AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೆಟ್ ಉರುಳಿಸಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಫುಟ್ಬಾಲ್ ಆಟಗಾರನಿಗೆ ಗೌರವ ಸಲ್ಲಿಸಿದ ಸಿರಾಜ್

Mohammed Siraj Pays Tribute To Diogo Jota: ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ, ಮೊಹಮ್ಮದ್ ಸಿರಾಜ್ ತಮ್ಮ ವಿಕೆಟ್ ಅನ್ನು ಕಾರು ಅಪಘಾತದಲ್ಲಿ ನಿಧನರಾದ ಫುಟ್‌ಬಾಲ್ ಆಟಗಾರ ಡಿಯಾಗೋ ಜೋಟಾಗೆ ಅರ್ಪಿಸಿದರು. ಜೋಟಾ ಅವರ ಜೆರ್ಸಿ ಸಂಖ್ಯೆ 20 ಆಗಿದ್ದರಿಂದ, ವಿಕೆಟ್ ಪಡೆದ ನಂತರ ಸಿರಾಜ್ 20 ಎಂದು ಕೈ ಸನ್ನೆ ಮಾಡಿದರು.

ವಿಕೆಟ್ ಉರುಳಿಸಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಫುಟ್ಬಾಲ್ ಆಟಗಾರನಿಗೆ ಗೌರವ ಸಲ್ಲಿಸಿದ ಸಿರಾಜ್
Mohammed Siraj
ಪೃಥ್ವಿಶಂಕರ
|

Updated on:Jul 12, 2025 | 4:54 PM

Share

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಲಾರ್ಡ್ಸ್ ಟೆಸ್ಟ್ (Lords Test) ಪಂದ್ಯದ ಎರಡನೇ ದಿನದಂದು ಇಬ್ಬರು ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆದರೆ ಅವರ ಬೌಲಿಂಗ್‌ನಲ್ಲಿ 2 ಸುಲಭ ಕ್ಯಾಚ್​ಗಳನ್ನು ಕೈಬಿಡದಿದ್ದರೆ ಅವರ ವಿಕೆಟ್‌ಗಳ ಸಂಖ್ಯೆ ಹೆಚ್ಚುತ್ತಿತ್ತು. ಆದಾಗ್ಯೂ ಮೊದಲ ಇನ್ನಿಂಗ್ಸ್​ನಲ್ಲಿ ಸಿರಾಜ್ ಮೊದಲ ವಿಕೆಟ್ ಪಡೆದ ಕೂಡಲೇ ಕೆಲವು ದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಡಿಯಾಗೋ ಜೋಟಾ (Diego Jota) ಅವರಿಗೆ ಭಾವನಾತ್ಮಕ ಗೌರವ ಸಲ್ಲಿಸಿದರು. ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮೀ ಸ್ಮಿತ್ ಅವರನ್ನು ಔಟ್ ಮಾಡಿದ ನಂತರ ಸಿರಾಜ್ ತಮ್ಮ ಬೆರಳಿನಿಂದ 20 ಎಂದು ಸನ್ನೆ ಮಾಡಿದರು. ಈ ಸಂಖ್ಯೆ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸ್ಟಾರ್ ಫುಟ್‌ಬಾಲ್ ಆಟಗಾರ ಡಿಯಾಗೋ ಜೋಟಾ ಅವರ ಜೆರ್ಸಿ ಸಂಖ್ಯೆಯಾಗಿತ್ತು. ಎರಡನೇ ದಿನದಾಟ ಮುಗಿದ ನಂತರ ಈ ಬಗ್ಗೆ ಸಿರಾಜ್ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ಜೋಟಾಗೆ ಗೌರವ ಸಲ್ಲಿಸಿದ ಸಿರಾಜ್

ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 107 ನೇ ಓವರ್‌ನ ಎರಡನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮೀ ಸ್ಮಿತ್ ಅವರ ವಿಕೆಟ್ ಪಡೆದರು. ಇದಾದ ನಂತರ, ಅವರು ಲಿವರ್‌ಪೂಲ್ ಫುಟ್‌ಬಾಲ್ ಆಟಗಾರ ಡಿಯಾಗೋ ಜೋಟಾ ಅವರಿಗೆ ತಮ್ಮ ಬೆರಳುಗಳಿಂದ 20 ನೇ ಸಂಖ್ಯೆಯ ಚಿಹ್ನೆಯನ್ನು ಮಾಡಿ ನಂತರ ಎರಡೂ ಕೈಗಳನ್ನು ಆಕಾಶದ ಕಡೆಗೆ ಎತ್ತುವ ಮೂಲಕ ಗೌರವ ಸಲ್ಲಿಸಿದರು.

ಸಿರಾಜ್ ಗೌರವ ಸಲ್ಲಿಸಿದ ವಿಡಿಯೋ

ಜುಲೈ 3 ರಂದು ಕಾರು ಅಪಘಾತದಲ್ಲಿ ನಿಧನರಾದ ಪೋರ್ಚುಗಲ್‌ನ ಸ್ಟಾರ್ ಆಟಗಾರ ಜೋಟಾ ಲಿವರ್‌ಪೂಲ್ ಪರ ಜರ್ಸಿ ಸಂಖ್ಯೆ 20 ನ್ನು ಧರಿಸಿ ಆಡುತ್ತಿದ್ದರು. ಮೊಹಮ್ಮದ್ ಸಿರಾಜ್ ಫುಟ್‌ಬಾಲ್‌ನ ದೊಡ್ಡ ಅಭಿಮಾನಿಯಾಗಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಿಗ್ನೇಚರ್ ಸ್ಟೆಪ್ ಮಾಡುವ ಮೂಲಕ ವಿಕೆಟ್ ಪಡೆದ ಬಳಿಕ ಸಂಭ್ರಮಿಸುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ.

ಸಿರಾಜ್ ಹೇಳಿದ್ದೇನು?

ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಸಿರಾಜ್ ಹೇಳುವಂತೆ, ‘ಕಳೆದ ಪಂದ್ಯದ ಸಮಯದಲ್ಲಿ ಸ್ಟಾರ್ ಫುಟ್ಬಾಲ್ ಆಟಗಾರ ಡಿಯಾಗೋ ಜೋಟಾ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ನನಗೆ ತಿಳಿಯಿತು. ನಾನು ಪೋರ್ಚುಗಲ್ ತಂಡದ ಅಭಿಮಾನಿ ಮತ್ತು ಜೋಟಾ ಈ ತಂಡಕ್ಕಾಗಿ ಆಡುತ್ತಿದ್ದರು. ಅದಕ್ಕಾಗಿಯೇ ನಾನು ತುಂಬಾ ಭಾವುಕನಾದೆ. ಕೊನೆಯ ಪಂದ್ಯದಲ್ಲೇ ಅವರಿಗೆ ಗೌರವ ಸಲ್ಲಿಸಬೇಕೆಂದುಕೊಂಡಿದ್ದೆ, ಆದರೆ ನನಗೆ ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ನಾನು ಅವರಿಗೆ ಗೌರವ ಸಲ್ಲಿಸಿದೆ. ಜೀವನದಲ್ಲಿ ಏನಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ನಾನು ಈ ಬಗ್ಗೆ ಕುಲ್ದೀಪ್ ಯಾದವ್ ಅವರಿಗೆ ಹೇಳಿದ್ದೆ, ಇಂದು ನನಗೆ ಅವಕಾಶ ಸಿಕ್ಕಿತು, ಆದ್ದರಿಂದ ನಾನು ನನ್ನ ವಿಕೆಟ್ ಅನ್ನು ಜೋಟಾಗೆ ಅರ್ಪಿಸಿದೆ ಎಂದಿದ್ದಾರೆ.

ಬಿಸಿಸಿಐ ಹಂಚಿಕೊಂಡ ವಿಡಿಯೋ

ಡಿಯಾಗೋ ಜೋಟಾ ಯಾರು?

ಡಿಯಾಗೋ ಜೋಟಾ ಯುರೋಪಿನ ಅಗ್ರ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದು, ಪೋರ್ಚುಗಲ್ ರಾಷ್ಟ್ರೀಯ ತಂಡದ ಭಾಗವೂ ಆಗಿದ್ದರು. ಜುಲೈ 3 ರಂದು, ಈ 28 ವರ್ಷದ ಸ್ಟಾರ್ ಆಟಗಾರ ವಾಯುವ್ಯ ಸ್ಪೇನ್‌ನ ಝಮೊರಾ ಬಳಿ ಕಾರು ಅಪಘಾತದಲ್ಲಿ ನಿಧನರಾದರು. ಅವರ ಸಹೋದರ ಆಂಡ್ರೆ ಸಿಲ್ವಾ ಕೂಡ ಈ ಅಪಘಾತದಲ್ಲಿ ನಿಧನರಾದರು. ಕಳೆದ ಸೀಸನ್‌ನಲ್ಲಿ ಲಿವರ್‌ಪೂಲ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಜೋಟಾ ಪ್ರಮುಖ ಪಾತ್ರ ವಹಿಸಿದ್ದರು.

ಯಾರದ್ದೋ ಹೆಂಡತಿ ಕರೆ ಮಾಡುತ್ತಿದ್ದಾರೆ: ಪತ್ರಿಕಾಗೋಷ್ಠಿಯಲ್ಲಿ ಹಾಸ್ಯಚಟಾಕಿ ಹಾರಿಸಿದ ಬುಮ್ರಾ; ವಿಡಿಯೋ ನೋಡಿ

ಲಿವರ್‌ಪೂಲ್‌ಗೂ ಮೊದಲು, ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದಲ್ಲಿ ಜೂನ್‌ನಲ್ಲಿ ನಡೆದಿದ್ದ ಪೋರ್ಚುಗಲ್ ನೇಷನ್ಸ್ ಲೀಗ್ ಫೈನಲ್ ಗೆಲ್ಲುವಲ್ಲಿ ಜೋಟಾ ದೊಡ್ಡ ಪಾತ್ರ ವಹಿಸಿದ್ದರು. ಜೋಟಾ ಪೋರ್ಚುಗಲ್ ಪರ 49 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಒಟ್ಟು 14 ಗೋಲುಗಳನ್ನು ಗಳಿಸಿದ್ದಾರೆ. 2020 ರಲ್ಲಿ ಲಿವರ್‌ಪೂಲ್‌ ಕ್ಲಬ್‌ಗೆ ಸೇರಿದ ಜೋಟಾ, ಈ ಕ್ಲಬ್‌ ಪರ ಆಡಿದ 123 ಪಂದ್ಯಗಳಲ್ಲಿ 47 ಗೋಲುಗಳನ್ನು ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sat, 12 July 25