CSK Vs RCB: ಸಿಎಸ್ಕೆ ವಿರುದ್ಧ ರಾಯಲ್ ಚಾಲೆಂಜರ್ಸ್ಗೆ 23 ರನ್ಗಳ ಸೋಲು; ಸ್ಟಾರ್ಗಳೇ ತುಂಬಿರುವ ಆರ್ಸಿಬಿ ಎಡವಿದ್ದೆಲ್ಲಿ?
CSK Vs RCB Match Result: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ 23 ರನ್ಗಳಿಂದ ಶರಣಾಗಿದೆ. ಆರ್ಸಿಬಿ ಎಡವಿದ್ದೆಲ್ಲಿ? ಪಂದ್ಯ ಸೋಲಲು ಕಾರಣಗಳೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ (IPL- 2022) ಆರ್ಸಿಬಿ 23 ರನ್ಗಳಿಂದ ಶರಣಾಗಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಖಾತೆ ತೆರೆದಿದೆ. ರವೀಂದ್ರ ಜಡೇಜಾ ಕಪ್ತಾನನಾಗಿ ಮೊದಲ ಗೆಲುವು ಕಂಡಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ಸಿಬಿ, 10ನೇ ಓವರ್ ತನಕ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತ್ತು. ಮೊದಲ ಹತ್ತು ಓವರ್ಗಳಲ್ಲಿ ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 60 ರನ್ಗಳನ್ನಷ್ಟೇ ಗಳಿಸಿತ್ತು. ಆಗ ಜತೆಯಾದ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಪಂದ್ಯದ ಗತಿಯನ್ನೇ ಬದಲಿಸಿದರು. ಪರಿಣಾಮವಾಗಿ ಸಿಎಸ್ಕೆ ನಂತರದ ಹತ್ತು ಓವರ್ಗಳಲ್ಲಿ ಬರೋಬ್ಬರಿ 165 ರನ್ ಪೇರಿಸಿತು. ಸಿಎಸ್ಕೆ ಪರ ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಚಚ್ಚಿದರು. ಅದರಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್ ಸೇರಿತ್ತು. ಶಿವಂ ದುಬೆ 46 ಎಸೆತಗಳಲ್ಲಿ 95 ರನ್ಗಳ ಸ್ಫೋಟಕ ಆಟವಾಡಿ ಔಟ್ ಆಗದೆ ಉಳಿದರು. ಈ ಇನ್ನಿಂಗ್ಸ್ನಲ್ಲಿ ದುಬೆ ಅವರಿಂದ 5 ಫೋರ್ ಹಾಗೂ 8 ಸಿಕ್ಸರ್ ಸಿಡಿಸಲ್ಪಟ್ಟವು. ದುಬೆ- ಉತ್ತಪ್ಪ ಜತೆಯಾಟ ಸಾಗುತ್ತಿದ್ದಾಗ ಈರ್ವರೂ ಶತಕ ಗಳಿಸುವ ನಿರೀಕ್ಷೆ ಇತ್ತು. ಕೊನೆಯ ಓವರ್ಗಳಲ್ಲಿ ಆರ್ಸಿಬಿ ತುಸು ಪ್ರತಿರೋಧ ಒಡ್ಡಿದ ಪರಿಣಾಮ ಇದು ಸಾಧ್ಯವಾಗಲಿಲ್ಲ. ಒಟ್ಟಾರೆ ಸಿಎಸ್ಕೆ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 216 ರನ್ ಗಳಿಸಿ ಬೃಹತ್ ಗುರಿಯನ್ನು ಆರ್ಸಿಬಿಗೆ ನೀಡಿತು.
ಹರ್ಷಲ್ ಪಟೇಲ್ ಇಲ್ಲದ ಆರ್ಸಿಬಿ ಇನ್ನಿಂಗ್ಸ್ ಮಧ್ಯದ ಓವರ್ಗಳಲ್ಲಿ ಸಂಪೂರ್ಣ ಹಳಿತಪ್ಪಿತ್ತು. ಪದಾರ್ಪಣೆ ಪಂದ್ಯವಾಡಿದ ಜೋಶ್ ಹ್ಯಾಝಲ್ವುಡ್ ಹಾಗೂ ಸ್ಪಿನ್ನರ್ ವನಿಂದು ಹಸರಂಗ ಮಾತ್ರ ಆರ್ಸಿಬಿ ಪರ ವಿಕೆಟ್ ಪಡೆಯಲು ಸಫಲರಾದರು. ಹಸರಂಗ 3 ಓವರ್ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ಹ್ಯಾಝಲ್ವುಡ್ 4 ಓವರ್ಗಳಲ್ಲಿ 33 ರನ್ ನೀಡಿ 1 ವಿಕೆಟ್ ಪಡೆದರು.
ನಿರೀಕ್ಷಿತ ಪ್ರದರ್ಶನ ತೋರದ ಆರ್ಸಿಬಿ ಸ್ಟಾರ್ಗಳು; ಮಧ್ಯಮ ಕ್ರಮಾಂಕವೊಂದೇ ಗಮನಾರ್ಹ ಅಂಶ!
ಆರ್ಸಿಬಿಯ ಇತ್ತೀಚಿನ ಪ್ರದರ್ಶಗಳಲ್ಲಿ ಮಧ್ಯಮ ಕ್ರಮಾಂಕದ ಕೊಡುಗೆ ಅದ್ಭುತವಾಗಿ ಮೂಡಿಬರುತ್ತಿದೆ. ಆದರೆ ಮಧ್ಯಮ ಕ್ರಮಾಂಕ ಕ್ಲಿಕ್ ಆಗುವಾಗ ಆರಂಭಿಕರಿಂದ ಉತ್ತಮ ಜತೆಯಾಟ ಸಿಕ್ಕುತ್ತಿಲ್ಲ. ಸಿಎಸ್ಕೆ ವಿರುದ್ಧವೂ ಆರ್ಸಿಬಿ ಬ್ಯಾಟಿಂಗ್ ಇದೇ ಸಮಸ್ಯೆ ಎದುರಿಸಿತು. ಕಪ್ತಾನ ಫಾಫು ಡು ಪ್ಲೆಸಿಸ್ 8 ರನ್ಗಳಿಗೆ, ಅನುಜ್ ರಾವತ್ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಪವರ್ಪ್ಲೇಯೊಳಗೆ ಆರ್ಸಿಬಿ 3 ವಿಕೆಟ್ ಕಳೆದುಕೊಂಡಿತ್ತು.
ನಾಲ್ಕನೇ ಕ್ರಮಾಂಕದಲ್ಲಿ ಬಂದ ಮ್ಯಾಕ್ಸ್ವೆಲ್ ಆರಂಭದಿಂದಲೇ ಅಬ್ಬರಿಸಿದರು. 11 ಎಸೆತಗಳಲ್ಲಿ 26 ರನ್ ಗಳಿಸಿದ್ದ ಅವರು ಅದಾಗಲೇ 2 ಬೌಂಡರಿ, 2 ಸಿಕ್ಸರ್ ಬಾರಿಸಿದ್ದರು. ಆದರೆ ರವೀಂದ್ರ ಜಡೇಜಾ ಮ್ಯಾಕ್ಸಿಗೆ ಪೆವಿಲಿಯನ್ ಹಾದಿ ತೋರಿಸಿದರು. ಸುಯಶ್ ಪ್ರಭುದೇಸಾಯಿ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿದರು. 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 34 ರನ್ ಗಳಿಸಿದರು.
ಶಾಬಾಜ್ ಅಹ್ಮದ್ ಅವರ ಅದ್ಭುತ ಫಾರ್ಮ್ ಈ ಪಂದ್ಯದಲ್ಲೂ ಮುಂದುವರೆಯಿತು. 27 ಎಸೆತಗಳಲ್ಲಿ 41 ರನ್ಗಳಲ್ಲಿ ಅವರು ಸಿಡಿಸಿದರು. ಆದರೆ ಆರ್ಸಿಬಿ ಪರ ದೊಡ್ಡ ಜತೆಯಾಟ ಮೂಡಿಬರಲಿಲ್ಲ. ದಿನೇಶ್ ಕಾರ್ತಿಕ್ ಕ್ರೀಸ್ಗೆ ಇಳಿದಾಗ ಅವರಿದ್ದ ಫಾರ್ಮ್ನಲ್ಲಿ ಅಭಿಮಾನಿಗಳಿಗೆ ಗೆಲ್ಲುವ ನಿರೀಕ್ಷೆ ಇತ್ತು. 14 ಎಸೆತಗಳಲ್ಲಿ 2 ಬಂಡರಿ 3 ಸಿಕ್ಸರ್ ಮೂಲದ 34 ರನ್ ಗಳಿಸಿದ್ದ ಡಿಕೆ ಬ್ರಾವೋ ಎಸೆತದಲ್ಲಿ ಔಟ್ ಆದರು. ಅಂತಿಮವಾಗಿ ಆರ್ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ, 23 ರನ್ಗಳಿಂದ ಸಿಎಸ್ಕೆ ಶರಣಾಯಿತು. ಸಿಎಸ್ಕೆ ಪರ ಮಹೀಶ್ ತೀಕ್ಷಣ 4 ವಿಕೆಟ್ ಹಾಗೂ ಜಡೇಜಾ 3 ವಿಕೆಟ್ ಪಡೆದರು. ಪಂದ್ಯದ ಗತಿಯನ್ನೇ ಬದಲಿಸಿದ ಶಿವಂ ದುಬೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಆರ್ಸಿಬಿಗೆ ಈ ಪಂದ್ಯ ಎಚ್ಚರಿಕೆಯ ಸೂಚನೆ ನೀಡಿದೆ. ಬೌಲಿಂಗ್ ವಿಭಾಗ ಹಾಗೂ ಆರಂಭಿಕ ಜತೆಯಾಟದ ಬಗ್ಗೆ ತಂಡ ಇನ್ನಷ್ಟು ಎಚ್ಚರ ಗಮನ ಹರಿಸಬೇಕಿದೆ. ಇತ್ತ ಸಿಎಸ್ಕೆ ಆರ್ಸಿಬಿ ವಿರುದ್ಧ ಅಧಿಕಾರಯುತ ಗೆಲುವಿನ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಇಂದು (ಬುಧವಾರ) ಮುಂಬೈ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಲಿವೆ.
ಇದನ್ನೂ ಓದಿ: IPL 2022: ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಅರ್ಜುನ ರಣತುಂಗಾ ಐಪಿಎಲ್ ಬಿಡಿ ಎಂದಿದ್ದೇಕೆ?
IPL 2022: CSK ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಐಪಿಎಲ್ನಿಂದ ಔಟ್