Maharaja Trophy 2024: ಸ್ಮರಣ್ ಅರ್ಧಶತಕ; ಮೈಸೂರು ವಿರುದ್ಧ ಗೆದ್ದ ಗುಲ್ಬರ್ಗಾ

|

Updated on: Aug 24, 2024 | 6:38 PM

Maharaja Trophy 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ 19ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡವನ್ನು ಗುಲ್ಬರ್ಗಾ ಮಿಸ್ಟಿಕ್ಸ್ ತಂಡ 5 ವಿಕೆಟ್​ಗಳಿಂದ ಮಣಿಸಿದೆ.

Maharaja Trophy 2024: ಸ್ಮರಣ್ ಅರ್ಧಶತಕ; ಮೈಸೂರು ವಿರುದ್ಧ ಗೆದ್ದ ಗುಲ್ಬರ್ಗಾ
ಗುಲ್ಬರ್ಗಾ ಮಿಸ್ಟಿಕ್ಸ್
Follow us on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ 19ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡವನ್ನು ಗುಲ್ಬರ್ಗಾ ಮಿಸ್ಟಿಕ್ಸ್ ತಂಡ 5 ವಿಕೆಟ್​ಗಳಿಂದ ಮಣಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡ 5 ವಿಕೆಟ್​ ಕಳೆದುಕೊಂಡು ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಉಭಯ ತಂಡಗಳು ಇದುವರೆಗೆ ಟೂರ್ನಿಯಲ್ಲಿ ತಲಾ 7 ಪಂದ್ಯಗಳನ್ನು ಆಡಿದ್ದು, ಗುಲ್ಬರ್ಗಾ ತಂಡ 4 ಪಂದ್ಯದಲ್ಲಿ ಗೆಲುವು ಹಾಗೂ 2 ಪಂದ್ಯದಲ್ಲಿ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಮೈಸೂರು ತಂಡ 4 ಗೆಲುವು ಹಾಗೂ 3 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಾರಿದೆ.

ಮನೋಜ್- ಸುಚಿತ್ ಜೊತೆಯಾಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡಕ್ಕೆ ಮೊದಲ ವಿಕೆಟ್​ಗೆ 23 ರನ್​ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಜಾಸ್ಪರ್ ಎರ್ವಿನ್ರಾಜ್ ಜೋಯಲ್ 2ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಕರುಣ್ ನಾಯರ್ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಉತ್ತಮ ಆರಂಭದ ಹೊರತಾಗಿಯೂ ಸಮಿತ್ ದ್ರಾವಿಡ್ ಕೇವಲ 12 ರನ್​ಗಳಿಗೆ ವಿಕೆಟ್ ಒಪ್ಪಿಸಬೇಕಾಯಿತು. ಎಂದಿನಂತೆ ಕೊನೆಯಲ್ಲಿ ಮೈಸೂರು ತಂಡಕ್ಕೆ ನೆರವಾದ ಜಗದೀಶ್ ಸುಚಿತ್ ಹಾಗೂ ಮನೋಜ್ ಭಾಂಡಗೆ ತಂಡವನ್ನು 150 ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸುಚಿತ್ 22 ಎಸೆತಗಳಲ್ಲಿ 25 ರನ್ ಬಾರಿಸಿದರೆ, ಮನೋಜ್ 14 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 38 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು.

ಮತ್ತೊಂದು ಗೆಲುವಿನ ಇನ್ನಿಂಗ್ಸ್ ಆಡಿದ ಸ್ಮರಣ್

154 ರನ್​ಗಳ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭ ಒದಿಸಿಕೊಟ್ಟರು. ಲವ್ನಿತ್ 23 ರನ್ ಬಾರಿಸಿ ಔಟಾದರೆ, ನಾಯಕ ದೇವದತ್ ಪಡಿಕ್ಕಲ್ 24 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಮೊದಲ ವಿಕೆಟ್​ಗೆ ಈ ಇಬ್ಬರು 41 ರನ್​ಗಳ ಜೊತೆಯಾಟ ನೀಡಿದರು. ಎಂದಿನಂತೆ 4ನೇ ಕ್ರಮಾಂಕದಲ್ಲಿ ಬಂದ ಸ್ಮರಣ್ 36 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 52 ರನ್ ಬಾರಿಸಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಸ್ಮರಣ್​ಗೆ ಸಾಥ್ ನೀಡಿದ ರಿತೇಶ್ 22 ರನ್​ಗಳ ಕಾಣಿಕೆ ನೀಡಿದರು. ಇವರ ಜೊತೆಗೆ ಪ್ರವೀಣ್ 17 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Sat, 24 August 24