DC vs KKR: ಬರೋಬ್ಬರಿ 8 ಆಟಗಾರರಿಗೆ ಬೌಲಿಂಗ್ ನೀಡಿದ ಶ್ರೇಯಸ್: ಆದರೂ ಗೆಲ್ಲಲಿಲ್ಲ ಕೆಕೆಆರ್
Shreyas Iyer, IPL 2022: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ (DC vs KKR) ಕುಲ್ದೀಪ್ ಯಾದವ್ ಬೌಲಿಂಗ್ ದಾಳಿಗೆ ತತ್ತರಿಸಿ ಹೀನಾಯ ಪ್ರದರ್ಶನ ನೀಡಿತು. ಕೋಲ್ಕತ್ತಾ ಪರ ಐದು ಬ್ಯಾಟರ್ಗಳು ಸೊನ್ನೆ ಸುತ್ತಿದರು. ಎರಡಂಕಿ ಸ್ಕೋರ್ ದಾಟಿದ್ದು ಮೂವರು ಬ್ಯಾಟರ್ಗಳಿಂದ ಮಾತ್ರ.
ಐಪಿಎಲ್ 2022 ರಲ್ಲಿ (IPL 2022) ಹೊಸ ನಾಯಕನೊಂದಿಗೆ ಕಣಕ್ಕಿಳಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ. ಟೂರ್ನಿಯಲ್ಲಿ ಆರಂಭದಲ್ಲಿ ಗೆಲುವಿನ ನಗೆ ಬೀರಿದ್ದ ಶ್ರೇಯಸ್ ಅಯ್ಯರ್ ಪಡೆ ಇದೀಗ ಸತತ ಐದು ಸೋಲುಗಳನ್ನು ಕಂಡು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆದ್ದು ಉಳಿದ ಆರು ಪಂದ್ಯಗಳಲ್ಲಿ ಸೋಲುಂಡು ಪಾಯಿಂಟ್ ಟೇಬಲ್ನಲ್ಲಿ ಎಂಟನೇ ಸ್ಥಾನದಲ್ಲಿದೆ. ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಕೆಕೆಆರ್ (DC vs KKR) ಕುಲ್ದೀಪ್ ಯಾದವ್ ಬೌಲಿಂಗ್ ದಾಳಿಗೆ ತತ್ತರಿಸಿ ಹೀನಾಯ ಪ್ರದರ್ಶನ ನೀಡಿತು. ಕೋಲ್ಕತ್ತಾ ಪರ ಐದು ಬ್ಯಾಟರ್ಗಳು ಸೊನ್ನೆ ಸುತ್ತಿದರು. ಎರಡಂಕಿ ಸ್ಕೋರ್ ದಾಟಿದ್ದು ಮೂವರು ಬ್ಯಾಟರ್ಗಳಿಂದ ಮಾತ್ರ. ಇದರ ನಡುವೆ ಶ್ರೇಯಸ್ ಅಯ್ಯರ್ (Shreyas Iyer) ಬೌಲಿಂಗ್ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 8 ಬೌಲರ್ಗಳನ್ನು ಆಡಿಸಿ ಅಚ್ಚರಿ ಮೂಡಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿಯೆಂದು ಸಾಬೀತು ಮಾಡಿದ ಬೌಲರ್‌ಗಳು ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿದರು. ಪರಿಣಾಮ 35 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಫಿಂಚ್ (3), ವೆಂಕಟೇಶ್ ಅಯ್ಯರ್ (6), ಬಾಬಾ ಇಂದ್ರಜಿತ್ (6) ಹಾಗೂ ಸುನಿಲ್ ನರೈನ್ (0) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ 49 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. 13ನೇ ಓವರ್‌ನಲ್ಲಿ ಮಗದೊಮ್ಮೆ ಕೆಕೆಆರ್ ತಂಡವನ್ನು ಕಾಡಿದ ಕುಲ್ದೀಪ್, ಅಯ್ಯರ್ ಜೊತೆಗೆ ಆಂಡ್ರೆ ರಸೆಲ್ (0) ವಿಕೆಟ್ ಕಬಳಿಸಿ ಆಘಾತ ನೀಡಿದರು. 37 ಎಸೆತಗಳನ್ನು ಎದುರಿಸಿದ ಅಯ್ಯರ್ ನಾಲ್ಕು ಬೌಂಡರಿ ನೆರವಿನಿಂದ 42 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ರಿಂಕು ಸಿಂಗ್ ಜೊತೆಗೂಡಿದ ನಿತೀಶ್ ರಾಣಾ ಕೊಂಚ ರನ್ ಕಲೆಹಾಕಿ ತಂಡಕ್ಕೆ ಆಧಾರವಾದರು. ಪರಿಣಾಮ ಕೆಕೆಆರ್ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. 34 ಎಸೆತಗಳನ್ನು ಎದುರಿಸಿದ ರಾಣಾ 57 ರನ್ (3 ಬೌಂಡರಿ, 4 ಸಿಕ್ಸರ್) ಸಿಡಿಸಿದರು. ರಿಂಕು 23 ರನ್ ಗಳಿಸಿದರು. ಡೆಲ್ಲಿ ಪರ ಕುಲ್ದೀಪ್ ಯಾದವ್ ಕೇವಲ 14 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ಇತ್ತ ಸುಲಭ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಪೃಥ್ವಿ ಶಾ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡರೂ ಚೇತರಿಸಿಕೊಂಡ ಡೆಲ್ಲಿ ಹೋರಾಟ ಮುಂದುವರಿಸಿತು. ಡೇವಿಡ್ ವಾರ್ನರ್ 42 ರನ್, ಮಿಚೆಲ್ ಮಾರ್ಷ್ 13 ರನ್, ಲಲಿತ್ ಯಾದವ್ 22 ರನ್, ನಾಯಕ ರಿಷಭ್ ಪಂಥ್ ಕೇವಲ 2 ರನ್ ಗಳಿಸಿದರು. ಅಂತಿಮ ಹಂತದಲ್ಲಿ ರೋವೆಲ್ ಪೋಮೆನ್ 33 ರನ್ ಮತ್ತು ಅಕ್ಷರ್ ಪಟೇಲ್ 24 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
8 ಬೌಲರ್‌ಗಳು:
ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಬೌಲಿಂಗ್ ಮಾಡಲು ಎಂಟು ಜನರನ್ನು ಕಣಕ್ಕಿಳಿಸಿದರು. ಉಮೇಶ್ ಯಾದವ್, ಹರ್ಶಿತ್ ರಾಣ, ಟಿಮ್ ಸೌಥೀ, ಸುನಿಲ್ ನರೈನ್, ನಿತೀಶ್ ರಾಣ, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ಸ್ವತಃ ಶ್ರೇಯಸ್ ಅಯ್ಯರ್ ಕೂಡ ಬೌಲಿಂಗ್ ಮಾಡಿದರು. ಆದರೆ, ಇದು ಯಶಸ್ವಿಯಾಗಲಿಲ್ಲ. ಕೆಕೆಆರ್ ಪರ ಉತ್ತಮ ಬೌಲಿಂಗ್ ಮಾಡಿದ ಉಮೇಶ್ ಯಾದವ್ 4 ಓವರ್ ಮಾಡಿ 24 ರನ್ ಗೆ 3 ವಿಕೆಟ್ ಪಡೆದರು. ಹರ್ಷಿತ್ ರಾಣಾ ಮತ್ತು ಸುನೀಲ್ ನರೇನ್ ತಲಾ 1 ವಿಕೆಟ ಪಡೆದು ಮಿಂಚಿದರು.
IPL 2022: RCB ಆರಂಭಿಕ ಜೋಡಿ ಬದಲಾಗ್ತಾರಾ?
Published On - 7:41 am, Fri, 29 April 22