ಫೈನಲ್​ ಫೈಟ್​ನಲ್ಲಿ ಸೂಪರ್ ಓವರ್: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್

|

Updated on: Oct 17, 2024 | 8:30 AM

LLC 2024 Final: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇದರ್ ಜಾಧವ್ ನೇತೃತ್ವದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಂತಿಮ ಹಣಾಹಣಿಯಲ್ಲಿ ಇರ್ಫಾನ್ ಪಠಾಣ್ ಮುಂದಾಳತ್ವದ ಕೊನಾರ್ಕ್ ಸೂರ್ಯ ಒಡಿಶಾ ತಂಡವನ್ನು ಸೂಪರ್ ಓವರ್​ನಲ್ಲಿ ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್​ನ ಫೈನಲ್ ಪಂದ್ಯದಲ್ಲಿ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೀನಗರದ ಭಕ್ಷಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸದರ್ನ್ ಸೂಪರ್ ಸ್ಟಾರ್ಸ್ ಮತ್ತು ಕೊನಾರ್ಕ್ ಸೂರ್ಯ ಒಡಿಶಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊನಾರ್ಕ್ ಸೂರ್ಯ ಒಡಿಶಾ ತಂಡದ ನಾಯಕ ಇರ್ಫಾನ್ ಪಠಾಣ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸದರ್ನ್ ಸೂಪರ್ ಸ್ಟಾರ್ಸ್​ ಪರ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 27 ರನ್ ಬಾರಿಸಿದರೆ, ಪವನ್ ನೇಗಿ 33 ರನ್​ ಸಿಡಿಸಿದರು. ಇನ್ನು ಹ್ಯಾಮಿಲ್ಟನ್ ಮಸಕಡ್ಝ 58 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 83 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನಿಂದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್​ ಕಲೆಹಾಕಿತು.

165 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೊನಾರ್ಕ್ ಸೂರ್ಯ ಒಡಿಶಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 37 ರನ್​ಗಳಿಸುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟರ್​ಗಳು ಔಟಾಗಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ ಪಠಾಣ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅಲ್ಲದೆ ಕೇವಲ 38 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 85 ರನ್ ಚಚ್ಚಿದರು. ಇದಾಗ್ಯೂ ಕೊನೆಯ ಓವರ್​ನಲ್ಲಿ 7 ರನ್​ಗಳ ಅವಶ್ಯಕತೆಯಿತ್ತು.

ಚುತುರಂಗ ಡಿಸಿಲ್ವಾ ಎಸೆದ ಅಂತಿಮ ಓವರ್​ನಲ್ಲಿ 6 ರನ್ ಕಲೆಹಾಕುವ ಮೂಲಕ ಯೂಸುಫ್ ಪಠಾಣ್ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು. ಉಭಯ ತಂಡಗಳು 164 ರನ್​ಗಳಿಸಿದ್ದರಿಂದ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್​ನ ಮೊರೆ ಹೋಗಲಾಯಿತು.

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಕೊನಾರ್ಕ್ ಸೂರ್ಯ ಒಡಿಶಾ ತಂಡವು 13 ರನ್ ಕಲೆಹಾಕಿತು. ಅದರಂತೆ 6 ಎಸೆತಗಳಲ್ಲಿ 14 ರನ್​ಗಳ ಗುರಿ ಪಡೆದ ಸದರ್ನ್ ಸೂಪರ್ ಸ್ಟಾರ್ಸ್ ಪರ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದರು. ಅಲ್ಲದೆ 5 ಎಸೆತಗಳಲ್ಲಿ 14 ರನ್ ಬಾರಿಸುವ ಮೂಲಕ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೇದರ್ ಜಾಧವ್ ನೇತೃತ್ವದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ಲೆಜೆಂಡ್ಸ್ ಲೀಗ್ ಕ್ರಿಕೆಟ್​ನ ಹೊಸ ಚಾಂಪಿಯನ್​ ಆಗಿ ಹೊರಹೊಮ್ಮಿದೆ.