VIDEO: ಕ್ಯಾಚ್ ಹಿಡಿಯಲು ಹೋಗಿ ಆಟಗಾರರಿಬ್ಬರ ಡಿಚ್ಚಿ: ವಿಡಿಯೋ ನೋಡಿ
T20 World Cup 2024: ಟಿ20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಸೌತ್ ಆಫ್ರಿಕಾ ತಂಡ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಕೊನೆಯ ಓವರ್‌ನಲ್ಲಿ ಜಯ ಸಾಧಿಸಿತು. ಈ ಮೂಲಕ 3 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.
T20 World Cup 2024: ಟಿ20 ವಿಶ್ವಕಪ್ನ 50ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸೌತ್ ಆಫ್ರಿಕಾ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದರು. ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಉತ್ತಮ ಸಾಥ್ ನೀಡಿದ ಸೌತ್ ಆಫ್ರಿಕಾ ಫೀಲ್ಡರ್ಗಳು ವಿಂಡೀಸ್ ತಂಡದ ರನ್ ಗತಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅದರಲ್ಲೂ ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ, ಕೈಲ್ ಮೇಯರ್ಸ್ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಸೌತ್ ಆಫ್ರಿಕಾ ಫೀಲ್ಡರ್ಗಳು ಪರಸ್ಪರ ಮುಖಾಮುಖಿಯಾಗಿ ಆತಂಕ ಮೂಡಿಸಿದ್ದರು. ಲಾಂಗ್ ಆನ್ ಬೌಂಡರಿನಲ್ಲಿದ್ದ ಕಗಿಸೊ ರಬಾಡ ಕ್ಯಾಚ್ ಹಿಡಿಯಲು ಓಡಿ ಬಂದರೆ, ಇತ್ತ ಲಾಂಗ್-ಆಫ್ ಕಡೆಯಿಂದ ಮಾರ್ಕೊ ಯಾನ್ಸೆನ್ ಆಗಮಿಸಿದ್ದರು.
ಪರಿಣಾಮ ಕ್ಯಾಚ್ ಹಿಡಿಯುವ ಯತ್ನದಲ್ಲಿ ರಬಾಡ-ಯಾನ್ಸೆನ್ ಪರಸ್ಪರ ಡಿಚ್ಚಿ ಹೊಡೆದರು. ಅತ್ತ ಡಿಚ್ಚಿಯ ರಭಸಕ್ಕೆ ಮಾರ್ಕೊ ಯಾನ್ಸೆನ್ ಜೋರಾಗಿ ಬಿದ್ದರು. ಇತ್ತ ರಬಾಡ ಕೂಡ ನೋವಿನಿಂದ ಕುಸಿದು ಬಿದ್ದರು. ಹೀಗಾಗಿ ಕೆಲ ಕ್ಷಣಗಳ ಕಾಲ ಪಂದ್ಯ ಸ್ಥಗಿತವಾಗಿತ್ತು.
ಕೆಲ ಹೊತ್ತಿನ ಬಳಿಕ ಇಬ್ಬರು ಆಟಗಾರರು ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡರು. ಅಲ್ಲದೆ ಅಂತಿಮ ಓವರ್ಗಳ ವೇಳೆ ಸೌತ್ ಆಫ್ರಿಕಾ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಇದೀಗ ಮಾರ್ಕೊ ಯಾನ್ಸೆನ್ ಮತ್ತು ಕಗಿಸೊ ರಬಾಡ ನಡುವಣ ಡಿಚ್ಚಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಬಾಡ-ಯಾನ್ಸೆನ್ ಡಿಚ್ಚಿ ವಿಡಿಯೋ:
— The Game Changer (@TheGame_26) June 24, 2024
ಸೆಮಿಫೈನಲ್ಗೆ ಸೌತ್ ಆಫ್ರಿಕಾ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿತು. ಆದರೆ ದ್ವಿತೀಯ ಇನಿಂಗ್ಸ್ ವೇಳೆ ಮಳೆ ಬಂದಿದ್ದರಿಂದ ಓವರ್ಗಳ ಕಡಿತ ಮಾಡಲಾಯಿತು.
ಇದನ್ನೂ ಓದಿ: T20 World Cups 2024: ಇಂಗ್ಲೆಂಡ್ ತಂಡಕ್ಕೆ ವಿಶ್ವ ದಾಖಲೆಯ ವಿಜಯ
ಅದರಂತೆ ಸೌತ್ ಆಫ್ರಿಕಾ ತಂಡಕ್ಕೆ 17 ಓವರ್ಗಳಲ್ಲಿ 123 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು 16.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಸೌತ್ ಆಫ್ರಿಕಾ ತಂಡ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಐಡೆನ್ ಮಾರ್ಕ್ರಾಮ್ ಪಡೆ ಸೆಮಿಫೈನಲ್ಗೆ ಪ್ರವೇಶಿಸಿದೆ.