10 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಮಾರ್ನಸ್ ಲಾಬುಶೇನ್
Marnus Labuschagne: ಆಸ್ಟ್ರೇಲಿಯಾದ ಟೆಸ್ಟ್ ಸ್ಪಷಲಿಸ್ಟ್ ಮಾರ್ನಸ್ ಲಾಬುಶೇನ್ ಟಿ20 ಟೂರ್ನಿಯಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅದು ಕೂಡ ಕೇವಲ 10 ಎಸೆತಗಳ ಮೂಲಕ ಎಂಬುದು ವಿಶೇಷ. ಅಂದರೆ 2.3 ಓವರ್ಗಳನ್ನು ಎಸೆದಿದ್ದ ಲಾಬುಶೇನ್ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನು ಕಬಳಿಸುವ ಮೂಲಕ ಸೋಮರ್‌ಸೆಟ್ ತಂಡವನ್ನು 13.3 ಓವರ್ಗಳಲ್ಲಿ 123 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ಆಟಗಾರ ಮಾರ್ನಸ್ ಲಾಬುಶೇನ್ ಹೊಸ ದಾಖಲೆ ಬರೆದಿದ್ದಾರೆ. ಕಾರ್ಡಿಫ್ನ ಸೋಷಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗ್ಲಾಮೊರ್ಗಾನ್ ಮತ್ತು ಸೋಮರ್‌ಸೆಟ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಗ್ಲಾಮೊರ್ಗಾನ್ ತಂಡವು ನಾಯಕ ಕೀರನ್ ಕಾರ್ಲ್ಸನ್ (135) ಅವರ ಸ್ಪೋಟಕ ಶತಕದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೋಮರ್‌ಸೆಟ್ ತಂಡವು 9 ಓವರ್ಗಳಲ್ಲಿ 92 ರನ್ ಬಾರಿಸಿದ್ದರು. ಆದರೆ 10ನೇ ಓವರ್ನಲ್ಲಿ ದಾಳಿಗಿಳಿದ ಮಾರ್ನಸ್ ಲಾಬುಶೇನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ಪಾರ್ಟ್ ಟೈಮ್ ಸ್ಪಿನ್ನರ್ ಆಗಿ ಕಾಣಿಸಿಕೊಂಡ ಮಾರ್ನಸ್ 10ನೇ ಓವರ್ನ ಮೊದಲ 5 ಎಸೆತಗಳಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಜಾರ್ಜಿ (7) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 11ನೇ ಓವರ್ನಲ್ಲಿ ಹಿಂತಿರುಗಿದ ಮಾರ್ನಸ್ ಮೊದಲ ಎಸೆತದಲ್ಲಿ ಬೆನ್ ಗ್ರೀನ್ ಅವರ ವಿಕೆಟ್ ಪಡೆದರು. ಹಾಗೆಯೇ 4ನೇ ಎಸೆತದಲ್ಲಿ ರಿಲೇ ಮೆರಿಡಿತ್ ವಿಕೆಟ್ ಕಬಳಿಸಿದರು. 6ನೇ ಎಸೆತದಲ್ಲಿ ಜ್ಯಾಕ್ ಲೀಚ್ ಬೌಲ್ಡ್ ಆದರು. 13ನೇ ಓವರ್ನ ಮೂರನೇ ಎಸೆತದ ಮೂಲಕ ಜಾಕ್ ಬಾಲ್ (8) ರನ್ನು ಬೌಲ್ಡ್ ಮಾಡಿದರು. ಈ ಮೂಲಕ ಕೇವಲ 2.3 ಓವರ್ಗಳಲ್ಲಿ ಕೇವಲ 11 ರನ್ ನೀಡಿ ಮಾರ್ನಸ್ ಲಾಬುಶೇನ್ 5 ವಿಕೆಟ್ಗಳ ಸಾಧನೆ ಮಾಡಿದರು. ಇದರೊಂದಿಗೆ ಗ್ಲಾಮೊರ್ಗಾನ್ ಪರ ಅತೀ ಕಡಿಮೆ ರನ್ ನೀಡಿ 5 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಕೂಡ ಮಾರ್ನಸ್ ಪಾಲಾಯಿತು.