IND vs ENG: ‘ಬೋರಿಂಗ್ ಟೆಸ್ಟ್ ಕ್ರಿಕೆಟ್​ಗೆ ಸ್ವಾಗತ’; ಆಂಗ್ಲರನ್ನು ಗೇಲಿ ಮಾಡಿದ ಯಂಗ್ ಇಂಡಿಯಾ

Lords Test: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ನಿಧಾನಗತಿಯ ಬ್ಯಾಟಿಂಗ್‌ ಅನ್ನು ಟೀಂ ಇಂಡಿಯಾ ಆಟಗಾರರು ಗೇಲಿ ಮಾಡಿದ್ದಾರೆ. ನಾಯಕ ಶುಭ್‌ಮನ್ ಗಿಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಆಂಗ್ಲರ ನಿಧಾನ ಬ್ಯಾಟಿಂಗ್‌ಗೆ ವ್ಯಂಗ್ಯವಾಡಿದರು. ಇದೀಗ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

IND vs ENG: ‘ಬೋರಿಂಗ್ ಟೆಸ್ಟ್ ಕ್ರಿಕೆಟ್​ಗೆ ಸ್ವಾಗತ’; ಆಂಗ್ಲರನ್ನು ಗೇಲಿ ಮಾಡಿದ ಯಂಗ್ ಇಂಡಿಯಾ
Team India

Updated on: Jul 11, 2025 | 3:14 PM

ಲಾರ್ಡ್ಸ್ ಮೈದಾನದಲ್ಲಿ (Lords Test) ಟೀಂ ಇಂಡಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಹೀಗಾಗಿ ಮೊದಲ ದಿನದಾಟದಂತ್ಯದ ವೇಳೆಗೆ ಆತಿಥೇಯ ತಂಡ 4 ವಿಕೆಟ್‌ಗಳಿಗೆ 251 ರನ್ ಗಳಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸುವುದಕ್ಕೆ ಹೆಸರುವಾಸಿಯಾಗಿದ್ದರೂ, ಈ ಟೆಸ್ಟ್ ಪಂದ್ಯದಲ್ಲಿ ಅವರು ರನ್ ಗಳಿಸಲು ಕಷ್ಟಪಡುತ್ತಿರುವುದು ಕಂಡುಬಂದಿದೆ. ಒಂದೆಡೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಕಷ್ಟಪಡುತ್ತಿದ್ದರೆ, ಇನ್ನೊಂದೆಡೆ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ (Shubman Gill) ಮತ್ತು ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಆಂಗ್ಲರನ್ನು ಭಾಝ್ ಬಾಲ್ ಕ್ರಿಕೆಟ್​ ಹೆಸರಿನಲ್ಲಿ ಗೇಲಿ ಮಾಡಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾಝ್ ಬಾಲ್ ಎಲ್ಲಿ ಎಂದ ಸಿರಾಜ್

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಂದು, ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಪ್ರತಿ ರನ್ ಗಳಿಸಲು ಹೆಣಗಾಡುತ್ತಿದ್ದರು. ಹೀಗಾಗಿ ಊಟದ ಸಮಯದ ವೇಳೆಗೆ, ಇಂಗ್ಲೆಂಡ್ 83 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆ ಬಳಿಕ ಎಚ್ಚರಿಕೆಯ ಆಟಕ್ಕೆ ಮುಂದಾದ ಆಂಗ್ಲರು, ವಿಕೆಟ್ ಕೈಚೆಲ್ಲದೆ ಇನ್ನಿಂಗ್ಸ್ ಕಟ್ಟಲಾರಂಭಿಸಿದರು.

ಈ ವೇಳೆ ಇಂಗ್ಲೆಂಡ್ ತಂಡದ ನಿಧಾನಗತಿಯ ಬ್ಯಾಟಿಂಗ್ ನೋಡಿದ ಮೊಹಮ್ಮದ್ ಸಿರಾಜ್, ಸ್ಟ್ರೈಕ್​ನಲ್ಲಿದ್ದ ಜೋ ರೂಟ್ ಅವರನ್ನು ತಮಾಷೆಯ ರೀತಿಯಲ್ಲಿ ಲೇವಡಿ ಮಾಡಿದರು. ‘ಭಾಝ್ ಬಾಲ್ ಎಲ್ಲಿದೆ, ನಾನು ಅದನ್ನು ನೋಡಲು ಬಯಸುತ್ತೇನೆ’ ಎಂದು ಹೇಳಿದರು. ಆದಾಗ್ಯೂ ರೂಟ್ ತಮ್ಮ ಎಂದಿನ ಆಟವನ್ನು ಮುಂದುವರೆಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸಿರಾಜ್​ಗೂ ಮೊದಲು, ನಾಯಕ ಶುಭ್‌ಮನ್ ಗಿಲ್ ಕೂಡ ನಿಧಾನಗತಿಯ ಬ್ಯಾಟಿಂಗ್‌ ಮಾಡುತ್ತಿದ್ದ ಇಂಗ್ಲೆಂಡ್ ತಂಡವನ್ನು ಟೀಕಿಸಿದರು.

ಸಿರಾಜ್ ವ್ಯಂಗ್ಯವಾಡಿದ ವಿಡಿಯೋ

ಟೀಕಿಸಿದ ಶುಭ್​ಮನ್ ಗಿಲ್

ಸಿರಾಜ್​ಗೂ ಮೊದಲು, ನಾಯಕ ಶುಭ್​ಮನ್ ಗಿಲ್ ಕೂಡ ಇಂಗ್ಲೆಂಡ್ ತಂಡದ ನಿಧಾನಗತಿಯ ಬ್ಯಾಟಿಂಗ್ ಅನ್ನು ಟೀಕಿಸಿದರು. ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದ ಎರಡನೇ ಸೆಷನ್​ನಲ್ಲಿ, ‘ಇನ್ನು ಮುಂದೆ ಮನರಂಜನೆಯ ಕ್ರಿಕೆಟ್ ಇಲ್ಲ, ಸ್ನೇಹಿತರೇ… ನೀರಸ ಕ್ರಿಕೆಟ್‌ಗೆ ಸ್ವಾಗತ’ ಎಂದು ಹೇಳಿದರು. ಇದು ಸ್ಟಂಪ್ ಮೈಕ್​ನಲ್ಲಿ ಸ್ಪಷ್ಟವಾಗಿ ರೆಕಾರ್ಡ್​ ಆಗಿದೆ. ಇದೀಗ ಇದರ ವೀಡಿಯೊ ಕೂಡ ವೈರಲ್ ಆಗುತ್ತಿದೆ.

ಗಿಲ್ ಗೇಲಿ ಮಾಡಿದ ವಿಡಿಯೋ

ಶತಕದ ಸಮೀಪದಲ್ಲಿ ಜೋ ರೂಟ್

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ದಿನದಾಟದ ಅಂತ್ಯದವರೆಗೆ ಅವರು ಅಜೇಯ 99 ರನ್ ಬಾರಿಸಿದ್ದರೆ, ನಾಯಕ ಬೆನ್ ಸ್ಟೋಕ್ಸ್ 39 ರನ್ ಗಳಿಸಿದ್ದಾರೆ. ಶತಕದ ಸಮೀಪದಲ್ಲಿರುವ ಜೋ ರೂಟ್ ಇನ್ನೊಂದು ರನ್ ಬಾರಿಸಿದರೆ, ಭಾರತದ ವಿರುದ್ಧ 11ನೇ ಶತಕ ಬಾರಿಸಿದ ದಾಖಲೆ ಸೃಷ್ಟಿಸಲಿದ್ದಾರೆ. ಇವರಿಬ್ಬರ ಹೊರತಾಗಿ, ಓಲ್ಲಿ ಪೋಪ್ 44 ರನ್​ಗಳ ಇನ್ನಿಂಗ್ಸ್ ಆಡಿದರು. ಆರಂಭಿಕ ಆಟಗಾರರಾದ ಬೆನ್ ಡಕೆಟ್ 23 ರನ್ ಗಳಿಸಿ ಔಟಾದರೆ, ಜ್ಯಾಕ್ ಕ್ರೌಲಿ 18 ರನ್ ಗಳಿಸಿ ಔಟಾದರು. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳಿಗೆ 251 ರನ್ ಗಳಿಸಿದರೆ, ಭಾರತದ ಪರ ನಿತೀಶ್ ರೆಡ್ಡಿ ಎರಡು ವಿಕೆಟ್ ಪಡೆದಿದ್ದು, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಉರುಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Fri, 11 July 25