Maharaja Trophy 2025: ತಹಾ ತೂಫಾನ್ ಶತಕ; ಹುಬ್ಬಳಿ ಟೈಗರ್ಸ್ಗೆ ಸತತ 2ನೇ ಜಯ
Maharaja Trophy 2025: ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಬೆಂಗಳೂರು 225 ರನ್ ಗಳಿಸಿದರೂ, ಮೊಹಮ್ಮದ್ ತಹಾ ಅವರ ಶತಕದ ನೆರವಿನಿಂದ ಹುಬ್ಬಳ್ಳಿ ತಂಡ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಇದು ಹುಬ್ಬಳ್ಳಿ ತಂಡದ ಸತತ ಎರಡನೇ ಗೆಲುವಾಗಿದೆ. ರಕ್ಷಿತ್ ಅವರ ಕೊನೆಯ ಎಸೆತದ ಬೌಂಡರಿ ಗೆಲುವಿಗೆ ಕಾರಣವಾಯಿತು.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯಲ್ಲಿ (Maharaj T20 Trophy) ಹುಬ್ಬಳ್ಳಿ ಟೈಗರ್ಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters) ಹಾಗೂ ಹುಬ್ಬಳ್ಳಿ ಟೈಗರ್ಸ್ (Hubli Tigers) ನಡುವೆ ನಡೆದ ಟೂರ್ನಿಯ ಐದನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡ ಆರಂಭಿಕ ಆಟಗಾರ ಮೊಹಮ್ಮದ್ ತಹಾ (Mohammed Taha) ಅವರ ಸತತ ಎರಡನೇ ಶತಕದ ಬಲದಿಂದ ಪಂದ್ಯವನ್ನು ಕೊನೆಯ ಎಸೆತದಲ್ಲಿ ಗೆದ್ದುಕೊಂಡಿತು. ಇದು ಟೂರ್ನಿಯಲ್ಲಿ ಹುಬ್ಬಳ್ಳಿ ತಂಡದ ಸತತ ಎರಡನೇ ಗೆಲುವಾದರೆ, ಬೆಂಗಳೂರು ತಂಡದ ಸತತ 2ನೇ ಸೋಲಾಗಿದೆ.
ಮಯಾಂಕ್ ಮಂಕು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕರಾದ ಚೇತನ್ ಹಾಗೂ ರೋಹನ್ ಮೊದಲ ವಿಕೆಟ್ಗೆ 36 ರನ್ ಸೇರಿಸಿದರು. ಈ ವೇಳೆ ದಾಳಿಗಿಳಿದ ರಿತೇಶ್ 23 ರನ್ ಬಾರಿಸಿದ್ದ ಚೇತನ್ರನ್ನು ಪೆವಿಲಿಯನ್ಗಟ್ಟಿದರು. ಆ ಬಳಿಕ ಬಂದ ನಾಯಕ ಮಯಾಂಕ್ ಅಗರ್ವಾಲ್ 9 ರನ್ಗಳಿಗೆ ಸುಸ್ತಾದರೆ, ಭುವನ್ ರಾಜ್ 15 ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು.
ರೋಹನ್ ಪಾಟೀಲ್ ಅರ್ಧಶತಕ
ಆದಾಗ್ಯೂ ಒಂದು ತುದಿಯಲ್ಲಿ ಹೊಡಿಬಡಿ ಆಟದ ಮೂಲಕ ಸ್ಕೋರ್ ಬೋರ್ಡ್ ವೇಗ ಹೆಚ್ಚಿಸಿದ ರೋಹನ್ ಅರ್ಧಶತಕ ಪೂರೈಸಿದರೆ, ಅವರಿಗೆ ಸಾಥ್ ನೀಡಿದ ಸೂರಜ್ 27 ರನ್ ಕಲೆಹಾಕಿದರು. ಕೆಳಕ್ರಮಾಂಕದ ಬ್ಯಾಟರ್ಗಳಾದ ರೋಹನ್ ನವೀನ್ 24 ರನ್ ಬಾರಿಸಿದರೆ, ಜ್ಞಾನೇಶ್ವರ ನವೀನ್ ಕೂಡ 27 ರನ್ಗಳ ಕಾಣಿಕೆ ನೀಡಿದರು. ಇತ್ತ ಶತಕದಂಚಿನಲ್ಲಿ ಎಡವಿದ ರೋಹನ್ ಪಾಟೀಲ್ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 80 ರನ್ ಬಾರಿಸಿದರು.
ಅಭಿನವ್- ತಹಾ ಜೊತೆಯಾಟ
ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡಕ್ಕೆ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಆರಂಭಿಕ ಪ್ರಖರ್ ಚತುರ್ವೇದಿ 18 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ನಾಯಕ ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಕೂಡ 4 ರನ್ಗಳಿಗೆ ಅಂತ್ಯವಾಯಿತು. 5ನೇ ಕ್ರಮಾಂಕದಲ್ಲಿ ಬಂದ ಅನುಭವಿ ಅಭಿನವ್, ಆರಂಭಿಕ ಮೊಹಮ್ಮದ್ ತಹಾ ಜೊತೆಗೂಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರ ನಡುವೆ ಅರ್ಧಶತಕದ ಜೊತೆಯಾಟವೂ ಮೂಡಿತು.
ತಹಾ ಗೆಲುವಿನ ಶತಕ
ಇದೇ ವೇಳೆ ತಹಾ ತಮ್ಮ ಅರ್ಧಶತಕವನ್ನು ಪೂರೈಸಿದರೆ, ಅಭಿನವ್ ಕೂಡ 33 ರನ್ಗಳ ಇನ್ನಿಂಗ್ಸ್ ಆಡಿ ಔಟಾದರು. ಸಮರ್ಥ್ ನಾಗರಾಜ್ ಇಂಜುರಿಯಿಂದಾಗಿ ರಿಟೈಡ್ ಹರ್ಟ್ ಆದರು. ಇತ್ತ ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ತಹಾ ಕೂಡ ಸ್ಫೋಟಕ ಶತಕ ಸಿಡಿಸಿದಲ್ಲದೆ ತಂಡವನ್ನು ಜಯದ ಸಮೀಪಕ್ಕೆ ತಂದರು. ಆದರೆ 17ನೇ ಓವರ್ನಲ್ಲಿ ತಹಾ ವಿಕೆಟ್ ಪತನವಾಯಿತು. ಅಂತಿಮವಾಗಿ ತಹಾ 54 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 101 ರನ್ಗಳ ಇನ್ನಿಂಗ್ಸ್ ಆಡಿದರು.
ಕೊನೆಯ ಓವರ್ ಥ್ರಿಲ್ಲರ್
ತಹಾ ವಿಕೆಟ್ ಬಳಿಕ ಬೆಂಗಳೂರು ತಂಡದ ಗೆಲುವು ಖಚಿತ ಎಂದು ತೋರುತ್ತಿತ್ತು. ಆದರೆ ಕೊನೆಯಲ್ಲಿ ಮನ್ವಂತ್ ಕುಮಾರ್ ಹಾಗೂ ರಕ್ಷಿತ್ ಹುಬ್ಬಳ್ಳಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಕೊನೆಯ ಓವರ್ನಲ್ಲಿ ಹುಬ್ಬಳ್ಳಿ ಗೆಲುವಿಗೆ 16 ರನ್ ಬೇಕಾಗಿದ್ದವು. ಅಂತೆಯೇ ಮೊದಲ 3 ಎಸೆತಗಳಲ್ಲಿ ತಂಡಕ್ಕೆ ಕೇವಲ 3 ರನ್ ಮಾತ್ರ ಬಂದವು. ಹೀಗಾಗಿ ಉಳಿದ ಮೂರು ಎಸೆತಗಳಲ್ಲಿ ಹುಬ್ಬಳ್ಳಿ ತಂಡಕ್ಕೆ 13 ರನ್ ಬೇಕಾಗಿದ್ದವು. ಸ್ಟ್ರೈಕ್ನಲ್ಲಿದ್ದ ರಕ್ಷಿತ್ 4 ಮತ್ತು 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಹಾಗೂ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡವನ್ನು ರೋಚಕ ಜಯದತ್ತ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Wed, 13 August 25
