IPL 2022: ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಅರ್ಜುನ ರಣತುಂಗಾ ಐಪಿಎಲ್​ ಬಿಡಿ ಎಂದಿದ್ದೇಕೆ?

| Updated By: ಝಾಹಿರ್ ಯೂಸುಫ್

Updated on: Apr 12, 2022 | 4:32 PM

IPL 2022: ಶ್ರೀಲಂಕಾದ ಆಟಗಾರರಾದ ವನಿಂದು ಹಸರಂಗ ಮತ್ತು ಭಾನುಕಾ ರಾಜಪಕ್ಸೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸಿದರು.

IPL 2022: ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಅರ್ಜುನ ರಣತುಂಗಾ ಐಪಿಎಲ್​ ಬಿಡಿ ಎಂದಿದ್ದೇಕೆ?
Arjuna Ranatunga
Follow us on

ಶ್ರೀಲಂಕಾ ದೇಶವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈಗಾಗಲೇ ಪರಿಸ್ಥಿತಿ ಕೈತಪ್ಪಿ ಹೋಗಿದ್ದು, ಜನರು ಸರ್ಕಾರದ ವಿರುದ್ದ ಪ್ರತಿಭಟನೆಗೆ ಇಳಿದಿದ್ದಾರೆ. ಇದಾಗ್ಯೂ ಕೆಲ ಲಂಕಾ ಕ್ರಿಕೆಟಿಗರು ಐಪಿಎಲ್​ನಲ್ಲಿ (IPL 2022) ಆಡುತ್ತಾ ತಮಗೂ ದೇಶಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತಿದ್ದಾರೆ ಎಂದು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗಾ (Arjuna Ranatunga) ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ರಣತುಂಗ, ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನಲ್ಲಿ ಆಡುತ್ತಿರುವ ಎಲ್ಲಾ ಶ್ರೀಲಂಕಾ ಆಟಗಾರರು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ದೇಶದ ಬೆಂಬಲಕ್ಕೆ ಬಂದು ನಿಲ್ಲುವಂತೆ ಒತ್ತಾಯಿಸಿದ್ದಾರೆ. ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆಯೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆರ್ಥಿಕ ಸಂಕಷ್ಟದಿಂದ ಅಧಃಪತನದತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಐಪಿಎಲ್​ನಿಂದ ವಾರಗಳ ಕಾಲ ಹಿಂದೆ ಸರಿದು ಬೆಂಬಲ ಸೂಚಿಸಬೇಕೆಂದು ರಣತುಂಗಾ ತಿಳಿಸಿದ್ದಾರೆ.

“ನನಗೆ ನಿಜವಾಗಿಯೂ ಗೊತ್ತಿಲ್ಲ. ಆದರೆ ಕೆಲವು ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅವರು ತಮ್ಮ ದೇಶದ ಬಗ್ಗೆ ಮಾತನಾಡುತ್ತಿಲ್ಲ. ದುರದೃಷ್ಟವಶಾತ್, ಜನರು ಸರ್ಕಾರದ ವಿರುದ್ಧ ಮಾತನಾಡಲು ಹೆದರುತ್ತಾರೆ. ಈ ಕ್ರಿಕೆಟಿಗರು ಸಹ ಕ್ರಿಕೆಟ್ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿವಾಲಯ ಮತ್ತು ಅವರು ತಮ್ಮ ಉದ್ಯೋಗವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಅವರು ಒಂದು ಹೆಜ್ಜೆ ಇಡಬೇಕಾದ ಅನಿವಾರ್ಯತೆಯಿದೆ. ಆದರೆ ಕೆಲವು ಯುವ ಕ್ರಿಕೆಟಿಗರು ಕೂಡ ಮುಂದೆ ಬಂದು ಪ್ರತಿಭಟನೆಯನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ನಡೆಯನ್ನು ನಾನು ಎದುರು ನೋಡುತ್ತೇನೆ ಎಂದು ರಣತುಂಗಾ ಹೇಳಿದ್ದಾರೆ.

“ಏನಾದರೂ ತಪ್ಪು ನಡೆದಾಗ, ನಿಮ್ಮ ವ್ಯವಹಾರದ ಬಗ್ಗೆ ಯೋಚಿಸದೆ, ಅದರ ವಿರುದ್ಧ ಮಾತನಾಡುವ ಧೈರ್ಯ ಇರಬೇಕು. ಜನರು ನನ್ನನ್ನು ಕೇಳುತ್ತಾರೆ, ನಾನು ಏಕೆ ಪ್ರತಿಭಟನೆಯಲ್ಲಿಲ್ಲ ಎಂದು, ಆದರೆ ನಾನು ಕಳೆದ 19 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇದು ರಾಜಕೀಯ ವಿಷಯವಲ್ಲ. ಇಲ್ಲಿಯವರೆಗೆ, ಯಾವುದೇ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪ್ರತಿಭಟನೆಗೆ ಇಳಿದಿಲ್ಲ. ಇದು ಈ ದೇಶದ ಜನರ ದೊಡ್ಡ ಶಕ್ತಿಯಾಗಿದೆ ಎಂದು ಅರ್ಜುನ ರಣತುಂಗಾ ಹೇಳಿದರು.

“ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರು ಯಾರೆಂದು ನಿಮಗೆಲ್ಲರಿಗೂ ತಿಳಿದಿದೆ ಎಂದು ನನಗೆ ಖಾತ್ರಿಯಿದೆ. ನಾನು ಅವರ ಹೆಸರನ್ನು ಉಲ್ಲೇಖಿಸಲು ಬಯಸುವುದಿಲ್ಲ. ಆದರೆ ಅವರು ಒಂದು ವಾರದವರೆಗೆ ತಮ್ಮ ಕೆಲಸವನ್ನು ಬಿಟ್ಟು ಪ್ರತಿಭಟನೆಗೆ ಬೆಂಬಲವಾಗಿ ಬರಬೇಕೆಂದು ನಾನು ಬಯಸುತ್ತೇನೆ” ಎಂದು ಮಾಜಿ ಕ್ರಿಕೆಟಿಗ ಹೇಳಿದರು.

ಇದಕ್ಕೂ ಮುನ್ನ ಶ್ರೀಲಂಕಾದ ಆಟಗಾರರಾದ ವನಿಂದು ಹಸರಂಗ ಮತ್ತು ಭಾನುಕಾ ರಾಜಪಕ್ಸೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸಿದರು. ಇದಾಗ್ಯೂ ಹಲವು ಆಟಗಾರರ ಮೌನವನ್ನು ಪ್ರಶ್ನಿಸಿ ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗಾ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕೆಲ ದಿನಗಳ ಕಾಲ ಐಪಿಎಲ್​ ತೊರೆದು ಲಂಕನ್ನರ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಶ್ರೀಲಂಕಾದ ಈ ಆರ್ಥಿಕ ಪರಿಸ್ಥಿತಿಗೆ ನೇರ ಕಾರಣ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ನಿಲುವುಗಳು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ, ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ವಿಶೇಷ ಭಾಷಣದಲ್ಲಿ, ಪ್ರಧಾನಿ ಮಹಿಂದಾ ರಾಜಪಕ್ಸೆ, ಜನರು ತಾಳ್ಮೆಯಿಂದಿರಬೇಕು. ಸರ್ಕಾರವು ಪರಿಸ್ಥಿತಿಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ಜನರು ಬೀದಿಗಿಳಿಯುವುದನ್ನು ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ.

ಸದ್ಯ ಶ್ರೀಲಂಕಾ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ. ಇದು ಆಹಾರ ಮತ್ತು ಇಂಧನವನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಕೊರತೆಯು ಶ್ರೀಲಂಕಾವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಿದೆ. ಈಗಾಗಲೇ ಭಾರತ ಸೇರಿದಂತೆ ಕೆಲ ದೇಶಗಳು ಶ್ರೀಲಂಕಾ ಸಹಾಯಕ್ಕೆ ನಿಂತಿದೆ.

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?