AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ನಿಮಿಷಗಳ ಅಂತರದಲ್ಲಿ 3 ವಿಕೆಟ್ ಉರುಳಿಸಿದ ಬೂಮ್ ಬೂಮ್ ಬುಮ್ರಾ; ವಿಡಿಯೋ ನೋಡಿ

Jasprit Bumrah: ಲಾರ್ಡ್ಸ್‌ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ ಕೆಲವೇ ನಿಮಿಷಗಳಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಕಪಿಲ್ ದೇವ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದಿದ್ದಾರೆ. ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್‌ಗೆ ಸಾಕ್ಷಿಯಾಗಿದೆ. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗದ ಬೌಲರ್ ಆಗಿ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ.

IND vs ENG: ನಿಮಿಷಗಳ ಅಂತರದಲ್ಲಿ 3 ವಿಕೆಟ್ ಉರುಳಿಸಿದ ಬೂಮ್ ಬೂಮ್ ಬುಮ್ರಾ; ವಿಡಿಯೋ ನೋಡಿ
England Team
ಪೃಥ್ವಿಶಂಕರ
|

Updated on:Jul 11, 2025 | 5:09 PM

Share

ಲಾರ್ಡ್ಸ್‌ ಟೆಸ್ಟ್​ನ (Lord’s Test) ಎರಡನೇ ದಿನದಾಟ ಶುರುವಾಗಿದ್ದು, ಇಂಗ್ಲೆಂಡ್‌ ತಂಡ ತನ್ನ ಮೊದಲ ಇನ್ನಿಂಗ್ಸ್ ಮುಂದುವರೆಸಿದೆ. ಮೊದಲ ಸೆಷನ್​ನಲ್ಲಿ ಕೊಂಚ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಭೋಜನ ವಿರಾಮಕ್ಕೂ ಮುನ್ನ ಇಂಗ್ಲೆಂಡ್​ನ ಪ್ರಮುಖ ಬ್ಯಾಟ್ಸ್‌ಮನ್​ಗಳನ್ನು ಪೆವಿಲಿಯನ್​ಗೆ ಕಳುಹಿಸಿದೆ. ಅದರಲ್ಲೂ ಮೊದಲ ದಿನದಾಟದಲ್ಲಿ ಕೇವಲ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಬುಮ್ರಾ (Jasprit Bumrah) ಎರಡನೇ ದಿನದಾಟದಂದು ಒಂದರ ಹಿಂದೆ ಒಂದರಂತೆ ಕೆಲವೇ ನಿಮಿಷಗಳ ಅಂತರದಲ್ಲಿ ಪ್ರಮುಖ 3 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಬುಮ್ರಾ ಲಾರ್ಡ್ಸ್‌ ಮೈದಾನದಲ್ಲಿ ಭಾರತದ ಮಾಜಿ ನಾಯಕ ಹಾಗೂ 1983 ವಿಶ್ವಕಪ್ ಹೀರೋ ಕಪಿಲ್ ದೇವ್ ದಾಖಲೆಯನ್ನು ಸಹ ಮುರಿದಿದ್ದಾರೆ.

2ನೇ ದಿನ 3 ವಿಕೆಟ್

ಲಾರ್ಡ್ಸ್‌ ಟೆಸ್ಟ್​ನ ಮೊದಲ ದಿನ ಇಂಗ್ಲೆಂಡ್​ನ ಉಪನಾಯಕ ಹ್ಯಾರಿ ಬ್ರೂಕ್​ರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಬುಮ್ರಾಗೆ ಆ ಬಳಿಕ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಆದರೆ ಎರಡನೇ ದಿನದಾಟದಲ್ಲಿ ಮೈಗೊಡವಿ ಎದ್ದು ನಿಂತಿರುವ ಬುಮ್ರಾ, ಮೂವರು ಆಟಗಾರರನ್ನು ಬಲಿ ಪಡೆದಿದ್ದಾರೆ. ಅದರಲ್ಲೂ ಒಂದೇ ಓವರ್​ನಲ್ಲಿ ಇಬ್ಬರ ವಿಕೆಟ್ ಉರುಳಿಸಿದ್ದು ಬುಮ್ರಾ ಮಾರಕ ದಾಳಿಗೆ ಸಾಕ್ಷಿಯಾಯಿತು.

ಬೆನ್ ಸ್ಟೋಕ್ಸ್ ವಿಕೆಟ್

ಮೊದಲ ದಿನ ಜೋ ರೂಟ್ ಜೊತೆ ಅರ್ಧಶತಕದ ಜೊತೆಯಾಟ ನಡೆಸಿದ್ದ ನಾಯಕ ಬೆನ್ ಸ್ಟೋಕ್ಸ್ ಎರಡನೇ ದಿನದಾಟದಲ್ಲೂ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಅಲ್ಲದೆ 44 ರನ್ ಬಾರಿಸಿ ಅರ್ಧಶತಕದ ಹೊಸ್ತಿಲಿನಲ್ಲಿದ್ದರು. ಈ ವೇಳೆ ದಾಳಿಗಿಳಿದ ಬುಮ್ರಾ ತಮ್ಮ ಇನ್ಸ್ವಿಂಗರ್ ಮೂಲಕ ಸ್ಟೋಕ್ಸ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ಶತಕ ಸಿಡಿಸಿ ಬಿಗ್ ಇನ್ನಿಂಗ್ಸ್ ಕಟ್ಟುವ ಲೆಕ್ಕ ಹಾಕಿಕೊಂಡಿದ್ದ ಜೋ ರೂಟ್​ರನ್ನು ಮತ್ತದೇ ರೀತಿಯ ಎಸೆತದ ಮೂಲಕ ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ರೂಟ್ ವಿಕೆಟ್ ಬಳಿಕ ಬಂದ ಆಲ್​ರೌಂಡರ್ ಕ್ರಿಸ್​ ವೋಕ್ಸ್​ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕೀಪರ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ಬುಮ್ರಾ ಕೆಲವೇ ನಿಮಿಷಗಳ ಅಂತರದಲ್ಲಿ 3 ವಿಕೆಟ್ ಉರುಳಿಸಿದರು.

ಜೋ ರೂಟ್ ವಿಕೆಟ್

ಕಪಿಲ್ ದೇವ್ ದಾಖಲೆ ಧ್ವಂಸ

ಲಾರ್ಡ್ಸ್‌ ಟೆಸ್ಟ್​ನಲ್ಲಿ 4 ವಿಕೆಟ್ ಕಬಳಿಸಿರುವ ಬುಮ್ರಾ ಈ ಮೂಲಕ ಇಂಗ್ಲೆಂಡ್​ನಲ್ಲಿ ಅತ್ಯಧಿಕ ವಿಕೆಟ್ ತೆಗೆದ ಭಾರತದ ವೇಗಿಗಳ ಪಟ್ಟಿಯಲ್ಲಿ ಕಪಿಲ್ ದೇವ್​ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್​ನಲ್ಲಿ ಆಡಿದ್ದ 13 ಟೆಸ್ಟ್​ಗಳಲ್ಲಿ ಕಪಿಲ್ ದೇವ್ 43 ವಿಕೆಟ್‌ಗಳನ್ನು ಉರುಳಿಸಿದ್ದರು. ಇದೀಗ ಬುಮ್ರಾ ತಮ್ಮ 11ನೇ ಟೆಸ್ಟ್ ಪಂದ್ಯದಲ್ಲಿ 46 ವಿಕೆಟ್​ ಕಬಳಿಸಿದ್ದು ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ಮೊದಲ ಸ್ಥಾನದಲ್ಲಿರುವ ಇಶಾಂತ್ ಶರ್ಮಾ, ಇಂಗ್ಲೆಂಡ್‌ನಲ್ಲಿ 15 ಟೆಸ್ಟ್ ಪಂದ್ಯಗಳನ್ನಾಡಿದ್ದು 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೇ ಸರಣಿಯಲ್ಲಿ ಬುಮ್ರಾ, ಇಶಾಂತ್ ಶರ್ಮಾ ಅವರ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Fri, 11 July 25