KKR vs CSK: ಫೈನಲ್​ನಲ್ಲಿ ಸೋಲಿಲ್ಲದ ಸರದಾರ ಕೆಕೆಆರ್: ಈ ಬಾರಿ ಕೂಡ ಗೆಲ್ಲುತ್ತಾ?

| Updated By: ಝಾಹಿರ್ ಯೂಸುಫ್

Updated on: Oct 14, 2021 | 5:12 PM

IPL 2021: ಕೊಲ್ಕತ್ತಾ ನೈಟ್​ ರೈಡರ್ಸ್​ ಫೈನಲ್​ಗೆ ತಲುಪಿದೆ. ಈ ಬಾರಿ ಕೂಡ ಕೆಕೆಆರ್​ಗೆ ಸಿಎಸ್​ಕೆ ಎದುರಾಳಿಯಾಗಿ ಸಿಕ್ಕಿದೆ. ಅಂದರೆ 2012 ರ ಬಳಿಕ ಸಿಎಸ್​ಕೆ ಹಾಗೂ ಕೆಕೆಆರ್​ ಫೈನಲ್ ಆಡುತ್ತಿದೆ.

KKR vs CSK: ಫೈನಲ್​ನಲ್ಲಿ ಸೋಲಿಲ್ಲದ ಸರದಾರ ಕೆಕೆಆರ್: ಈ ಬಾರಿ ಕೂಡ ಗೆಲ್ಲುತ್ತಾ?
KKR vs CSK
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನೇನಿದ್ದರೂ ಫೈನಲ್ ಕಾದಾಟ. ಅದು ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್ (KKR)​ ತಂಡಗಳ ನಡುವೆ ಎಂಬುದು ವಿಶೇಷ. ಈ ಐಪಿಎಲ್​ನ ಬಲಿಷ್ಠ ಪಡೆ ಎನಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ (DC)​ ತಂಡಕ್ಕೆ ಸೋಲುಣಿಸಿ ಉಭಯ ತಂಡಗಳು ಫೈನಲ್​ಗೇರಿರುವುದು ವಿಶೇಷ. ಅದರಲ್ಲೂ ಕೊಲ್ಕತ್ತಾ ನೈಟ್​ ರೈಡರ್ಸ್​ ಮೂರನೇ ಬಾರಿ ಫೈನಲ್​ ಆಡುತ್ತಿರುವುದು ವಿಶೇಷ. ಅಂದರೆ 2014ರ ಚಾಂಪಿಯನ್​ ಪಟ್ಟದ ಬಳಿಕ ಕೆಕೆಆರ್ ಫೈನಲ್​ಗೆ ಎಂಟ್ರಿ ಕೊಟ್ಟಿಲ್ಲ. ಇದೀಗ 6 ಸೀಸನ್​ ಬಳಿಕ ಕೆಕೆಆರ್​ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್​ ಎಂಬ ಐಪಿಎಲ್​ ಬಲಿಷ್ಠ ಪಡೆಯ ಜೊತೆ.

ಈ ಹಿಂದೆ 2 ಬಾರಿ ಫೈನಲ್​ ಪ್ರವೇಶಿಸಿದ್ದ ಕೆಕೆಆರ್ ಎರಡು ಸಲ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರಲ್ಲೂ 2012 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಫೈನಲ್​ ಆಡಿದ್ದ ಕೆಕೆಆರ್ ಸಿಎಸ್​ಕೆ ಸೋಲುಣಿಸಿ ಟ್ರೋಫಿ ಎತ್ತಿ ಹಿಡಿದಿದ್ದರು. ಧೋನಿ ನೇತೃತ್ವದ ಸಿಎಸ್​ಕೆ ನೀಡಿದ 190 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಅಂದು ಕೊಲ್ಕತ್ತಾ 19.4 ಓವರ್​ನಲ್ಲಿ ಚೇಸ್ ಮಾಡಿತ್ತು.

ಇದಾದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್​ ಫೈನಲ್ ಪ್ರವೇಶಿಸಿದ್ದು 2014 ರಲ್ಲಿ. ಈ ವೇಳೆ ಕೂಡ ತಂಡವನ್ನು ಮುನ್ನಡೆಸಿದ್ದು ಗೌತಮ್ ಗಂಭೀರ್. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ದ ನಡೆದಿದ್ದ ಫೈನಲ್​ ಹಣಾಹಣಿಯಲ್ಲಿ ರೋಚಕ ಜಯ ಸಾಧಿಸಿ ಕೆಕೆಆರ್​ ಗೆಲುವಿನ ಕೇಕೆ ಹಾಕಿತ್ತು. ಅಂದು ಜಾರ್ಜ್​ ಬೈಲಿ ಮುನ್ನಡೆಸಿದ್ದ ಪಂಜಾಬ್ ತಂಡ ಮೊದಲು ಬ್ಯಾಟ್​ ಮಾಡಿ 199 ರನ್​ಗಳ ಕಠಿಣ ಗುರಿ ನೀಡಿತ್ತು. ಈ ಬೃಹತ್ ಸವಾಲನ್ನು ಬೆನ್ನತ್ತಿದ ಕೆಕೆಆರ್ 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇದೀಗ ಮತ್ತೊಮ್ಮೆ ಕೊಲ್ಕತ್ತಾ ನೈಟ್​ ರೈಡರ್ಸ್​ ಫೈನಲ್​ಗೆ ತಲುಪಿದೆ. ಈ ಬಾರಿ ಕೂಡ ಕೆಕೆಆರ್​ಗೆ ಸಿಎಸ್​ಕೆ ಎದುರಾಳಿಯಾಗಿ ಸಿಕ್ಕಿದೆ. ಅಂದರೆ 2012 ರ ಬಳಿಕ ಸಿಎಸ್​ಕೆ ಹಾಗೂ ಕೆಕೆಆರ್​ ಫೈನಲ್ ಆಡುತ್ತಿದೆ. 2 ಬಾರಿ ಫೈನಲ್​ ಪ್ರವೇಶಿಸಿ ಕಪ್ ಗೆದ್ದಿರುವ ಕೆಕೆಆರ್​ ಒಂದೆಡೆಯಾದರೆ, 8 ಬಾರಿ ಫೈನಲ್ ಪ್ರವೇಶಿಸಿ 3 ಬಾರಿ ಕಪ್ ಗೆದ್ದಿರುವ ಸಿಎಸ್​ಕೆ ಮತ್ತೊಂದೆಡೆ ಇದೆ. ಹೀಗಾಗಿ ಫೈನಲ್ ಹೋರಾಟದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

(KKR have never lost an IPL final yet)