
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಇನ್ನುಳಿದಿರುವುದು ದಿನಗಳು ಮಾತ್ರ. ಆದರೆ ಅದಕ್ಕೂ ಮುನ್ನ ನ್ಯೂಝಿಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಮ್ಯಾಟ್ ಹೆನ್ರಿ ಗಾಯಗೊಂಡಿದ್ದಾರೆ. ಲಾಹೋರ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಹೆನ್ರಿ ಅವರ ಭುಜಕ್ಕೆ ಗಾಯವಾಗಿದೆ.
ಈ ಗಾಯದ ನೋವಿನ ಕಾರಣ ಮ್ಯಾಟ್ ಹೆನ್ರಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಓವರ್ ಎಸೆದಿರಲಿಲ್ಲ. ಸದ್ಯ ಮ್ಯಾಟ್ ಹೆನ್ರಿ ವೈದ್ಯರ ನಿಗಾದಲ್ಲಿದ್ದು, ಗಾಯದ ಕುರಿತಾದ ನಿಖರ ಮಾಹಿತಿ ತಿಳಿಯಲು ಒಂದೆರಡು ದಿನಗಳು ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.
ಅಂದರೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ಕಣಕ್ಕಿಳಿಯಲಿದ್ದಾರೆ. ಇಲ್ಲದಿದ್ದರೆ ಅವರು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಿಂದ ಹೊರಗುಳಿಯುವುದು ಖಚಿತ.
ಮ್ಯಾಟ್ ಹೆನ್ರಿ ಫೈನಲ್ ಪಂದ್ಯದಿಂದ ಹೊರಗುಳಿದರೆ ನ್ಯೂಝಿಲೆಂಡ್ ತಂಡದ ಪಾಲಿಗೆ ಹಿನ್ನಡೆಯಾಗುವುದು ಖಚಿತ. ಏಕೆಂದರೆ ಹೆನ್ರಿ ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಈವರೆಗೆ 11 ಪಂದ್ಯಗಳನ್ನಾಡಿರುವ ಹೆನ್ರಿ ಒಟ್ಟು 21 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅದು ಸಹ 4.48 ರ ಎಕಾನಮಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಲ್ಲದೆ ದುಬೈನಲ್ಲಿ ನಡೆದ ಭಾರತದ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ 8 ಓವರ್ಗಳಲ್ಲಿ 42 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಹಾಗೆಯೇ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲೂ ಹೆನ್ರಿ ಅಗ್ರಸ್ಥಾನದಲ್ಲಿದ್ದಾರೆ. ಹೀಗಾಗಿ ಮ್ಯಾಟ್ ಹೆನ್ರಿಯ ಅಲಭ್ಯತೆಯು ಟೀಮ್ ಇಂಡಿಯಾದ ಚಿಂತೆಯನ್ನು ದೂರ ಮಾಡಿದರೆ, ನ್ಯೂಝಿಲೆಂಡ್ ತಂಡದ ಟೆನ್ಶನ್ ಹೆಚ್ಚಿಸಲಿದೆ.
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ 2000 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿದ್ದವು.
ಇದನ್ನೂ ಓದಿ: ಶರವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ಮಿಲ್ಲರ್
ಆದರೆ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 4 ವಿಕೆಟ್ಗಳಿಂದ ಸೋಲಿಸಿ ಕಿವೀಸ್ ಪಡೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು. ಇದೀಗ 25 ವರ್ಷಗಳ ಬಳಿಕ ಉಭಯ ತಂಡಗಳು ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವಾಡಲು ಸಜ್ಜಾಗಿ ನಿಂತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ನ್ಯೂಝಿಲೆಂಡ್ ತಂಡದ ಪ್ರಮುಖ ವೇಗಿ ಮ್ಯಾಟ್ ಹೆನ್ರಿ ಗಾಯಗೊಂಡಿರುವುದು ಇದೀಗ ಕಿವೀಸ್ ಬಳಗದ ಚಿಂತೆಯನ್ನು ಹೆಚ್ಚಿಸಿದೆ.