Maharaja Trophy 2024: ರಣರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಮಣಿಸಿ ಫೈನಲ್ಗೇರಿದ ಮೈಸೂರು
Maharaja Trophy 2024: ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹುಬ್ಬಳ್ಳಿ ತಂಡವನ್ನು 9 ರನ್ಗಳಿಂದ ಮಣಿಸಿದ ಮೈಸೂರು ತಂಡ ಟೂರ್ನಿಯಲ್ಲಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿದೆ.
ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹುಬ್ಬಳ್ಳಿ ತಂಡವನ್ನು 9 ರನ್ಗಳಿಂದ ಮಣಿಸಿದ ಮೈಸೂರು ತಂಡ ಟೂರ್ನಿಯಲ್ಲಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿದೆ. ಇದೀಗ ನಾಳೆ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ, ಬೆಂಗಳೂರು ತಂಡವನ್ನು ಎದುರಿಸಲಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡ 168 ರನ್ಗಳಿಸಲಷ್ಟೇ ಶಕ್ತವಾಯಿತು.
ಕೈಕೊಟ್ಟ ಕರುಣ್
ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಮನೀಶ್ ಪಾಂಡೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಆರಂಭಿಕರಿಬ್ಬರು ಮೊದಲ ವಿಕೆಟ್ಗೆ ಕೇವಲ 9 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಆರಂಭಿಕ ಸಿ. ಕಾರ್ತಿಕ್ 6 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆ ನಂತರ ಬಂದ ನಾಯಕ ಕರುಣ್ ನಾಯರ್ ಕೂಡ ಕೇವಲ 4 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇಡೀ ಟೂರ್ನಿಯಲ್ಲಿ ಅದ್ಭುತವಾಗಿ ಆಡಿದ್ದ ಕರುಣ್ ಅವರಿಂದ ಈ ನಿರ್ಣಾಯಕ ಪಂದ್ಯದಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿತ್ತು. ಆದರೆ ಕರುಣ್ ಒಂದಂಕಿಗೆ ಸುಸ್ತಾದರು.
ಕಾರ್ತಿಕ್ 53 ರನ್
ಕರುಣ್ ವಿಕೆಟ್ ಬಳಿಕ ಬಂದ ಶರತ್, ಆರಂಭಿಕ ಕಾರ್ತಿಕ್ ಅವರೊಂದಿಗೆ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರ ಜೊತೆಯಾಟದಿಂದಾಗಿ ತಂಡ 3ನೇ ವಿಕೆಟ್ ಪತನದ ವೇಳೆಗೆ 75 ರನ್ ಕಲೆಹಾಕಿತು. ಆದರೆ ಉತ್ತಮ ಆರಂಭವನ್ನು ಬಿಗ್ ಇನ್ನಿಂಗ್ಸ್ ಆಗಿ ಬದಲಿಸುವಲ್ಲಿ ವಿಫಲರಾದ ಶರತ್ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಕಾರ್ತಿಕ್ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 53 ರನ್ಗಳ ಇನ್ನಿಂಗ್ಸ್ ಆಡಿದರು.
ಕೆಳಕ್ರಮಾಂಕದಲ್ಲಿ ಸುಮಿತ್ ಅವರ ಇನ್ನಿಂಗ್ಸ್ ಕೂಡ 18 ರನ್ಗಳಿಗೆ ಕೊನೆಯಾಯಿತು. ಗೇಮ್ ಫಿನಿಶರ್ ಮನೋಜ್ ಭಾಂಡಗೆ 26 ರನ್ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹರ್ಶಿಲ್ 14 ರನ್, ಕೆ. ಗೌತಮ್ 10 ರನ್, ವಿದ್ಯಾಧರ್ 11 ರನ್ ಬಾರಿಸಿ ತಂಡವನ್ನು 177 ರನ್ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಮಧ್ಯಮ ಕ್ರಮಾಂಕ ವಿಫಲ
ಮೈಸೂರು ನೀಡಿದ 177 ರನ್ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡಕ್ಕೆ ಮೊದಲ ವಿಕೆಟ್ಗೆ 29 ರನ್ಗಳ ಜೊತೆಯಾಟ ಸಿಕ್ಕಿತು. ಆರಂಭಿ ಮೊಹಮ್ಮದ್ ತಾಹ ಅವರ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿದ್ದಿತು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ತಿಪ್ಪ ರೆಡ್ಡಿ ಅವರ ಇನ್ನಿಂಗ್ಸ್ ಕೂಡ 33 ರನ್ಗಳಿಗೆ ಅಂತ್ಯವಾಯಿತು. ಭರವಸೆಯ ಬ್ಯಾಟ್ಸ್‌ಮನ್ ಶ್ರೀಜಿತ್ ಕೂಡ 20 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಅನೀಶ್ವರ್ ಗೌತಮ್ 6 ರನ್ಗಳಿಗೆ ಸುಸ್ತಾದರೆ, ಜವಬ್ದಾರಿಯುತ ಬ್ಯಾಟಿಂಗ್ ಮಾಡಬೇಕಿದ್ದ ನಾಯಕ ಮನೀಶ್ ಪಾಂಡೆ ಕೂಡ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
ಕಾರ್ತಿಕೇಯ- ಮನ್ವಂತ್ ಹೋರಾಟ ವ್ಯರ್ಥ
ಕೊನೆಯಲ್ಲಿ ಕಾರ್ತಿಕೇಯ ಹಾಗೂ ಮನ್ವಂತ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯವನ್ನು ರೋಚಕಗೊಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ಕಾರ್ತಿಕೇಯ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 61 ರನ್ ಬಾರಿಸಿದರೆ, ಮನ್ವಂತ್ 20 ಎಸೆತಗಳಲ್ಲಿ 21 ರನ್ ಬಾರಿಸಿ ಅಜೇಯರಾಗಿ ಉಳಿದರು.
Published On - 10:55 pm, Sat, 31 August 24