ಬರೋಬ್ಬರಿ 9 ಭರ್ಜರಿ ಸಿಕ್ಸ್: ಅಭಿನವ್ ಅಬ್ಬರಕ್ಕೆ ತತ್ತರಿಸಿದ ಎದುರಾಳಿ ಪಡೆ
Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಭಿನವ್ ಮನೋಹರ್ ಸಿಡಿಲಬ್ಬರ ಮುಂದುವರೆದಿದೆ. ಈಗಾಗಲೇ ಆಡಿದ 8 ಪಂದ್ಯಗಳಲ್ಲಿ ಅಭಿನವ್ ಒಟ್ಟು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 25ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡವು ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸ್ಪೋಟಕ ದಾಂಡಿಗ ಅಭಿನವ್ ಮನೋಹರ್. ಈ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ಲಯನ್ಸ್ ತಂಡದ ನಾಯಕ ನಿಹಾಲ್ ಉಲ್ಲಾಳ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಲವ್ನೀತ್ ಸಿಸೋಡಿಯಾ (0) ವಿ ಕೌಶಿಕ್ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದಾಗ್ಯೂ ನಾಯಕ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 35 ಎಸೆತಗಳಲ್ಲಿ 50 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಆ ಬಳಿಕ ಬಂದ ಸ್ಮರಣ್ 30 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 63 ರನ್ ಸಿಡಿಸಿದರೆ, ವಿಜಯಕುಮಾರ್ ವೈಶಾಕ್ 21 ಎಸೆತಗಳಲ್ಲಿ 1 ಸಿಕ್ಸ್, 5 ಫೋರ್ಗಳೊಂದಿಗೆ 38 ರನ್ಗಳ ಕೊಡುಗೆ ನೀಡಿದರು. ಇನ್ನು ಪ್ರವೀಣ್ ದುಬೆ 12 ಎಸೆತಗಳಲ್ಲಿ 24 ರನ್ ಬಾರಿಸಿದರು. ಈ ಮೂಲಕ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು.
ಕಠಿಣ ಗುರಿ-ಭರ್ಜರಿ ಚೇಸಿಂಗ್:
207 ರನ್ಗಳ ಕಠಿಣ ಗುರಿ ಬೆನ್ನತ್ತಿದ ಶಿವಮೊಗ್ಗ ಲಯನ್ಸ್ ದೀರಜ್ ಮೋಹನ್ (18) ಹಾಗೂ ನಿಹಾಲ್ ಉಲ್ಲಾಳ್ (32) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭರತ್ ಕೇವಲ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದಿದ್ದ ಅಭಿನವ್ ಮನೋಹರ್ ಅಕ್ಷರಶಃ ಅಬ್ಬರಿಸಲಾರಂಭಿಸಿದರು. ಗುಲ್ಬರ್ಗ ಮಿಸ್ಟಿಕ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಅಭಿನವ್ ಸಿಕ್ಸ್ಗಳ ಸುರಿಮಳೆಗೈದರು.
ಮೈದಾನದ ಮೂಲೆ ಮೂಲೆಗೂ ಸಿಕ್ಸ್ಗಳನ್ನು ಸಿಡಿಸಿದ ಅಭಿನವ್ ಕೇವಲ 34 ಎಸೆತಗಳಲ್ಲಿ 2 ಫೋರ್ ಹಾಗೂ 9 ಸಿಕ್ಸರ್ಗಳೊಂದಿಗೆ ಅಜೇಯ 76 ರನ್ ಚಚ್ಚಿದರು. ಅಭಿನವ್ಗೆ ಉತ್ತಮ ಸಾಥ್ ನೀಡಿದ ರೋಹನ್ ನವೀನ್ 14 ಎಸೆತಗಳಲ್ಲಿ 3 ಸಿಕ್ಸ್ನೊಂದಿಗೆ 36 ರನ್ ಬಾರಿಸಿದರು.
ಅಭಿನವ್ ಮನೋಹರ್ ಹಾಗೂ ರೋಹನ್ ನವೀನ್ ಅವರ ಈ ಸ್ಪೋಟಕ ಇನಿಂಗ್ಸ್ಗಳ ನೆರವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡವು 19.1 ಓವರ್ಗಳಲ್ಲಿ 207 ರನ್ಗಳ ಗುರಿ ಮುಟ್ಟಿತು. ಈ ಮೂಲಕ ಶಿವಮೊಗ್ಗ ಲಯನ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಸಿಕ್ಸ್ ಹೊಡೆಯುವ ಮೂಲಕ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ಗೆ ಥ್ರಿಲಿಂಗ್ ಜಯ. 🤩🥳#MaharajaTrophyOnStar #StarSportsKannada @maharaja_t20 pic.twitter.com/DHlKV1Vl3z
— Star Sports Kannada (@StarSportsKan) August 27, 2024
ಗುಲ್ಬರ್ಗ ಮಿಸ್ಟಿಕ್ಸ್ ಪ್ಲೇಯಿಂಗ್ 11: ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್) , ದೇವದತ್ ಪಡಿಕ್ಕಲ್ (ನಾಯಕ) , ಸೌರಭ್ ಮುತ್ತೂರ್ , ಸ್ಮರಣ್ ಆರ್ , ಪ್ರವೀಣ್ ದುಬೆ , ರಿತೇಶ್ ಭಟ್ಕಳ್ , ಪೃಥ್ವಿರಾಜ್ ಶೇಖಾವತ್ , ವಿಜಯ್ ಕುಮಾರ್ ವೈಶಾಕ್ , ಅಭಿಷೇಕ್ ಪ್ರಭಾಕರ್ , ಆದಿತ್ಯ ನಾಯರ್ , ಪರಂತ್ ಯಶೋವರ್ಧನ್.
ಇದನ್ನೂ ಓದಿ: Dinesh Karthik: ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ RCB ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್
ಶಿವಮೊಗ್ಗ ಲಯನ್ಸ್ ಪ್ಲೇಯಿಂಗ್ 11: ನಿಹಾಲ್ ಉಳ್ಳಾಲ್ (ನಾಯಕ) , ಭರತ್ ಧುರಿ , ಅಭಿನವ್ ಮನೋಹರ್, ರೋಹನ್ ನವೀನ್, ಎಸ್ ಶಿವರಾಜ್ , ಹಾರ್ದಿಕ್ ರಾಜ್ , ಧೀರಜ್ ಮೋಹನ್ , ಅವಿನಾಶ್ ಡಿ , ವಾಸುಕಿ ಕೌಶಿಕ್ , ಎಚ್ ಎಸ್ ಶರತ್ , ಆನಂದ್ ದೊಡ್ಡಮನಿ