DC vs KKR: ಕೆಕೆಆರ್ ವಿರುದ್ಧ ಸೋತು ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಡೆಲ್ಲಿ
IPL 2026 KKR vs DC: ಐಪಿಎಲ್ 2026ರ 51ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ಸತತ ನಾಲ್ಕನೇ ಗೆಲುವು ದಾಖಲಿಸಿತು. 143 ರನ್‌ಗಳ ಗುರಿಯನ್ನು ಕೆಕೆಆರ್ 14.2 ಓವರ್‌ಗಳಲ್ಲಿ ಸುಲಭವಾಗಿ ತಲುಪಿತು. ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ಐಪಿಎಲ್ 2026 (IPL 2026) ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ, ಸತತ ನಾಲ್ಕನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 142 ರನ್ ಗಳಿಸಿತು, ಕೆಕೆಆರ್‌ಗೆ 143 ರನ್‌ಗಳ ಗುರಿಯನ್ನು ನೀಡಿತು. ಕೆಕೆಆರ್ 14.2 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸುವ ಮೂಲಕ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಡೆಲ್ಲಿ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಗಿಯುವುದು ಖಚಿತವಾಗಿದೆ. ಏಕೆಂದರೆ ಉಳಿದಿರುವ 3 ಪಂದ್ಯಗಳನ್ನು ಗೆದ್ದರೂ ಡೆಲ್ಲಿ ಬಳಿ ಕೇವಲ 14 ಅಂಕಗಳು ಇರಲಿವೆ. ಪ್ಲೇಆಫ್ಗೇರಲು ಇಷ್ಟು ಅಂಕಗಳು ಸಾಕಾಗುವುದಿಲ್ಲವಾಗಿರುವುದರಿಂದ ಡೆಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಡೆಲ್ಲಿ ಬ್ಯಾಟಿಂಗ್ ವೈಫಲ್ಯ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು. ಡೆಲ್ಲಿ ತಂಡವು 51 ಡಾಟ್ ಬಾಲ್‌ಗಳನ್ನು ಎದುರಿಸಿ, 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 142 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಪಾಥುಮ್ ನಿಸ್ಸಂಕಾ 30 ಎಸೆತಗಳಲ್ಲಿ 50 ರನ್‌ಗಳ ಗರಿಷ್ಠ ಇನ್ನಿಂಗ್ಸ್ ಆಡಿದರೆ, ಕೆಎಲ್ ರಾಹುಲ್ 14 ಎಸೆತಗಳಲ್ಲಿ 23 ರನ್ ಮತ್ತು ಅಶುತೋಷ್ ಶರ್ಮಾ ಕೂಡ 28 ಎಸೆತಗಳಲ್ಲಿ 39 ರನ್ ಗಳಿಸಿದರು. ಆದಾಗ್ಯೂ, ಉಳಿದ ಬ್ಯಾಟ್ಸ್‌ಮನ್‌ಗಳು ಗಮನಾರ್ಹ ಪರಿಣಾಮ ಬೀರುವಲ್ಲಿ ವಿಫಲರಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಬೌಲಿಂಗ್ನಲ್ಲಿ ಮಿಂಚಿದ ಅನುಕುಲ್ ರಾಯ್ ಮತ್ತು ಕಾರ್ತಿಕ್ ತ್ಯಾಗಿ ತಲಾ ಎರಡು ವಿಕೆಟ್ ಪಡೆದರು. ವೈಭವ್ ಅರೋರಾ, ಸುನಿಲ್ ನರೈನ್ ಮತ್ತು ಕ್ಯಾಮರೂನ್ ಗ್ರೀನ್ ಕೂಡ ತಲಾ ಒಂದು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ವಿಕೆಟ್ ಪಡೆಯದಿದ್ದರೂ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ಬಿಟ್ಟುಕೊಟ್ಟರು.
ಫಿನ್ ಅಲೆನ್ ಬಿರುಗಾಳಿಯ ಶತಕ
ಈ ಗುರಿ ಬೆನ್ನಟ್ಟಿದ ಕೆಕೆಆರ್ ಪರ ನ್ಯೂಜಿಲೆಂಡ್‌ನ ಸ್ಫೋಟಕ ಆರಂಭಿಕ ಆಟಗಾರ ಫಿನ್ ಅಲೆನ್ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ದಾಖಲಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ಅಲೆನ್ ಐದು ಬೌಂಡರಿ ಮತ್ತು ಹತ್ತು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 100 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 212.76 ಆಗಿತ್ತು. ಈ ಮೂಲಕ ಅಲೆನ್ ಕೆಕೆಆರ್ ಪರ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ಸೃಷ್ಟಿಸಿದರು. ಅಲೆನ್ ಅಬ್ಬರದಿಂದಾಗಿ ಕೆಕೆಆರ್ ಈ ಪಂದ್ಯವನ್ನು ಕೇವಲ 14.2 ಓವರ್‌ಗಳಲ್ಲಿ ಗೆದ್ದುಕೊಂಡಿತು. ಅಲೆನ್ ಹೊರತುಪಡಿಸಿ ಕ್ಯಾಮರೂನ್ ಗ್ರೀನ್ ಕೂಡ 27 ಎಸೆತಗಳಲ್ಲಿ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮಧ್ಯೆ, ದೆಹಲಿ ಪರ ಅಕ್ಷರ್ ಪಟೇಲ್ ಮಾತ್ರ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಉಳಿದ ಬೌಲರ್‌ಗಳು ಶೋಚನೀಯವಾಗಿ ವಿಫಲರಾದರು.
Published On - 10:49 pm, Fri, 8 May 26




