IND vs ENG: ‘ಸ್ಟುಪಿಡ್ ಟು ಸೂಪರ್ಬ್’..; ತೆಗಳಿದವರಿಂದಲೇ ಹೊಗಳಿಸಿಕೊಂಡ ರಿಷಭ್ ಪಂತ್; ವಿಡಿಯೋ
Rishabh Pant's Century: ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರ ಅದ್ಭುತ ಶತಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದೆ. ಈ ಮೊದಲು ಆಸ್ಟ್ರೆಲಿಯಾ ಪ್ರವಾಸದಲ್ಲಿ ಪಂತ್ ಅವರನ್ನು ಟೀಕಿಸಿದ್ದ ಸುನಿಲ್ ಗವಾಸ್ಕರ್ ಅವರು ಈಗ ಪಂತ್ ಅವರನ್ನು ಹಾಡಿ ಹೊಗಳಿದ್ದಾರೆ. 146 ಎಸೆತಗಳಲ್ಲಿ 134 ರನ್ ಗಳಿಸಿದ ಪಂತ್ 10 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. ಗವಾಸ್ಕರ್ ಅವರ ಹೊಗಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅದ್ಭುತ ಶತಕ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಅತ್ತ ಮೈದಾನದಲ್ಲಿ ಪಂತ್ ಶತಕ ಪೂರೈಸಿದ ತಕ್ಷಣ, ಇತ್ತ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಮೆಂಟರಿ ಮಾಡುತಿದ್ದ ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar) ಪಂತ್ರನ್ನು ಹಾಡಿ ಹೊಗಳಿದ್ದಾರೆ. ವಾಸ್ತವವಾಗಿ ಇದೇ ಗವಾಸ್ಕರ್, ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಪಂತ್ರನ್ನು ಸ್ಟುಪಿಡ್ ಎಂದು ಜರಿದಿದ್ದರು .
ಸೂಪರ್ಬ್ ಎಂದ ಗವಾಸ್ಕರ್
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ 146 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು, ಇದರಲ್ಲಿ 10 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ತಮ್ಮ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಪಂತ್, ಆರಂಭದಲ್ಲಿ ಸಮಯ ತೆಗೆದುಕೊಂಡರಾದರೂ ಆ ನಂತರ ತಮ್ಮ ಆಕ್ರಮಣಕಾರಿ ಶೈಲಿ ಬ್ಯಾಟಿಂಗ್ ಆರಂಭಿಸಿದರು. ಪಂತ್ ಲೀಡ್ಸ್‌ನಲ್ಲಿ ಶತಕ ಪೂರೈಸಿದ ತಕ್ಷಣ, ಇಡೀ ಕ್ರೀಡಾಂಗಣವೇ ಎದ್ದು ನಿಂತು ಚಪ್ಪಾಳಿ ತಟ್ಟಿ ಗೌರವಿಸಿತು. ಅವರ ಜೊತೆಗೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಗವಾಸ್ಕರ್ ಕೂಡ ಖುಷಿಯಿಂದ ಎದ್ದು ನಿಂತು ‘ಸೂಪರ್ಬ್, ಸೂಪರ್ಬ್, ಸೂಪರ್ಬ್’ ಎಂದು ಹೇಳಿದರು. ಇದೀಗ ಗವಾಸ್ಕರ್ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ತೆಗಳಿದವರಿಂದಲೇ ಹೊಗಳಿಸಿಕೊಂಡ ಪಂತ್ಗೆ ಶಹಬ್ಬಾಸ್ಗಿರಿ ಸಿಕ್ಕಿದೆ.
THE 7TH TEST CENTURY MOMENT FOR RISHABH PANT AT LEEDS.!!!
– Sunil Gavaskar said “- Superb, Superb, Superb”.!!!
— MANU. (@IMManu_18) June 21, 2025
ಆಸ್ಟ್ರೇಲಿಯಾದಲ್ಲಿ ಪಂತ್ ಕಳಪೆ ಆಟ
ವಾಸ್ತವವಾಗಿ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂದರೆ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪಂತ್ ಅವರ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ಆ ಪ್ರವಾಸದಲ್ಲಿ ಪಂತ್ ಕೆಟ್ಟ ಹೊಡೆತವನ್ನು ಆಡುವ ಮೂಲಕ ಸಾಕಷ್ಟು ಬಾರಿ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಈ ಸರಣಿಯಲ್ಲೂ ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್, ಪಂತ್ ಅವರನ್ನು ತೀವ್ರವಾಗಿ ಟೀಕಿಸಿದರು ಮತ್ತು ‘ಮೂರ್ಖ, ಮೂರ್ಖ, ಮೂರ್ಖ’ ಎಂದು ಹೇಳುವ ಮೂಲಕ ಜರಿದಿದ್ದರು. ಆ ಸಮಯದಲ್ಲಿ ಗವಾಸ್ಕರ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಆದರೆ ಲೀಡ್ಸ್‌ನಲ್ಲಿ ಗವಾಸ್ಕರ್ ಅವರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದ ಪಂತ್, ಲಿಟಲ್ ಮಾಸ್ಟರ್ ಅವರಿಂದ ಹೊಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
IND vs ENG: ಆಂಗ್ಲರ ಲೆಕ್ಕಾಚಾರವನ್ನು ಉಲ್ಟಾ ಪಲ್ಟಾ ಮಾಡಿ ಪಲ್ಟಿ ಹೊಡೆದ ಪಂತ್; ವಿಡಿಯೋ ನೋಡಿ
134 ರನ್ ಬಾರಿಸಿದ ಪಂತ್
ಗವಾಸ್ಕರ್ ಅವರ ಈ ಹೊಗಳಿಕೆ ಪಂತ್ ಅವರಿಗೆ ಸಂದಿರುವ ದೊಡ್ಡ ಗೌರವ, ಏಕೆಂದರೆ ಗವಾಸ್ಕರ್ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲದೆ ಕ್ರಿಕೆಟ್‌ನ ಪರಿಣತರೂ ಆಗಿದ್ದಾರೆ. ಪಂತ್ ಅವರ ಇನ್ನಿಂಗ್ಸ್ ಮತ್ತು ಗವಾಸ್ಕರ್ ಅವರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚಿಸಲಾಗುತ್ತಿದೆ. ಅಭಿಮಾನಿಗಳು ಪಂತ್ ಅವರನ್ನು ಹೊಗಳುತ್ತಿದ್ದು, ಈ ಕ್ಷಣವನ್ನು ಭಾರತೀಯ ಕ್ರಿಕೆಟ್‌ಗೆ ಸ್ಮರಣೀಯ ಕ್ಷಣ ಎಂದು ಕರೆದಿದ್ದಾರೆ. ಅಂತಿಮವಾಗಿ ಪಂತ್ ಈ ಇನ್ನಿಂಗ್ಸ್‌ನಲ್ಲಿ ಒಟ್ಟು 12 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳ ಸಹಿತ 134 ರನ್ ಬಾರಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ