IND vs ENG: 3ನೇ ಪಂದ್ಯದಲ್ಲೂ ಅದೇ ಕಥೆ; ಕ್ಯಾಚ್ ಹಿಡಿಯುವುದನ್ನು ಮರೆತಿರುವ ಟೀಂ ಇಂಡಿಯಾ
Team India's Dropped Catches: ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ದೋಷಗಳು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದುವರೆಗೆ ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ 13 ಕ್ಯಾಚ್‌ಗಳು ಕೈಚೆಲ್ಲಲ್ಪಟ್ಟಿವೆ. ಲೀಡ್ಸ್‌ನಲ್ಲಿನ ಸೋಲು ಕಳಪೆ ಫೀಲ್ಡಿಂಗ್‌ನ ಪರಿಣಾಮವೇ ಆಗಿತ್ತು. ಇದೀಗ ಮೂರನೇ ಟೆಸ್ಟ್ನಲ್ಲೂ ಟೀಂ ಇಂಡಿಯಾ ಕ್ಯಾಚ್ ಕೈಚೆಲ್ಲುವ ಕಯಾಲಿಯನ್ನು ಮುಂದುವರೆಸಿದೆ.

ಕ್ರಿಕೆಟ್ನಲ್ಲಿ ಕ್ಯಾಚ್ ಹಿಡಿಯುವುದು ಎಷ್ಟು ಮುಖ್ಯ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. 1983 ರ ವಿಶ್ವಕಪ್ನಲ್ಲಿ ಕಪಿಲ್ ದೇವ್ ಹಿಡಿದಿದ್ದ ಅದೊಂದು ಕ್ಯಾಚ್ ಟೀಂ ಇಂಡಿಯಾಕ್ಕೆ (Team India) ಮೊದಲ ವಿಶ್ವಕಪ್ ತಂದುಕೊಟ್ಟಿದ್ದನ್ನು ನಾವ್ಯಾರು ಮರೆಯುವಂತಿಲ್ಲ. ಅದೇ ವೇಳೆ ಕೈಚೆಲ್ಲಿದ ಕ್ಯಾಚ್ನಿಂದಾಗಿ ಅದೇಷ್ಟೋ ಪಂದ್ಯಗಳಲ್ಲಿ ತಂಡಗಳು ಸೋತಿರುವುದನ್ನು ನಾವು ನೋಡಿದ್ದೇವೆ. ಹೀಗಿರುವಾಗ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಆಟಗಾರರು ಕೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಂಗ್ ಮಾಡುತ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳದ್ದು, ಇದಕ್ಕೆ ಕಾರಣವೂ ಇದೇ. ಇಂಗ್ಲೆಂಡ್ ಪ್ರವಾಸದಲ್ಲಿ (England tour 2025) ಇದುವರೆಗೆ ಮೂರು ಪಂದ್ಯಗಳನ್ನಾಡಿರುವ (ಲಾರ್ಡ್ಸ್ ಟೆಸ್ಟ್ ಸೇರಿ) ಟೀಂ ಇಂಡಿಯಾ ಮೂರು ಇನ್ನಿಂಗ್ಸ್‌ಗಳಲ್ಲಿ ಫೀಲ್ಡಿಂಗ್ ಮಾಡಿದೆ. ಈ ಮೂರು ಇನ್ನಿಂಗ್ಸ್‌ಗಳಲ್ಲಿ ಟೀಂ ಇಂಡಿಯಾ ಕೈಬಿಟ್ಟಿದ್ದು, ಬರೋಬ್ಬರಿ 13 ಕ್ಯಾಚ್. ಇದರಲ್ಲಿ ಒಂದೆರೆಡು ಕ್ಯಾಚ್‌ಗಳು ಕಷ್ಟಕರವಾಗಿದ್ದೋ ಎನ್ನುವುದನ್ನು ಬಿಟ್ಟರೆ, ಉಳಿದ ಕ್ಯಾಚ್‌ಗಳು ಒಬ್ಬ ವೃತ್ತಿಪರ ಕ್ರಿಕೆಟಿಗನ ಕೈನಿಂದ ಜಾರುವ ಕ್ಯಾಚ್ಗಳಾಗಿರಲಿಲ್ಲ. ಹೀಗಿರುವಾಗ ಟೀಂ ಇಂಡಿಯಾದ ಫೀಲ್ಡರ್ಗಳು ಮಾತ್ರ ಪದೇ ಪದೇ ಒಂದೇ ತಪ್ಪನ್ನು ಮಾಡುತ್ತಾ ಬೌಲರ್ಗಳ ತಾಳ್ಮೆ ಪರೀಕ್ಷಿಸುತ್ತಿದ್ದಾರೆ.
ಮೊದಲ ಟೆಸ್ಟ್ನಲ್ಲಿ 8 ಕ್ಯಾಚ್ ಡ್ರಾಪ್
ಲೀಡ್ಸ್ ಟೆಸ್ಟ್ನಿಂದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಶುರುವಾಯಿತು. ಅದೃಷ್ಟವೆಂಬಂತೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಭರ್ಜರಿ ಪ್ರದರ್ಶನ ನೀಡಿತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಬುಮ್ರಾರನ್ನು ಬಿಟ್ಟರೆ ಉಳಿದವರಿಂದ ಪರಿಣಾಮಕಾರಿ ಬೌಲಿಂಗ್ ಮೂಡಿಬರಲಿಲ್ಲ. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬರುವುದಾದರೆ, ಭಾರತ ಲೀಡ್ಸ್ ಟೆಸ್ಟ್ ಸೋಲುವುದಕ್ಕೆ ಕಳಪೆ ಫೀಲ್ಡಿಂಗ್ ಕಾರಣ ಎಂದರೆ ತಪ್ಪಾಗಲಾರದು. ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ಏಳರಿಂದ ಎಂಟು ಕ್ಯಾಚ್‌ಗಳನ್ನು ಕೈಚೆಲ್ಲಿತು. ಇದರ ಜೀವದಾನ ಪಡೆದ ಇಂಗ್ಲೆಂಡ್ನ ಅಷ್ಟೂ ಬ್ಯಾಟ್ಸ್ಮನ್ಗಳ ರನ್ಗಳ ಗುಡ್ಡೆ ಹಾಕಿದ್ದರು. ಇದರ ಫಲವಾಗಿ ಇಂಗ್ಲೆಂಡ್ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದರೆ, ಇತ್ತ ಟೀಂ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು.
ಎರಡನೇ ಟೆಸ್ಟ್ನಲ್ಲಿ 3 ಕ್ಯಾಚ್ ಮಿಸ್
ಮೊದಲ ಟೆಸ್ಟ್ ಕಥೆ ಮುಗಿಯಿತು, ಎರಡನೇ ಟೆಸ್ಟ್ನಲ್ಲಾದರೂ ಆಟಗಾರರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 2ನೇ ಟೆಸ್ಟ್ನಲ್ಲಿ ಕೈಚೆಲ್ಲಿದ ಕ್ಯಾಚ್ಗಳ ಸಂಖ್ಯೆ ಕಡಿಮೆಯಾಗಿತ್ತೇ ಹೊರತು, ಅಲ್ಲೂ ಕೂಡ ಕ್ಯಾಚ್ ಬಿಡುವ ಪ್ರವೃತ್ತಿ ಮುಂದುವರೆದಿತ್ತು. 2ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತ್ತು. ಇಲ್ಲೂ ಸಹ ಜೀವದಾನದ ಲಾಭ ಪಡೆದ ಆಂಗ್ಲ ಆಟಗಾರರು ಬಿಗ್ ಇನ್ನಿಂಗ್ಸ್ ಆಡಿದರಾದರೂ, ಬೌಲಿಂಗ್ ವಿಭಾಗ ತಂಡದ ಕೈಹಿಡಿಯಿತು. ಅಂತಿಮವಾಗಿ ಟೀಂ ಇಂಡಿಯಾ ಜಯದ ನಗೆ ಬೀರಿತು.
IND vs ENG: ನಿಮಿಷಗಳ ಅಂತರದಲ್ಲಿ 3 ವಿಕೆಟ್ ಉರುಳಿಸಿದ ಬೂಮ್ ಬೂಮ್ ಬುಮ್ರಾ; ವಿಡಿಯೋ ನೋಡಿ
3ನೇ ಟೆಸ್ಟ್ನಲ್ಲಿ ಇದುವರೆಗೆ 2 ಕ್ಯಾಚ್ ಡ್ರಾಪ್
ಇದೀಗ ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್ ಆರಂಭವಾಗಿದ್ದು, ಮೊದಲ ಎರಡು ದಿನಗಳಲ್ಲಿ ಟೀಂ ಇಂಡಿಯಾ ಈಗಾಗಲೇ 2 ಕ್ಯಾಚ್‌ಗಳನ್ನು ಕೈಚೆಲ್ಲಿದೆ. ಇದರಲ್ಲಿ ಮೊದಲನೆಯ ದಿನ ನಾಯಕ ಗಿಲ್, ಓಲಿ ಪೋಪ್ ಅವರ ಕ್ಯಾಚ್ ಕೈಚೆಲ್ಲಿದರು. ವಾಸ್ತವವಾಗಿ ಪೋಪ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಗಿಲ್ ನೀಡಿದ ಜೀವದಾನದ ಲಾಭ ಪಡೆದಿದ್ದ ಪೋಪ್ 44 ರನ್ಗಳ ಇನ್ನಿಂಗ್ಸ್ ಆಡಿದಲ್ಲದೆ, ರೂಟ್ ಜೊತೆ ಉತ್ತಮ ಜೊತೆಯಾಟವನ್ನು ಕಟ್ಟಿದರು. ಇದೀಗ ಎರಡನೇ ದಿನದಾಟದಲ್ಲಿ ಜೇಮೀ ಸ್ಮಿತ್ ನೀಡಿದ್ದ ಸುಲಭವಾದ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿ ನಿಂತಿದ್ದ ರಾಹುಲ್ ಕೈಬಿಟ್ಟಿದ್ದಾರೆ. ರಾಹುಲ್ ಕ್ಯಾಚ್ ಬಿಟ್ಟಾಗ ಒಂದಂಕಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ ಇದೀಗ, ಊಟದ ವಿರಾಮದ ವೇಳೆಗೆ ಅಜೇಯ ಅರ್ಧಶತಕ ಚಚ್ಚಿದ್ದಾರೆ. ರಾಹುಲ್ ಬಿಟ್ಟ ಕ್ಯಾಚ್ ಎಷ್ಟು ದುಬಾರಿಯಾಗುತ್ತೆ ಎಂಬುದು ಪಂದ್ಯದ ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ. ಹೀಗಾಗಿ ಪ್ರತಿ ಟೆಸ್ಟ್ ಪಂದ್ಯದಲ್ಲೂ ಕ್ಯಾಚ್ ಬಿಡುವುದನ್ನೇ ಕಾಯಕ ಮಾಡಿಕೊಂಡಿರುವ ಟೀಂ ಇಂಡಿಯಾ ಆಟಗಾರರು ಈ ವಿಭಾಗದ ಮೇಲೆ ಹೆಚ್ಚು ಗಮನ ಹರಿಸಿದರೆ ಒಳಿತು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Fri, 11 July 25
