
ಲಾರ್ಡ್ಸ್‌ನಲ್ಲಿ (Lords Test) ನಡೆಯತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೆಯ ಇಂಗ್ಲೆಂಡ್ 387 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. 251 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಮೊದಲ ದಿನದಾಟ ಮುಗಿಸಿದ್ದ ಇಂಗ್ಲೆಂಡ್ ತಂಡ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಮುಂದುವರೆಸಿತು. ಎರಡನೇ ದಿನದಂದು ಮಾಜಿ ನಾಯಕ ಜೋ ರೂಟ್ (Joe Root) ತಮ್ಮ ಶತಕವನ್ನು ಪೂರ್ಣಗೊಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮೀ ಸ್ಮಿತ್, ಕೆಎಲ್ ರಾಹುಲ್ ನೀಡಿದ ಜೀವದಾನದ ಲಾಭ ಪಡೆದು ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ವೇಗಿ ಬ್ರೈಡನ್ ಕಾರ್ಸೆ ಕೂಡ 56 ರನ್‌ಗಳ ಕಾಣಿಕೆ ನೀಡಿದರು. ಉಳಿದಂತೆ ಯಾರೂ ಸಹ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್ಗಳ ಗೊಂಚಲು ಪಡೆದರೆ, ನಿತೀಶ್ ರೆಡ್ಡಿ ಮತ್ತು ಸಿರಾಜ್ 2 ವಿಕೆಟ್ ಪಡೆದರು. ಉಳಿದಂತೆ ಜಡೇಜಾ 1 ವಿಕೆಟ್ ಪಡೆದರು.
ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೀಗಾಗಿ ಮೊದಲ ಸೆಷನ್ನಲ್ಲಿಯೇ ಆತಿಥೇಯರು 3 ವಿಕೆಟ್ ಕಳೆದುಕೊಂಡರು. ಈ ಮೂರು ವಿಕೆಟ್ ಬುಮ್ರಾ ಪಾಲಾದವು. ಬುಮ್ರಾ ಕೆಲವೇ ನಿಮಿಷಗಳ ಅಂತರದಲ್ಲಿ ಬೆನ್ ಸ್ಟೋಕ್ಸ್ (44), ಜೋ ರೂಟ್ (104) ಮತ್ತು ಕ್ರಿಸ್ ವೋಕ್ಸ್ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದರ ನಂತರ, ಜೇಮೀ ಸ್ಮಿತ್ ಮತ್ತು ಬ್ರೈಡನ್ ಕಾರ್ಸ್ ಸ್ಫೋಟಕ ಜೊತೆಯಾಟ ಕಟ್ಟಿದರು. ಇವರಿಬ್ಬರು ಎಂಟನೇ ವಿಕೆಟ್‌ಗೆ 80 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದರು. ಈ ವೇಳೆ ದಾಳಿಗಿಳಿದ ಸಿರಾಜ್, 56 ಎಸೆತಗಳಲ್ಲಿ 51 ರನ್ ಬಾರಿಸಿದ್ದ ಜೇಮೀ ಸ್ಮಿತ್ ಅವರನ್ನು ಬಲಿಪಡೆದರು.
IND vs ENG: 3ನೇ ಪಂದ್ಯದಲ್ಲೂ ಅದೇ ಕಥೆ; ಕ್ಯಾಚ್ ಹಿಡಿಯುವುದನ್ನು ಮರೆತಿರುವ ಟೀಂ ಇಂಡಿಯಾ
ಇದರ ನಂತರ ಬುಮ್ರಾ, ಜೋಫ್ರಾ ಆರ್ಚರ್ ರೂಪದಲ್ಲಿ ಇಂಗ್ಲೆಂಡ್‌ಗೆ ಒಂಬತ್ತನೇ ಹೊಡೆತ ನೀಡಿದರು. ಆದಾಗ್ಯೂ ವೇಗಿ ಬ್ರೈಡನ್ ಕಾರ್ಸ್ ಭಾರತದ ವಿರುದ್ಧ ತಮ್ಮ ಮೊದಲ ಅರ್ಧಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು. ಅವರು 83 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಕೂಡ ಅಂತ್ಯವಾಯಿತು.ಉಳಿದಂತೆ ಪಂದ್ಯದ ಆರಂಭಿಕ ದಿನದಂದು ಜ್ಯಾಕ್ ಕ್ರೌಲಿ 18, ಬೆನ್ ಡಕೆಟ್ 23, ಓಲಿ ಪೋಪ್ 44 ರನ್‌ಗಳ ಕಾಣಿಕೆ ನೀಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Fri, 11 July 25