ವಿಶ್ವಕಪ್ ಕಥೆ: ಅಶ್ವಿನ್ ಜೊತೆ ಹರ್ಷ ಬೋಗ್ಲೆ ಮಾತುಕತೆ

| Updated By: ಝಾಹಿರ್ ಯೂಸುಫ್

Updated on: Sep 26, 2023 | 6:46 PM

Team India: 80ರ ದಶಕ ಶುರುವಾಗುತ್ತಿದ್ದಂತೆ ಕಪಿಲ್ ದೇವ್ ಯುಗ ಪ್ರಾರಂಭವಾಗಿತ್ತು. 79 ಮತ್ತು 83 ರ ನಡುವೆ, ಕಪಿಲ್ ದೇವ್ ಅವರಿಂದ ಟೀಮ್ ಇಂಡಿಯಾ ಸಾಕಷ್ಟು ಉತ್ತೇಜಿತಗೊಂಡಿತು. ಅಲ್ಲದೆ ಭಾರತ ತಂಡವು ಕೆಲವು ಉತ್ತಮ ಗೆಲುವುಗಳನ್ನು ದಾಖಲಿಸಿತು.

ವಿಶ್ವಕಪ್ ಕಥೆ: ಅಶ್ವಿನ್ ಜೊತೆ ಹರ್ಷ ಬೋಗ್ಲೆ ಮಾತುಕತೆ
ಲತಾ ಮಂಗೇಶ್ಕರ್ ಜೊತೆ ಟೀಮ್ ಇಂಡಿಯಾ
Follow us on

ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದು ಬರೋಬ್ಬರಿ 40 ವರ್ಷಗಳೇ ಕಳೆದಿವೆ. ಇದೀಗ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ಗೆ ಭಾರತದಲ್ಲಿ ವೇದಿಕೆ ಸಿದ್ಧವಾಗಿದೆ. ಈ ವಿಶ್ವಕಪ್ ಆರಂಭಕ್ಕೂ ಮುನ್ನ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ಕ್ರಿಕೆಟ್ ಅಂಗಳದ ಹಳೆಯ ಕಥೆಗಳನ್ನು ಮೆಲುಕು ಹಾಕಿದ್ದಾರೆ. ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಅವರ ಯುಟ್ಯೂಬ್ ಚಾನೆಲ್​ನಲ್ಲಿ ಕಾಣಿಸಿಕೊಂಡ ಹರ್ಷ ಅವರು ಭಾರತದ ಕ್ರಿಕೆಟ್​ ಬೆಳವಣಿಗೆ, ಟೀಮ್ ಇಂಡಿಯಾದ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯ ನಡುವೆ 1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸನ್ಮಾನ ಮಾಡಲು ಕೂಡ ಬಿಸಿಸಿಐ ಬಳಿ ಹಣವಿರಲಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಅಶ್ವಿನ್ ಜೊತೆಗಿನ ಈ ಚಿಟ್​ಚಾಟ್​ನಲ್ಲಿ ಮಾತನಾಡಿದ ಹರ್ಷ ಬೋಗ್ಲೆ, 1975 ಮತ್ತು 1979 ರಲ್ಲಿ ಭಾರತ ಸಾಧಾರಣ ತಂಡವಾಗಿತ್ತು. ಆದರೆ ಸುನಿಲ್ ಗವಾಸ್ಕರ್ ಅದಾಗಲೇ ಶ್ರೇಷ್ಠ ಬ್ಯಾಟ್ಸ್​ಮನ್ ಆಗಿ ಗುರುತಿಸಿಕೊಂಡಿದ್ದರು. 80ರ ದಶಕ ಶುರುವಾಗುತ್ತಿದ್ದಂತೆ ಕಪಿಲ್ ದೇವ್ ಯುಗ ಪ್ರಾರಂಭವಾಗಿತ್ತು. 79 ಮತ್ತು 83 ರ ನಡುವೆ, ಕಪಿಲ್ ದೇವ್ ಅವರಿಂದ ಟೀಮ್ ಇಂಡಿಯಾ ಸಾಕಷ್ಟು ಉತ್ತೇಜಿತಗೊಂಡಿತು. ಅಲ್ಲದೆ ಭಾರತ ತಂಡವು ಕೆಲವು ಉತ್ತಮ ಗೆಲುವುಗಳನ್ನು ದಾಖಲಿಸಿತು.

1981 ರಲ್ಲಿ, ಭಾರತವು ಮೆಲ್ಬೋರ್ನ್‌ನಲ್ಲಿ ಪೂರ್ಣ-ಬಲದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಅಲ್ಲದೆ 1983 ರ ಹೊತ್ತಿಗೆ ಭಾರತವು ವಿಶ್ವಕಪ್ ಆಡಲು ಸೂಕ್ತವಾದ ತಂಡವನ್ನು ಹೊಂದಿದ್ದರು ಎಂಬುದೇ ಸತ್ಯ. ಹೀಗಾಗಿಯೇ ಅಂದೇ ಭಾರತ ತಂಡವು ವಿಶ್ವಕಪ್ ಗೆಲ್ಲುವ ಡಾರ್ಕ್ ಹೋರ್ಸ್​ ಎಂದು ಇಂಗ್ಲಿಷ್ ಪತ್ರಿಕೆಯಲ್ಲಿ ಬರೆಯಲಾಗಿತ್ತು ಎಂದು ಹರ್ಷ ಬೋಗ್ಲೆ ನೆನಪಿಸಿಕೊಂಡರು.

ದುಡ್ಡಿಲ್ಲದೆ ಪರದಾಡಿದ್ದ ಬಿಸಿಸಿಐ:

ಅಚ್ಚರಿಯ ಎಂಬಂತೆ 1983 ರಲ್ಲಿ ಎಲ್ಲರನ್ನು ಮಣಿಸಿ ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದು ಹೊಸ ಇತಿಹಾಸ ಬರೆಯಿತು. ಇಂಟ್ರೆಸ್ಟಿಂಗ್ ವಿಷಯ ಎಂದರೆ ಭಾರತ ವಿಶ್ವಕಪ್ ಗೆಲ್ಲುತ್ತಿದ್ದಂತೆ ಆಟಗಾರರಿಗೆ ಬಿಸಿಸಿಐ ಪ್ರತಿ ಆಟಗಾರರಿಗೆ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿತು. ಆದರೆ ಅಂದು ಬಹುಮಾನ ನೀಡಲು ಅಂದು ಬಿಸಿಸಿಐ ಬಳಿಕ ಹಣವಿರಲಿಲ್ಲ.

ಆಗ ಕ್ರಿಕೆಟ್ ನಿರ್ವಾಹಕ ರಾಜ್ ಸಿಂಗ್ ಡುಂಗರ್ಪುರ್ ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಸಲು ಹಣ ಸಂಗ್ರಹಿಸಲು ಪ್ಲ್ಯಾನ್ ರೂಪಿಸಿದರು. ರಾಜ್ ಸಿಂಗ್ ಡುಂಗರ್ಪುರ್ ಅವರು ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಅತ್ಯಂತ ನಿಕಟ ಸ್ನೇಹಿತರಾಗಿದ್ದರು. ಅತ್ತ ಲತಾ ಮಂಗೇಶ್ಕರ್ ಕ್ರಿಕೆಟ್ ಪ್ರೇಮಿಯಾಗಿದ್ದರು. ಹೀಗಾಗಿ ಅವರು ಸಂಗೀತ ಕಾರ್ಯಕ್ರಮ ನಡೆಸಲು ಒಪ್ಪಿಕೊಂಡರು. ಅಲ್ಲದೆ ಆ ಸಂಗೀತ ಕಾರ್ಯಕ್ರಮದ ಹಣದಿಂದ ಅಂದು ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಬಹುಮಾನ ಮೊತ್ತ ನೀಡಿದ್ದರು ಎಂದು ಹರ್ಷ ಬೋಗ್ಲೆ ತಿಳಿಸಿದ್ದಾರೆ.

ಇನ್ನು 1987 ರ ವಿಶ್ವಕಪ್​ ವೇಳೆಗೆ ಭಾರತ ತಂಡವು ಮತ್ತಷ್ಟು ಬಲಿಷ್ಠವಾಯಿತು. ಹಲವು ಯುವ ಆಟಗಾರರು ತಂಡಕ್ಕೆ ಬಂದರು. ವಿಶ್ವಕಪ್​ಗೆ ರಿಲಯನ್ಸ್ ಪ್ರಾಯೋಜಕತ್ವವಹಿಸಿತು. ಅಷ್ಟೇ ಅಲ್ಲದೆ ರವಿ ಶಾಸ್ತ್ರಿ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಜಾಹೀರಾತಿನಲ್ಲಿ ಕಾಣಿಸಲಾರಂಭಿಸಿದರು. ಒಂದಾರ್ಥದಲ್ಲಿ 1987 ರ ಬಳಿಕ ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಯುಗ ಶುರುವಾಯಿತು ಎಂದರೆ ತಪ್ಪಾಗಲಾರದು ಎಂದು ಹರ್ಷ ಬೋಗ್ಲೆ ಅಭಿಪ್ರಾಯಪಟ್ಟರು.

2 ಲಕ್ಷ ರೂ. ಪಡೆದ ಇಮ್ರಾನ್ ಖಾನ್:

ಭಾರತೀಯ ಆಟಗಾರರು 1987 ರಲ್ಲಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ ಸಂಭಾವನೆ ಮೊತ್ತ ಹೆಚ್ಚಿಸಿದ್ದು ಪಾಕ್ ತಂಡದ ನಾಯಕ ಇಮ್ರಾನ್ ಖಾನ್. ಗೋದ್ರೆಜ್ ಫ್ಯಾಮಿಲಿ ಜೊತೆ ಇಮ್ರಾನ್ ಖಾನ್ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಕಂಪೆನಿಯ ಸಿಂಥಾಲ್ ಸೋಪಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಅಂದು ಇಮ್ರಾನ್ ಖಾನ್​ಗೆ 2 ಲಕ್ಷ ರೂ. ನೀಡಲಾಗಿತ್ತು.

ಇದಾದ ಬಳಿಕವಷ್ಟೇ ಭಾರತೀಯ ಆಟಗಾರರು ಕೂಡ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದರು. ಅದಕ್ಕೂ ಮುನ್ನ 1 ಲಕ್ಷ ರೂ. ಪಡೆಯುತ್ತಿದ್ದ ಸ್ಟಾರ್ ಆಟಗಾರರು ಹೆಚ್ಚಿನ ಮೊತ್ತಕ್ಕೆ ಬೇಡಿಕೆಯಿಡಲಾರಂಭಿಸಿದರು ಎಂದು ಹರ್ಷ ಬೋಗ್ಲೆ ತಿಳಿಸಿದರು.

ಇದನ್ನೂ ಓದಿ: ಟೀಮ್ ಇಂಡಿಯಾ ಪರ ಸತತ 4 ಸಿಕ್ಸ್ ಸಿಡಿಸಿದ್ದು ಮೂವರು ಬ್ಯಾಟರ್​ಗಳು ಮಾತ್ರ..!

ಒಟ್ಟಿನಲ್ಲಿ ಒಂದು ಕಾಲದಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ ಬಹುಮಾನ ಮೊತ್ತ ನೀಡಲು ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಕ್ರಿಕೆಟ್ ಮಂಡಳಿ ಇಂದು ವಿಶ್ವದ ಅತ್ಯಂತ ಶ್ರೀಮಂತ ಮಂಡಳಿಯಾಗಿ ಗುರುತಿಸಿಕೊಂಡಿರುವುದು ವಿಶೇಷ.

 

Published On - 6:16 pm, Tue, 26 September 23