಮರಳುವಿಕೆ ನಿರಾಶಾದಾಯಕವಾಗಿತ್ತು. ಅವರು 4 ಎಸೆತಗಳಲ್ಲಿ 0 ರನ್‌ಗಳಿಗೆ ಔಟ್ ಆದರು. ಓಲಿ ಪೋಪ್ ಅವರ ಅದ್ಭುತ ಕ್ಯಾಚ್ ಇದಕ್ಕೆ ಕಾರಣ. ಕೌಂಟಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರುಣ್, ಭಾರತ ತಂಡಕ್ಕೆ ಮರಳಿದ್ದರೂ, ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ.

IND vs ENG: ಪೋಪ್ ಹಿಡಿದ ಅದ್ಭುತ ಕ್ಯಾಚ್​ಗೆ ಕಮರಿದ ಕರುಣ್ ಕನಸು; ವಿಡಿಯೋ ನೋಡಿ
Karun Nair

Updated on: Jun 21, 2025 | 8:03 PM

ಭಾರತ ಮತ್ತು ಇಂಗ್ಲೆಂಡ್ (England vs India) ನಡುವಿನ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾಗೆ ಮರಳಿದ್ದ ಕರುಣ್ ನಾಯರ್ (Karun Nair)​ಗೆ ಉತ್ತಮ ಕಮ್‌ಬ್ಯಾಕ್ ಮಾಡಲಾಗಲಿಲ್ಲ. ಲೀಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ದಿನದಂದು, ಕರುಣ್ ನಾಯರ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. 8 ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ಮರಳಿದ್ದ ಕರುಣ್ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಳಿದ್ದವು. ಪ್ರಸ್ತುತ ಕರುಣ್ ಅಮೋಘ ಫಾರ್ಮ್‌ನಲ್ಲಿದ್ದ ಕಾರಣ ಮತ್ತೊಮ್ಮೆ ಬಲಿಷ್ಠ ಇನ್ನಿಂಗ್ಸ್ ಆಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅಚ್ಚರಿಯ ಕ್ಯಾಚ್ ಅವರ ಉತ್ತಮ ಕಮ್‌ಬ್ಯಾಕ್‌ನ ಭರವಸೆಯನ್ನು ಹುಸಿಗೊಳಿಸಿತು.

ಕಳೆದ  ಎರಡು ವರ್ಷಗಳಲ್ಲಿ ಭಾರತದಲ್ಲಿ ನಡೆದ ದೇಶೀಯ ಕ್ರಿಕೆಟ್ ಮತ್ತು ಇಂಗ್ಲೆಂಡ್​ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಕರುಣ್ ನಾಯರ್‌ಗೆ ಈ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿತು. ಅಲ್ಲದೆ ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲೂ ಕರುಣ್, ಭಾರತ ಎ ಪರ ಅದ್ಭುತ ದ್ವಿಶತಕವನ್ನು ಬಾರಿಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧವೂ ಕರುಣ್ ಮತ್ತೆ ಅದೇ ಪ್ರದರ್ಶನ ನೀಡುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.

ಕರುಣ್ ಕನಸನ್ನು ಭಗ್ನಗೊಳಿಸಿದ ಅಚ್ಚರಿಯ ಕ್ಯಾಚ್‌

ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಂದು, ಕರುಣ್‌ಗೆ ದೊಡ್ಡ ಇನ್ನಿಂಗ್ಸ್ ಆಡುವ ಅವಕಾಶ ಸಿಕ್ಕಿತ್ತು. ಆದರೆ 2017 ರ ನಂತರ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಕರುಣ್ ಅವರ ಇನ್ನಿಂಗ್ಸ್ ಕೇವಲ 4 ಎಸೆತಗಳಲ್ಲಿ ಅಂತ್ಯಗೊಂಡಿತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಎಸೆತವನ್ನು ಬೌಂಡರಿಗಟ್ಟುವ ಯತ್ನದಲ್ಲಿ ಕರುಣ್ ಅದ್ಭುತ ಶಾಟ್ ಹೊಡೆದರು, ಆದರೆ ಕವರ್ಸ್‌ನಲ್ಲಿದ್ದ ಓಲಿ ಪೋಪ್ ಎಡಕ್ಕೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಪಡೆದರು.

IND vs ENG: 8 ವರ್ಷಗಳ ನಂತರ ಕರುಣ್​ಗೆ ತಂಡದಲ್ಲಿ ಸ್ಥಾನ; ಭಾವುಕ ಪೋಸ್ಟ್ ಹಂಚಿಕೊಂಡ ಮಡದಿ

ಕರುಣ್ ಶೂನ್ಯಕ್ಕೆ ಔಟ್

ಓಲಿ ಪೋಪ್ ಹಿಡಿದ ಈ ಫ್ಲೈಯಿಂಗ್ ಕ್ಯಾಚ್ ಹೆಡಿಂಗ್ಲಿಯಲ್ಲಿ ಹಾಜರಿದ್ದ ಇಂಗ್ಲಿಷ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರೆ, ಇತ್ತ ಭಾರತೀಯ ಅಭಿಮಾನಿಗಳು ನಿರಾಶೆಗೊಳ್ಳುವಂತೆ ಮಾಡಿತು. ಹೀಗಾಗಿ ಕರುಣ್ ನಾಯರ್ 4 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆಯೇ ಔಟಾದರು. ಆದಾಗ್ಯೂ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಂಚುವ ಅವಕಾಶ ಕರುಣ್ ನಾಯರ್‌ಗೆ ಇದ್ದು, ಅವರು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Sat, 21 June 25