IND vs ENG: ಲೀಡ್ಸ್ ಟೆಸ್ಟ್‌ನಲ್ಲಿ ಭಾರತದ 3ನೇ ಶತಕ; ಭರ್ಜರಿ ಸೆಂಜುರಿ ಸಿಡಿಸಿದ ರಿಷಭ್ ಪಂತ್
Rishabh Pant Century: ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಮೊದಲ ದಿನ 3 ವಿಕೆಟ್‌ಗೆ 359 ರನ್ ಗಳಿಸಿತ್ತು. ಎರಡನೇ ದಿನವೂ ಉತ್ತಮ ಆರಂಭ ಪಡೆದ ಭಾರತ, ಶುಭ್ಮನ್ ಗಿಲ್ ಮತ್ತು ರಿಷಬ್ ಪಂತ್ ಅವರ ಅದ್ಭುತ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ಮೇಲೆ ಮೇಲುಗೈ ಸಾಧಿಸಿದೆ. ಇದೇ ವೇಳೆ ಉಪನಾಯಕ ರಿಷಬ್ ಪಂತ್ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತ್ತಿರುವ ಟೀಂ ಇಂಡಿಯಾ, ಆಂಗ್ಲರ ವಿರುದ್ಧ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಬಾರಿಸಿದ್ದ ಭಾರತ, ಎರಡನೇ ದಿನದಾಟವನ್ನು ಸಹ ಉತ್ತಮವಾಗಿ ಆರಂಭಿಸಿದೆ. ಮೊದಲ ದಿನದಾಟದಲ್ಲಿ ಅಜೇಯರಾಗಿ ಉಳಿದಿದ್ದ ನಾಯಕ ಶುಭ್ಮನ್ ಗಿಲ್ (Shubman Gill) ಹಾಗೂ ರಿಷಭ್ ಪಂತ್ (Rishabh Pant) ಎರಡನೇ ದಿನವೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಉಪನಾಯಕ ರಿಷಭ್ ಪಂತ್ ಎಂದಿನಂತೆ ತಮ್ಮ ಹೊಡಿಬಡಿ ಆಟದ ಮೂಲಕ ಆಂಗ್ಲರ ಹೆಡೆಮುರಿ ಕಟ್ಟಿದ್ದು, ಎರಡನೇ ದಿನದಾಟದ ಮೊದಲ ಸೆಷನ್ನಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ರಿಷಭ್ ಪಂತ್ ದಾಖಲೆಯ ಶತಕ
ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 146 ಎಸೆತಗಳನ್ನು ತೆಗೆದುಕೊಂಡ ಪಂತ್ 10 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ ಏಳನೇ ಶತಕವನ್ನು ದಾಖಲಿಸಿದ್ದಲ್ಲದೆ, ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದರು. ಅಲ್ಲದೆ 2025 ರಲ್ಲಿ ರಿಷಭ್ ಬ್ಯಾಟ್ನಿಂದ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ. ಶೋಯೆಬ್ ಬಶೀರ್ ಎಸೆತದಲ್ಲಿ ಪಂತ್ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.
HUNDRED for Vice-captain Rishabh Pant! 🫡
His 7th TON in Test cricket 👏👏
4⃣0⃣0⃣ up for #TeamIndia in the 1st innings 👌👌
Updates ▶️ https://t.co/CuzAEnBkyu#ENGvIND | @RishabhPant17 pic.twitter.com/IowAP2df6L
— BCCI (@BCCI) June 21, 2025
ಈ ಶತಕದ ಮೂಲಕ ಪಂತ್, ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ವಿರುದ್ಧವೇ 4 ಶತಕ ಬಾರಿಸಿರುವ ಪಂತ್, ಈ ತಂಡದ ವಿರುದ್ಧ ಆಡಲು ಇಷ್ಟಪಡುತ್ತಾರೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಇದು ಮಾತ್ರವಲ್ಲದೆ ನಾಯಕ ಶುಭ್ಮನ್ ಗಿಲ್ ಜೊತೆ ಉತ್ತಮ ಜೊತೆಯಾಟವನ್ನು ಕಟ್ಟಿದ ಪಂತ್, ತಂಡವನ್ನು 400 ರನ್ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
IND vs ENG: ರಿಷಭ್ ಪಂತ್ಗೆ ಕೈ ಮುಗಿದ ರಾಹುಲ್; ವಿಡಿಯೋ ಹಂಚಿಕೊಂಡ ಬಿಸಿಸಿಐ
ಧೋನಿಯನ್ನು ಹಿಂದಿಕ್ಕಿದ ಪಂತ್
ರಿಷಭ್ ಪಂತ್ 7 ಶತಕಗಳನ್ನು ಪೂರೈಸುವುದರೊಂದಿಗೆ ಭಾರತ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಧೋನಿ ಟೆಸ್ಟ್‌ನಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಭಾರತೀಯ ವಿಕೆಟ್‌ಕೀಪರ್ ಟೆಸ್ಟ್‌ನಲ್ಲಿ 3 ಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Sat, 21 June 25