Pakistan vs Australia: ಪಂದ್ಯದ ಗತಿಯನ್ನೇ ಬದಲಾಯಿಸಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್: ಆಸೀಸ್ ಫೈನಲ್​ಗೆ, ಪಾಕ್ ಮನೆಗೆ

Australia enter T20 World Cup final: ಇದೀಗ ಫೈನಲ್ ತಲುಪಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನ. 14ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

Pakistan vs Australia: ಪಂದ್ಯದ ಗತಿಯನ್ನೇ ಬದಲಾಯಿಸಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್: ಆಸೀಸ್ ಫೈನಲ್​ಗೆ, ಪಾಕ್ ಮನೆಗೆ
Pakistan vs Australia
Follow us
TV9 Web
| Updated By: Vinay Bhat

Updated on:Nov 12, 2021 | 9:03 AM

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಸಿಸಿ ಟಿ20 ವಿಶ್ವಕಪ್​ನ (ICC T20 World Cup) ಎರಡನೇ ಸೆಮಿ ಫೈನಲ್ (Semi Final 2) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿರುವ ಆಸ್ಟ್ರೇಲಿಯಾ (Pakistan vs Australia) ತಂಡ ಫೈನಲ್​​ ಹಂತಕ್ಕೆ ತಲುಪಿದೆ. ಮ್ಯಾಥ್ಯೂ ವೇಡ್ (Matthew Wade) ಅವರ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಪಾಕ್ ಆಟಗಾರರ ಕಳಪೆ ಫೀಲ್ಡಿಂಗ್​ನಿಂದ ಗೆಲುವು ಕಂಡಿರುವ ಆಸ್ಟ್ರೇಲಿಯಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಸನಿಹಕ್ಕೇರಿದೆ. ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಸತತ ಗೆಲುವಿನಿಂದ ಗೆದ್ದು ಬೀಗಿ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬಾಬರ್ ಅಜಾಮ್ (Babar Azam) ಪಡೆಯ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

ಪಾಕಿಸ್ತಾನದ ಬೆಸ್ಟ್ ಬೌಲರ್ ಶಾಹೀನ್ ಅಫ್ರಿದಿ ಅವರ ಓವರ್​ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾವನ್ನು ಗೆಲುವಿನ ದಡ ತಲುಪಿಸಿದರು. ಪಾಕಿಸ್ತಾನ ಭರ್ಜರಿಯಾಗಿ ಕೊಟ್ಟ 177 ರನ್ ಗುರಿಯನ್ನು ಆಸ್ಟ್ರೇಲಿಯಾ ಒಂದು ಓವರ್ ಇರುವಂತೆ ಚೇಸ್ ಮಾಡಿದ್ದು ರಣರೋಚಕವಾಗಿತ್ತು.

ಟಾಸ್ ಸೋತ ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿತ್ತು. ಈ ಪಂದ್ಯದಲ್ಲಿಯೂ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ನಾಯಕ ಬಾಬರ್ ಅಜಾಮ್ ಹಾಗೂ ಮೊಹಮ್ಮದ್ ರಿಜ್ವಾನ್ ಜೋಡಿ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನು ನೀಡಿದರು. ಜವಾಬ್ಧಾರಿಯುತ ಪ್ರದರ್ಶನ ನೀಡಿದ ಈ ಜೋಡಿಯನ್ನು ಆಡಂ ಜಂಪಾ ಬೇರ್ಪಡಿಸಿದರು. 34 ಎಸೆತಗಳಲ್ಲಿ 39 ರನ್‌ಗಳಿಸಿದ್ದ ಬಾಬರ್ ಅಜಂ ಜಂಪಾಗೆ ಔಟಾಗಿ ಫೆವಿಲಿಯನ್ ಸೇರಿಕೊಂಡರು.

ಹಿಂದಿನ ಐದು ಪಂದ್ಯಗಳಲ್ಲೂ ಹೆಚ್ಚು ರನ್ ಗಳಿಸಲು ವಿಫಲರಾಗಿದ್ದ ಫಕರ್ ಜಮಾನ್ ಅವರು ಸೆಮಿಫೈನಲ್​ನಂಥ ದೊಡ್ಡ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದರು. ಮೊಹಮ್ಮದ್ ರಿಜ್ವಾನ್ 52 ಬಾಲ್​ನಲ್ಲಿ 67 ರನ್ ಗಳಿಸಿದರು. ಜಮಾನ್ ಕೇವಲ 32 ಬಾಲ್​ನಲ್ಲಿ 55 ರನ್ ಚಚ್ಚಿದರು. ಕೊನೆಕೊನೆಯಲ್ಲಿ ಜಮಾನ್ ಅವರಿಂದ ಸಿಕ್ಸರ್​ಗಳ ಸುರಿಮಳೆ ಆಯಿತು.

ಪರಿಣಾಮ ಪಾಕಿಸ್ತಾನ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತು. ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ಮೊದಲ ಓವನಲ್ಲಿಯೇ ಆಘಾತ ನೀಡಿದರು. ನಾಯಕ ಆರೋನ್ ಫಿಂಚ್ ಗೋಲ್ಡನ್ ಡಕ್ ವಿಕೆಟ್ ನೀಡಿದರು. ನಂತರ ಮಿಷೆಲ್ ಮಾರ್ಶ್ ಹಾಗೂ ವಾರ್ನರ್ ಎಚ್ಚರಿಕೆಯ ಆಟವಾಡಿದರು. ಅರ್ಧ ಶತಕದ ಜೊತೆಯಾಟವಾಡಿದ ಈ ಜೋಡಿ ನಂತರ ಬೇರ್ಪಟ್ಟಿತು. ಸ್ಟೀವ್ ಸ್ಮಿತ್ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ವಾರ್ನರ್ ಕೂಡ 30 ಬಾಲ್​ನಲ್ಲಿ 49 ರನ್ ಗಳಿಸಿ ಅರ್ಧ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್​ವೆಲ್ ಆಟ 5 ರನ್​ಗೆ ಅಂತ್ಯವಾಯಿತು.

ಈ ಸಂದರ್ಭ ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕಿತು. ಗೆಲುವು ಪಾಕ್ ಕಡೆ ವಾಲಿತು. ಆದರೆ ಆಸ್ಟ್ರೇಲಿಯಾ ತನ್ನ ಹೋರಾಟವನ್ನು ಕೈಬಿಟ್ಟಿರಲಿಲ್ಲ. ಆಲ್‌ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಹಾಗೂ ಮ್ಯಾಥ್ಯೂ ವೇಡ್ ಪಾಕಿಸ್ತಾನ ಬೌಲರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಾ ಸಾಗಿದರು. ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಆಡಿದ ಈ ಜೋಡಿ ಪಂದ್ಯವನ್ನೇ ಫಿನಿಶ್ ಮಾಡುತ್ತಾರೆಂದು ಯಾರೂ ಊಹಿಸಿರಲಿಲ್ಲ.

15 ಓವರ್​ವರೆಗೂ ಪಾಕಿಸ್ತಾನಕ್ಕೆ ಗೆಲುವಿನ ನಿರೀಕ್ಷೆ ದಟ್ಟವಾಗಿತ್ತು. ಆದರೆ, ಸ್ಟಾಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಅಪ್ರತಿಮವಾಗಿ ಚೇಸಿಂಗ್ ನಡೆಸಿದರು. ಬಹಳ ದಿನಗಳ ನಂತರ ತಂಡಕ್ಕೆ ಕಂಬ್ಯಾಕ್ ಮಾಡಿದ ವೇಡ್ ಕೊನೆಕೊನೆಯಲ್ಲಿ ಸಿಕ್ಸರ್ ಮಳೆ ಸುರಿಸಿ ಗೆಲುವಿಗೆ ಪ್ರಮುಖ ಕಾರಣರಾದರು. ಹಸನ್ ಅಲಿ ಎಸೆದ 18ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಈ ಜೋಡಿ 15 ರನ್‌ಗಳನ್ನು ಕಸಿದುಕೊಂಡಿತ್ತು. ಹೀಗಾಗಿ ಅಂತಿಮ ಎರಡು ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು.

ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದ ಶಾಹೀನ್ ಶಾ ಪ್ರಮುಖ ಸೆಮೀಸ್ ಪಂದ್ಯದಲ್ಲೇ ವಿಲನ್ ಆಗಿಬಿಟ್ಟಟರು. ಇವರ ಕೊನೇಯ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದ ಮ್ಯಾಥ್ಯೂ ವೇಡ್ ಪಂದ್ಯದ ಗತಿಯನ್ನೇ ಬದಲಾಯಿಸಿ ತಂಡಕ್ಕೆ ರೋಚಕಯ ಜಯ ತಂದಿಟ್ಟರು. ಸ್ಟಾಯ್ನಿಸ್ 31 ಎಸೆತದಲ್ಲಿ ಅಜೇಯ 40 ರನ್ ಗಳಿಸಿದರೆ ವೇಡ್ ಕೇವಲ 17 ಬಾಲ್​ನಲ್ಲಿ ಅಜೇಯ 41 ರನ್ ಗಳಿಸಿದರು.

ಇದೀಗ ಫೈನಲ್ ತಲುಪಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನ. 14ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಹರ್ಭಜನ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಟಿ20 ಪ್ಲೇಯಿಂಗ್ 11: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

(Matthew Wade and Marcus Stoinis stood unbeaten in a six-hitting feast to lead Australia into the T20 World Cup final)

Published On - 7:37 am, Fri, 12 November 21