ಮಹಾರಾಜ ಟ್ರೋಫಿಯ 28ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶಿವಮೊಗ್ಗ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಬೆಂಗಳೂರು ತಂಡ ಟೇಬಲ್ ಟಾಪರ್ ಆಗಿ ಸೆಮಿಫೈನಲ್‌ಗೇರಿದೆ. ಇತ್ತ 227 ರನ್ಗಳ ಬೃಹತ್ ಟಾರ್ಗೆಟ್ ನೀಡಿದ ಹೊರತಾಗಿಯೂ ಸೋಲಿನೊಂದಿಗೆ ಟೂರ್ನಿಂದ ಹೊರಬಿದ್ದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 227 ರನ್ ಕಲೆಹಾಕಿತು. ಇತ್ತ ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡ ಶುಭಾಂಗ್ ಹಾಗೂ ಸೂರಜ್ ಅವರ ಅಜೇಯ 169 ರನ್ಗಳ ಜೊತೆಯಾಟದಿಂದಾಗಿ ಇನ್ನು 6 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡಕ್ಕೆ ಮತ್ತೆ ಆರಂಭಿಕರು ಕೈಕೊಟ್ಟರು. ಹೀಗಾಗಿ ತಂಡಕ್ಕೆ ಮೊದಲ ವಿಕೆಟ್ಗೆ 29 ರನ್ಗಳ ಜೊತೆಯಾಟ ಸಿಕ್ಕಿತು. ನಾಯಕ ನಿಹಾಲ್ 12 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮತ್ತೊಬ್ಬ ಆರಂಭಿಕ ಪ್ರಭಾಕರ್ 16 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. 4 ಮತ್ತು 5ನೇ ವಿಕೆಟ್ಗೆ ಜೊತೆಯಾದ ಮೋಹಿತ್ ಹಾಗೂ ಅಭಿನವ್ ಅರ್ಧಶತಕದ ಜೊತೆಯಾಟ ನಡೆಸಿದರು. ಈ ವೇಳೆ ಮೋಹಿತ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಬಾರಿಸಿ ಔಟಾದರು.
ಆ ಬಳಿಕ ಅಭಿನವ್ ಜೊತೆಯಾದ ರೋಹನ್ ಕೂಡ ಮೈದಾನದಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದರು. ಅಭಿನವ್ ಎಂದಿನಂತೆ ಇಡೀ ಟೂರ್ನಿಯಲ್ಲಿ ಯಾವ ರೀತಿ ಅಬ್ಬರಿಸಿದ್ದರೋ ಅದೇ ರೀತಿಯ ಪ್ರದರ್ಶನವನ್ನು ಈ ಪಂದ್ಯದಲ್ಲೂ ತೋರಿದರು. ತಮ್ಮ ಇನ್ನಿಂಗ್ಸ್ನಲ್ಲಿ ಭರ್ಜರಿ 7 ಸಿಕ್ಸರ್ಗಳನ್ನು ಸಿಡಿಸಿದ ಅಭಿನವ್ ಈ ಆವೃತ್ತಿಯಲ್ಲಿ ಸಿಕ್ಸರ್ಗಳ ಅರ್ಧಶತಕ ಪೂರೈಸಿದರು. ಹಾಗೆಯೇ ಒಟ್ಟಾರೆಯಾಗಿ ಈ ಆವೃತ್ತಿಯಲ್ಲಿ 500 ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎನಿಸಿಕೊಂಡರು.
ಹಾಗೆಯೇ ಈ ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 59 ರನ್ ಚಚ್ಚಿದ ಅಭಿನವ್ ಆರೆಂಜ್ ಕ್ಯಾಪನ್ನು ಮತ್ತೆ ತಮ್ಮದಾಗಿಸಿಕೊಂಡರು. ಅಭಿನವ್ಗೆ ಸಾಥ್ ನೀಡಿದ ರೋಹನ್ ಕೂಡ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 45 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಮೂವರ ಆಟದಿಂದಾಗಿ ತಂಡ 227 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಅಗ್ರಕ್ರಮಾಂಕ ಕೈಕೊಟ್ಟಿತು. ನಾಯಕ ಮಯಾಂಕ್ ಗಳಿಸಿದ 33 ರನ್ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಮೂಡಿಬರಲಿಲ್ಲ. ಹೀಗಾಗಿ ತಂಡದ ಸೋಲು ಖಚಿತವಾದಂತೆ ತೋರುತ್ತಿತ್ತು. ಆದರೆ ಐದು ಮತ್ತು ಆರನೇ ಕ್ರಮಾಂಕದಲ್ಲಿ ಜೊತೆಯಾದ ಶುಭಾಂಗ್ ಹಾಗೂ ಸೂರಜ್ ದಾಖಲೆಯ 169 ರನ್ಗಳ ಅಜೇಯ ಜೊತೆಯಾಟವನ್ನಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ವೇಳೆ ಶುಭಾಂಗ್ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 85 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಶುಭಾಂಗ್ಗೆ ಸಾಥ್ ನೀಡಿದ ಸೂರಜ್ ಕೂಡ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಬಾರಿಸಿ ತಂಡವನ್ನು ಗುರಿ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 pm, Wed, 28 August 24