AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Hundred: ಕಾವ್ಯ ಮಾರನ್ ಒಡೆತನದ ತಂಡಕ್ಕೆ ಚೊಚ್ಚಲ ಚಾಂಪಿಯನ್ ಕಿರೀಟ

The Hundred: ಕಾವ್ಯ ಮಾರನ್ ಮಾಲೀಕತ್ವದ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವು ಇಂಗ್ಲೆಂಡ್‌ನ ಮಹಿಳಾ ದಿ ಹಂಡ್ರೆಡ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಸದರ್ನ್ ಬ್ರೇವ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಈ ಗೆಲುವು ಸಾಧಿಸಿದೆ. ಅನ್ನಾಬೆಲ್ ಸದರ್ಲ್ಯಾಂಡ್ ಅವರ ಅದ್ಭುತ ಪ್ರದರ್ಶನ ಮತ್ತು ಫೈನಲ್‌ನಲ್ಲಿ ಸದರ್ನ್ ಬ್ರೇವ್ ತಂಡದ ಕಳಪೆ ಪ್ರದರ್ಶನ ಗೆಲುವಿಗೆ ಕಾರಣವಾಯಿತು. ಸೂಪರ್‌ಚಾರ್ಜರ್ಸ್ ತಂಡವು ತನ್ನ ಮೊದಲ ದಿ ಹಂಡ್ರೆಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

The Hundred: ಕಾವ್ಯ ಮಾರನ್ ಒಡೆತನದ ತಂಡಕ್ಕೆ ಚೊಚ್ಚಲ ಚಾಂಪಿಯನ್ ಕಿರೀಟ
The Hundred
ಪೃಥ್ವಿಶಂಕರ
|

Updated on: Aug 31, 2025 | 10:46 PM

Share

ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿರಬಹುದು, ಆದರೆ ಈ ಫ್ರಾಂಚೈಸಿಯ ಮಾಲೀಕಿ ಕಾವ್ಯ ಮಾರನ್ (Kavya Maran) ಒಡೆತನದ ಹೊಸ ತಂಡವಾದ ನಾರ್ದರ್ನ್ ಸೂಪರ್‌ಚಾರ್ಜರ್ಸ್ (Northern Superchargers), ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ‘ದಿ ಹಂಡ್ರೆಡ್’ ನಲ್ಲಿ (The Hundred) ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆಗಸ್ಟ್ 31 ರ ಭಾನುವಾರದಂದು ನಡೆದ ಮಹಿಳಾ ಹಂಡ್ರೆಡ್ ಫೈನಲ್‌ ಪಂದ್ಯದಲ್ಲಿ ಸೂಪರ್‌ಚಾರ್ಜರ್ಸ್, ಸದರ್ನ್ ಬ್ರೇವ್ ತಂಡವನ್ನು ಏಕಪಕ್ಷೀಯವಾಗಿ 7 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಸೂಪರ್‌ಚಾರ್ಜರ್ಸ್ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಮಾತ್ರವಲ್ಲದೆ, ಸದರ್ನ್ ಬ್ರೇವ್ ತಂಡದ ವಿರುದ್ಧದ ಎರಡು ವರ್ಷಗಳ ಹಿಂದಿನ ಫೈನಲ್‌ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿದೆ.

ಕೇವಲ 115 ರನ್​ಗಳ ಟಾರ್ಗೆಟ್

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸದರ್ನ್ ಬ್ರೇವ್ ಮೊದಲು ಬ್ಯಾಟಿಂಗ್ ಮಾಡಿತು. ಈ ಟೂರ್ನಿಯ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಬ್ರೇವ್, ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಹೀಗಾಗಿ ಈ ತಂಡವನ್ನು ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಫೈನಲ್‌ನಲ್ಲಿ ಮಾತ್ರ ತಂಡದ ಬ್ಯಾಟರ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾರ್ದರ್ನ್ ಸೂಪರ್‌ಚಾರ್ಜರ್ಸ್‌ ತಂಡದ ಬೌಲರ್​ಗಳ ದಾಳಿಗೆ ನಲುಗಿದ ಸದರ್ನ್ ಬ್ರೇವ್ ಬ್ಯಾಟರ್​​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಇಡೀ ತಂಡವು 100 ಎಸೆತಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 115 ರನ್‌ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು.

ಸದರ್ನ್ ಬ್ರೇವ್ ಪರ, ಫ್ರೇಯಾ ಕ್ಯಾಂಪ್ 16 ಎಸೆತಗಳಲ್ಲಿ 26 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ, ಮ್ಯಾಡಿ ವಿಲಿಯರ್ಸ್ 11 ಎಸೆತಗಳಲ್ಲಿ ಅಜೇಯ 17 ರನ್ ಗಳಿಸುವ ಮೂಲಕ ಸ್ಕೋರ್ ಅನ್ನು 100 ರನ್​ಗಳ ಗಡಿ ದಾಟಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಸೂಪರ್‌ಚಾರ್ಜರ್ಸ್ ಪರ, ಕೇಟ್ ಕ್ರಾಸ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ತಲಾ ತಲಾ 2 ವಿಕೆಟ್ ಪಡೆದರು.

ಸದರ್ಲ್ಯಾಂಡ್ ಆಲ್​ರೌಂಡರ್ ಪ್ರದರ್ಶನ

ಮೊದಲು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸದರ್ಲ್ಯಾಂಡ್, ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಸೂಪರ್‌ಚಾರ್ಜರ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದಾಗ್ಯೂ, ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎಲಿಮಿನೇಟರ್‌ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ ಶತಕ ಬಾರಿಸಿದ್ದ 18 ವರ್ಷದ ಆರಂಭಿಕ ಆಟಗಾರ್ತಿ ಡೇವಿನಾ ಪೆರಿನ್ ಕೇವಲ 17 ರನ್ ಗಳಿಸಿ ಔಟಾದರು. ಆದರೆ ಆ ಬಳಿಕ ಬಂದ ಫೋಬೆ ಲಿಚ್‌ಫೀಲ್ಡ್, ಸದರ್ಲ್ಯಾಂಡ್ ಮತ್ತು ನಿಕೋಲಾ ಕ್ಯಾರಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ 88 ಎಸೆತಗಳಲ್ಲಿ ತಂಡವನ್ನು ಗುರಿಯತ್ತ ಕೊಂಡೊಯ್ದರು. ಸದರ್ಲ್ಯಾಂಡ್ ಇನ್ನಿಂಗ್ಸ್‌ನ 88 ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಸೂಪರ್‌ಚಾರ್ಜರ್ಸ್‌ಗೆ ಜಯ ತಂದುಕೊಟ್ಟರು. ಇದರೊಂದಿಗೆ, ಎರಡನೇ ಬಾರಿಗೆ ಫೈನಲ್ ಆಡುತ್ತಿರುವ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ