ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೂ ಕೆಎಲ್ ರಾಹುಲ್ (KL Rahul) ಅಲಭ್ಯರಾಗಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಉಂಟಾದ ತೊಡೆಸಂಧು ನೋವಿನ ಕಾರಣ ರಾಹುಲ್ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು. ಇದಾಗ್ಯೂ ಅವರು ಐದನೇ ಪಂದ್ಯದ ವೇಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ಶುರುವಾಗಲಿರುವ ಕೊನೆಯ ಟೆಸ್ಟ್ ಪಂದ್ಯಕ್ಕೂ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಕೆಎಲ್ ರಾಹುಲ್ ಅವರ ಗಾಯದ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬಿಸಿಸಿಐ ಅವರನ್ನು ಲಂಡನ್ಗೆ ಕಳುಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಹುಲ್ ಅವರು ಶೇ.90 ರಷ್ಟು ಫಿಟ್ನೆಸ್ ಹೊಂದಿದ್ದರೂ, ನೋವಿನ ಅಸ್ವಸ್ಥತೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಕೆಲ ಮೂಲಗಳ ಮಾಹಿತಿ ಪ್ರಕಾರ, ಕೆಎಲ್ ರಾಹುಲ್ ಇನ್ನೊಂದು ವಾರ ಲಂಡನ್ನಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲಿದ್ದಾರೆ. ಈ ವೇಳೆ ಅವರ ಗಾಯವು ಗಂಭೀರವಾಗಿರುವುದು ಕಂಡು ಬಂದರೆ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿ ಬರಬಹುದು.
ಒಂದು ವೇಳೆ ಕೆಎಲ್ ರಾಹುಲ್ ಅವರ ಗಾಯವು ಗಂಭೀರವಾಗಿದ್ದರೆ ಐಪಿಎಲ್ನ ಮೊದಲಾರ್ಧದಲ್ಲಿ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಮಾರ್ಚ್ 22 ರಿಂದ ಐಪಿಎಲ್ ಸೀಸನ್-17 ಶುರುವಾಗಲಿದೆ. ಇದೇ ವೇಳೆ ವೈದ್ಯರು ವಿಶ್ರಾಂತಿ ಸೂಚಿಸಿದರೆ ಅವರು ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬರಬಹುದು. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಐಪಿಎಲ್ನ ಮೊದಲಾರ್ಧದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದು ಮಾರ್ಚ್ ಮೊದಲ ವಾರದಲ್ಲಿ ಸ್ಪಷ್ಟವಾಗಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಮಾರ್ಚ್ 7 ರಿಂದ ಶುರುವಾಗಲಿದೆ. ಧರ್ಮಶಾಲಾ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ. ಏಕೆಂದರೆ ಈಗಾಗಲೇ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದು, ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಯುವ ಆಟಗಾರರು ಕಣಕ್ಕಿಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಬಾರಿಸಿದ ಟಾಪ್-5 ಬ್ಯಾಟರ್ಗಳ ಪಟ್ಟಿ ಇಲ್ಲಿದೆ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.