
ಬೆಂಗಳೂರು, (ಡಿಸೆಂಬರ್ 25): 2025-26ನೇ ಸಾಲಿನ ಕೆ.ಎಸ್.ಸಿ.ಎ (KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಿಕೇತನ ಶಾಲೆ (Bengaluru vidyaniketan School) ಭರ್ಜರಿ ಜಯಗಳಿಸಿದೆ. ವ್ಯೊಮ್ ನಾಯ್ಡು ಅದ್ಭುತ ದ್ವಿಶತಕದ ನೆರವಿನಿಂದ ವಿದ್ಯಾನಿಕೇತನ ಶಾಲೆಯು, ಬೆಂಗಳೂರಿನ ಕಾರ್ಮೆಲ್ ಶಾಲೆ (carmel school) (B-70) ವಿರುದ್ಧ 410 ರನ್‌ಗಳ ಬೃಹತ್ ಮೊತ್ತದ ಜಯ ದಾಖಲಿಸಿದೆ.
ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MVIT-2) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದ್ಯಾನಿಕೇತನ ಶಾಲೆ, ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 504 ರನ್ ಪೇರಿಸಿತು. ವಿದ್ಯಾನಿಕೇತನ ಪರವಾಗಿ ವ್ಯೊಮ್ ನಾಯ್ಡು 150 ಎಸೆತಗಳಲ್ಲಿ 47 ಬೌಂಡರಿಗಳ ಮೂಲಕ ಬರೋಬ್ಬರಿ 283 ರನ್ ಬಾರಿಸಿ ಮಿಂಚಿದರು.
ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಬೆಂಗಳುರಿನ ಕಾರ್ಮೆಲ್ ಶಾಲೆ ಕೇವಲ 20.5 ಓವರ್‌ಗಳಲ್ಲಿ 94 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 410 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ವಿದ್ಯಾನಿಕೇತನ ಶಾಲೆ ಭಾರಿ ಅಂತರದ ಜಯವನ್ನು ತನ್ನದಾಗಿಸಿಕೊಂಡಿದೆ. ಈ ಅಮೋಘ ಪ್ರದರ್ಶನ ನೀಡುವ ಮೂಲಕ ವ್ಯೊಮ್ ನಾಯ್ಡು ಅವರು ಪ್ರಸ್ತುತ ಕೆ.ಎಸ್.ಸಿ.ಎ ಬಿ.ಟಿ.ಆರ್ ಶೀಲ್ಡ್ ಟೂರ್ನಿಯಲ್ಲಿ ಅತ್ಯಂತ ಭರವಸೆಯ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.