
ಐಪಿಎಲ್ 2025 (IPL 2025) ರಲ್ಲಿ ಕೆಎಲ್ ರಾಹುಲ್ (KL Rahul) ಬ್ಯಾಟ್ ರನ್‌ಗಳ ಮಳೆ ಹರಿಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಸೀಸನ್‌ನಲ್ಲಿ ರಾಹುಲ್ ಎಂಟು ಪಂದ್ಯಗಳಲ್ಲಿ 60.66 ರ ಸರಾಸರಿಯಲ್ಲಿ 364 ರನ್ ಗಳಿಸಿದ್ದಾರೆ. ಈ ಸೀಸನ್‌ನ 46 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ, ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕಷ್ಟಪಡುತ್ತಿದ್ದಾಗ ರಾಹುಲ್ 41 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿ ಡೆಲ್ಲಿ ತಂಡವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು. ಅವರ ಅದ್ಭುತ ಬ್ಯಾಟಿಂಗ್ ಗಮನಿಸಿದ ಡೆಲ್ಲಿ ಕ್ಯಾಪಿಟಲ್ಸ್‌ನ ಮಾರ್ಗದರ್ಶಕ ಹಾಗೂ ಮಾಜಿ ಆರ್‌ಸಿಬಿ ನಾಯಕ ಕೆವಿನ್ ಪೀಟರ್ಸನ್, ಟೀಂ ಇಂಡಿಯಾದ ಟಿ20 ತಂಡದಲ್ಲಿ ರಾಹುಲ್ ಅವರನ್ನು ಸೇರಿಸಿಕೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ.
ಟೀಂ ಇಂಡಿಯಾದ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಕೆಎಲ್ ರಾಹುಲ್ 2022 ರಿಂದ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಐಪಿಎಲ್ 2025 ರಲ್ಲಿ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದು, ಡೆಲ್ಲಿ ತಂಡದ ಮಾರ್ಗದರ್ಶಕ ಕೆವಿನ್ ಪೀಟರ್ಸನ್, ರಾಹುಲ್ ಅವರನ್ನು ಭಾರತದ ಟಿ20 ತಂಡಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ಗಿಂತ ಉತ್ತಮ ಬ್ಯಾಟ್ಸ್‌ಮನ್ ಯಾರೂ ಇರಲು ಸಾಧ್ಯವಿಲ್ಲ. ಅವರು ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಅಗ್ರ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ನಂತರ, ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿ ಭಾರತದ ಟಿ20 ತಂಡದಲ್ಲಿ ಆಡಲು ಸಂಪೂರ್ಣವಾಗಿ ಅರ್ಹರು ಎಂದು ನಾನು ನಂಬುತ್ತೇನೆ ಎಂದು ಪೀಟರ್ಸನ್ ಹೇಳಿದ್ದಾರೆ.
ಈ ಸೀಸನ್‌ನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿದಾಗಿನಿಂದ ಅವರ ಬ್ಯಾಟ್ ಘರ್ಜಿಸುತ್ತಿದೆ. ಇಲ್ಲಿಯವರೆಗೆ, ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ ಎಂಟು ಪಂದ್ಯಗಳಲ್ಲಿ 60.66 ರ ಸರಾಸರಿಯಲ್ಲಿ 364 ರನ್ ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ , ಕೆವಿನ್ ಪೀಟರ್ಸನ್, ‘ನಾನು ಬಿಸಿಸಿಐನಲ್ಲಿದ್ದರೆ, ಭಾರತದ ಟಿ20 ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ನಾಲ್ಕನೇ ಸ್ಥಾನದಲ್ಲಿ ಸೇರಿಸಿಕೊಳ್ಳುತ್ತಿದ್ದೆ. ಭಾರತಕ್ಕೆ ಅಗ್ರ ಕ್ರಮಾಂಕದಲ್ಲಿ ಹಲವು ಆಯ್ಕೆಗಳಿವೆ ಎಂದು ನಾನು ಭಾವಿಸುತ್ತೇನೆ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಅಗ್ರ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ನಿಮ್ಮಲ್ಲಿ ಬಹಳಷ್ಟು ಆಟಗಾರರಿದ್ದಾರೆ ಆದರೆ ಕೆಎಲ್ ರಾಹುಲ್ ಈಗ ಕ್ರಿಕೆಟ್ ಆಡುತ್ತಿರುವ ರೀತಿ ನೋಡಿದರೆ, ನಾಲ್ಕನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಅವರು ನನ್ನ ಮೊದಲ ಆಯ್ಕೆಯಾಗಿರುತ್ತಿದ್ದರು.
ಐಪಿಎಲ್ 2025 ಕ್ಕೂ ಮೊದಲು ಕೆಎಲ್ ರಾಹುಲ್ ಕೂಡ ಟಿ20 ಟೀಂ ಇಂಡಿಯಾಗೆ ಮರಳುವ ಬಗ್ಗೆ ಹೇಳಿದ್ದರು, ‘ಎಲ್ಲೋ ನಾನು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆಯುವುದನ್ನು ಆನಂದಿಸಲು ಮರೆತಿದ್ದೆ. ನನ್ನ ಆಟವನ್ನು ಬಹಳ ದೂರ ತೆಗೆದುಕೊಂಡು ಹೋಗಬೇಕೆಂದು ನಾನು ಬಯಸಿದ್ದೆ. ಈ ವಿಷಯ ನನ್ನ ಮನಸ್ಸಿನಲ್ಲಿಯೇ ಉಳಿದುಕೊಂಡಿತ್ತು. ಆದರೆ ಈಗ ನಾನು ಹಿಂದೆ ಸರಿದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆಯುವುದರ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ನನಗೆ ಅರಿವಾಗಿದೆ. ಏಕೆಂದರೆ ಟಿ20 ಈಗ ಬಹಳಷ್ಟು ಬದಲಾಗಿದೆ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದರು.
ಐಪಿಎಲ್‌ನಲ್ಲಿ ರಾಹುಲ್ ಸಿಡಿಸಿದ 200ನೇ ಸಿಕ್ಸರ್ ಹೇಗಿತ್ತು ನೋಡಿ
ಕೆಎಲ್ ರಾಹುಲ್ 2022 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ಅಂದಿನಿಂದ, ರಾಹುಲ್ ಭಾರತ ಟಿ20 ತಂಡದಿಂದ ಹೊರಗುಳಿದಿದ್ದಾರೆ. ರಾಹುಲ್ ಇದುವರೆಗೆ ಟೀಂ ಇಂಡಿಯಾ ಪರ 72 ಟಿ20 ಪಂದ್ಯಗಳಲ್ಲಿ 2265 ರನ್ ಗಳಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಕಾರಣ ರಾಹುಲ್ ಭಾರತ ಟಿ20 ತಂಡಕ್ಕೆ ಮರಳಬಹುದು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ, ತಂಡವು ಮುಂದಿನ ವರ್ಷ ತವರಿನಲ್ಲಿ ಟಿ20 ವಿಶ್ವಕಪ್ ಆಡಲಿದೆ. ಈ ತಂಡವನ್ನು ಸೇರಲು ಕೆಎಲ್ ರಾಹುಲ್ ಶ್ರಮಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ