ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾದ ಹೀನಾಯ ಸೋಲಿನ ನಂತರ ಬಿಸಿಸಿಐ, ಎಲ್ಲಾ ಕ್ರಿಕೆಟಿಗರು ದೇಶೀಯ ಪಂದ್ಯಗಳನ್ನು ಆಡುವುದನ್ನು ಕಡ್ಡಾಯಗೊಳಿಸಿದೆ. ಬಿಸಿಸಿಐನ ಈ ನಿರ್ಧಾರದಿಂದಾಗಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಮತ್ತು ಶುಭ್ಮನ್ ಗಿಲ್ ಅವರಂತಹ ಅನೇಕ ಸ್ಟಾರ್ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈಗ ವಿರಾಟ್ ಕೊಹ್ಲಿ ಕೂಡ 13 ವರ್ಷಗಳ ನಂತರ ರಣಜಿ ಟ್ರೋಫಿ ಆಡಲಿದ್ದಾರೆ. ಜನವರಿ 30 ರಿಂದ ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಕೊಹ್ಲಿ ಮಾತ್ರವಲ್ಲದೆ ಕೆಎಲ್ ರಾಹುಲ್ ಕೂಡ 5 ವರ್ಷಗಳ ನಂತರ ಕರ್ನಾಟಕ ತಂಡದ ಪರ ರಣಜಿ ಆಡಲಿದ್ದಾರೆ.
ರಣಜಿ ಟ್ರೋಫಿಯ ಗುಂಪು ಹಂತದ ಅಂತಿಮ ಸುತ್ತು ಜನವರಿ 30 ರಿಂದ ಜನವರಿ 2 ರವರೆಗೆ ನಡೆಯಲಿದೆ. ಕೆಎಲ್ ರಾಹುಲ್ ಕೂಡ ಈ ಸುತ್ತಿನಲ್ಲಿ ಕರ್ನಾಟಕ ಪರ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ತಂಡ ಬೆಂಗಳೂರಿನಲ್ಲಿ ಹರಿಯಾಣವನ್ನು ಎದುರಿಸಬೇಕಿದೆ. ಮೊಣಕೈ ಗಾಯದಿಂದಾಗಿ ಕೆಎಲ್ ರಾಹುಲ್ ಪಂಜಾಬ್ ವಿರುದ್ಧದ ಕೊನೆಯ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ ಅವರು ಈಗ ಫಿಟ್ ಆಗಿದ್ದು, ಮಂಗಳವಾರ ಮತ್ತು ಬುಧವಾರ ತಂಡದೊಂದಿಗೆ ಅಭ್ಯಾಸ ಮಾಡಲಿದ್ದಾರೆ.
ಫೆಬ್ರವರಿ 2020 ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಬಂಗಾಳ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕೆಎಲ್ ರಾಹುಲ್ ಕೊನೆಯದಾಗಿ ಕರ್ನಾಟಕ ಪರ ಆಡಿದ್ದರು. ಇದಾದ ಬಳಿಕ ಈ ಟೂರ್ನಿಯಿಂದ ದೂರ ಉಳಿದಿದ್ದಾರೆ. ಇದೀಗ ಕೆಎಲ್ ರಾಹುಲ್ ವಾಪಸಾತಿ ಕರ್ನಾಟಕ ತಂಡಕ್ಕೆ ಒಳ್ಳೆಯ ಸುದ್ದಿಯಾಗಿದೆ, ಏಕೆಂದರೆ ಈ ಪಂದ್ಯವು ಕರ್ನಾಟಕ ತಂಡಕ್ಕೆ ಬಹಳ ಮುಖ್ಯವಾಗಿದೆ. ‘ಸಿ’ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಟೂರ್ನಿಯಲ್ಲಿ ಭರವಸೆ ಜೀವಂತವಾಗಿರಿಸಲು ಹರಿಯಾಣ ವಿರುದ್ಧ ನೇರ ಗೆಲುವಿನ ಅಗತ್ಯವಿದೆ.
ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ ಪಡಿಕ್ಕಲ್, ಕೆವಿ ಅನೀಶ್, ಆರ್ ಸ್ಮರಣ್, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ ಯಶೋವರ್ಧನ್ ಪರಂತಪ್, ನಿಕಿನ್ ಜೋಸ್, ಸುಜಯ್ ಸಾತೇರಿ, ಮೊಹ್ಸಿನ್ ಖಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ