IPL 2024: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮತ್ತೆ ಬಂದ ಕೇದಾರ್ ಜಾಧವ್..!

| Updated By: ಝಾಹಿರ್ ಯೂಸುಫ್

Updated on: Dec 03, 2023 | 5:07 PM

Kedar Jadav: ಮೂರು ವರ್ಷಗಳ ಕಾಲ ಸಿಎಸ್​ಕೆ ತಂಡದಲ್ಲಿದ್ದ ಕೇದರ್ 2021 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್​ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ.

IPL 2024: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮತ್ತೆ ಬಂದ ಕೇದಾರ್ ಜಾಧವ್..!
Kedar Jadhav
Follow us on

IPL 2024: ಐಪಿಎಲ್ ಸೀಸನ್ 17 ಆಟಗಾರರ ಹರಾಜಿಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರಲ್ಲಿ 38 ವರ್ಷದ ಕೇದಾರ್ ಜಾಧವ್ (Kedar Jadhav)  ಹೆಸರು ಕೂಡ ಕಾಣಿಸಿಕೊಂಡಿರುವುದು ವಿಶೇಷ.

ಆದರೆ ಈ ಬಾರಿ ಕೂಡ 2 ಕೋಟಿ ರೂ. ಮೂಲ ಬೆಲೆಯನ್ನು ಘೋಷಿಸಿದ್ದಾರೆ. ಅಂದರೆ ಜಾಧವ್ ಅವರನ್ನು ಖರೀದಿಸಲು ಐಪಿಎಲ್​ ಫ್ರಾಂಚೈಸಿಗಳ ಪ್ರಾರಂಭಿಕ ಬಿಡ್ 2 ಕೋಟಿ ರೂ. ಆಗಿರಲಿದೆ. ಕಳೆದ ಬಾರಿ ಕೂಡ ಒಂದು ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಜಾಧವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಇದಾಗ್ಯೂ ಆರ್​ಸಿಬಿ ಆಟಗಾರ ಡೇವಿಡ್ ವಿಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಾಗ ಅವರ ಸ್ಥಾನಕ್ಕೆ ಬದಲಿಯಾಗಿ ಕೇದಾರ್ ಜಾಧವ್ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಜಾಧವ್ ಅವರನ್ನು ಆರ್​ಸಿಬಿ ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಹರಾಜಿನ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ 38 ವರ್ಷದ ಹಿರಿಯ ಆಟಗಾರ.

ಕೇದಾರ್ ಜಾಧವ್ 2009 ರಿಂದ ಐಪಿಎಲ್ ಟೂರ್ನಿ ಆಡುತ್ತಿದ್ದಾರೆ. ಆರ್​ಸಿಬಿ ಪರ ಚೊಚ್ಚಲ ಬಾರಿ ಆಡಿದ್ದ ಜಾಧವ್ ಆ ಬಳಿಕ ಡೆಲ್ಲಿ ಡೇರ್​ ಡೆವಿಲ್ಸ್​ ತಂಡದ ಪಾಲಾಗಿದ್ದರು.

ಇನ್ನು 2011 ರಲ್ಲಿ ಕೊಚ್ಚಿ ಟಸ್ಕರ್ಸ್​ ತಂಡದ ಕಣಕ್ಕಿಳಿದಿದ್ದರು. ಇದಾದ ಬಳಿಕ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮೂರು ಸೀಸನ್ ಆಡಿದ್ದರು. 2016 ಮತ್ತು 2017 ರಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಾಧವ್, 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪಾಲಾಗಿದ್ದರು.

ಮೂರು ವರ್ಷಗಳ ಕಾಲ ಸಿಎಸ್​ಕೆ ತಂಡದಲ್ಲಿದ್ದ ಕೇದರ್ 2021 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್​ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ. ಐದು ತಂಡಗಳ ಪರ ಒಟ್ಟು 92 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಾಧವ್ ಕಲೆಹಾಕಿರುವುದು 1184 ರನ್ ಮಾತ್ರ.

ಹಾಗೆಯೇ ಕಳೆದ ನಾಲ್ಕು ಸೀಸನ್​ಗಳಲ್ಲಿ ಜಾಧವ್ ಒಟ್ಟು 28 ಪಂದ್ಯಗಳನ್ನಾಡಿದ್ದರು. ಇದರಲ್ಲಿ ಮೂಡಿ ಬಂದಿರುವುದು ಕೇವಲ 291 ರನ್ ಮಾತ್ರ. ಅಂದರೆ 297 ಎಸೆತಗಳನ್ನು ಎದುರಿಸಿ ಜಾಧವ್ ಕಲೆಹಾಕಿರುವುದು ಕೇವಲ 291 ರನ್​ ಮಾತ್ರ. ಇಂತಹ ಕಳಪೆ ಪ್ರದರ್ಶನದ ಹೊರತಾಗಿಯೂ 2021 ರ ಹರಾಜಿನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಜಾಧವ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಎಸ್​ಆರ್​ಹೆಚ್​ ಪರ ಐದು ಇನಿಂಗ್ಸ್​ಗಳಿಂದ ಕಲೆಹಾಕಿದ್ದು 43 ರನ್​ ಮಾತ್ರ.

ಇದನ್ನೂ ಓದಿ: IPL 2024: ಕಡಿಮೆ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿದ ರಚಿನ್ ರವೀಂದ್ರ

ಅಲ್ಲದೆ 2023 ರಲ್ಲಿ ಆರ್​ಸಿಬಿ ಪರ 2 ಪಂದ್ಯಗಳನ್ನಾಡಿದ್ದ ಕೇದಾರ್ ಜಾಧವ್ ಕೇವಲ 12 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಇದೀಗ ಮತ್ತೊಮ್ಮೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿರುವ ಜಾಧವ್ ಅವರನ್ನು ಯಾವ ತಂಡ ಖರೀದಿಸಲಿದೆ ಎಂಬ ಕುತೂಹಲ ಹಲವರಲ್ಲಿದೆ.