Babar Azam: ಸೋಲಿನ ಬೆನ್ನಲ್ಲೇ ತನ್ನದೇ ತಂಡದ ಪ್ಲೇಯರ್ ಅನ್ನು ದೂರಿದ ಪಾಕಿಸ್ತಾನ ನಾಯಕ ಬಾಬರ್ ಅಜಾಮ್
Babar Azam post-match presentation PAK vs AUS: ಟಿ20 ವಿಶ್ವಕಪ್ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋಲಲು ಏನು ಕಾರಣ ಎಂಬ ಬಗ್ಗೆ ತಂಡದ ನಾಯಕ ಬಾಬರ್ ಅಜಾಮ್ ಮಾತನಾಡಿದ್ದು, ಎಲ್ಲಿ ಹಳಿ ತಪ್ಪಿದೆವು ಎಂದು ಹೇಳಿದ್ದಾರೆ.
ಆರನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ನಲ್ಲಿ (ICC T20 World Cup) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಮುಂಚೂಣಿಯಲ್ಲಿದ್ದ ಪಾಕಿಸ್ತಾನ ತಂಡ ಎರಡನೇ ಸೆಮಿ ಫೈನಲ್ನಲ್ಲಿ ಆಸ್ಟ್ರೇಲಿಯಾ (Pakistan vs Australia) ವಿರುದ್ಧ ಸೋತು ಟೂರ್ನಿಯಂದ ಹೊರಬಿದ್ದಿದೆ. ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕ ಬ್ಯಾಟರ್‌ಗಳಾದ ಮಾರ್ಕಸ್ ಸ್ಟಾಯ್ನಿಸ್ (Marcus Stoinis) ಹಾಗೂ ಮ್ಯಾಥ್ಯೂ ವೇಡ್ (Matthew Wade) ಜೋಡಿದ ಅಬ್ಬರದ ಬ್ಯಾಟಿಂಗ್ ಪಾಕ್ ಫೈನಲ್ಗೇರುವ ಕನಸು ನುಚ್ಚುನೂರು ಮಾಡಿತು. ದುಬೈನಲ್ಲಿ ಹಸಿರು ಅಲೆಯ ನಡುವೆ ಕಾಂಗರೂಗಳ ತಂಡ ಅಮೋಘ ಪ್ರದರ್ಶನ ನೀಡಿ ಪಾಕಿಸ್ತಾನವನ್ನು ಮನೆಗೆ ದಬ್ಬಿತು. ಒಂದು ಹಂತದ ವರೆಗೆ ಗೆಲುವು ಪಾಕ್ ಕಡೆಗೇ ಇತ್ತು. ಆದರೆ, ಅಂತಿಮ ಹಂತದಲ್ಲಿ ಮಾಡಿದ ತಪ್ಪು ಸೋಲಿಗೆ ಮುಖ್ಯ ಕಾರಣವಾಯಿತು. ಈ ಬಗ್ಗೆ ತಂಡದ ನಾಯಕ ಬಾಬರ್ ಅಜಾಮ್ (Babar Azam) ಮಾತನಾಡಿದ್ದು, ಎಲ್ಲಿ ಹಳಿ ತಪ್ಪಿದೆವು ಎಂದು ಹೇಳಿದ್ದಾರೆ.
“ನಾವು ಮೊದಲ ಇನ್ನಿಂಗ್ಸ್ನಲ್ಲಿ ಯೋಜನೆ ಮಾಡಿದ್ದ ರೀತಿಯಲ್ಲೇ ಸಾಗಿದೆವು. ಅಂದುಕೊಂಡಂತೆ ಎದುರಾಳಿಗೆ ಸವಾಲಿನ ಮೊತ್ತದ ಟಾರ್ಗೆಟ್ ಅನ್ನೇ ನೀಡಿದೆವು. ಆದರೆ, ಬ್ಯಾಕ್ ಎಂಡ್ನಲ್ಲಿ ನಾವು ಇಂಥಹ ತಂಡಕ್ಕೆ ಅವಕಾಶ ಮಾಡಿದಂತಾಯಿತು. ಇದಕ್ಕೆ ಬೆಲೆತೆರಬೇಕಾಗಿ ಬಂತು. ಈ ಪಂದ್ಯದ ಟರ್ನಿಂಗ್ ಪಾಯಿಂಟ್ ಹಸನ್ ಅಲಿ ಬಿಟ್ಟ ಆ ಒಂದು ಕ್ಯಾಚ್. ಈ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು” ಎಂದು ಹೇಳಿದ್ದಾರೆ.
“ಇಡೀ ಟೂರ್ನಿಯಲ್ಲಿ ನಾವು ಆಡಿದ ರೀತಿ ಮತ್ತು ನನ್ನ ನಾಯಕತ್ವದ ಬಗ್ಗೆ ನನಗೆ ತೃಪ್ತಿ ಇದೆ. ಇಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿ ಮುಂದಿನ ಸೀಸನ್ನಲ್ಲಿ ಇನ್ನಷ್ಟು ಉತ್ತಮವಾಗಿ ಕಮ್‌ಬ್ಯಾಕ್ ಮಾಡುತ್ತೇವೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ಕೊನೇಯ ಹಂತದಲ್ಲಿ ಮಾಡಿದ ಸಣ್ಣ ತಪ್ಪುಕೂಡ ದೊಡ್ಡದಾಗಿ ಬಿಡುತ್ತವೆ. ನಾವು ಆಟಗಾರರಿಗೆ ಒಂದೊಂದು ಪಾತ್ರ ನೀಡಿದ್ದೆವು, ಅದನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಅಭಿಮಾನಿಗಳು ನಮಗೆ ದೊಡ್ಡ ಸಪೋರ್ಟ್ ನೀಡಿದರು. ಇಲ್ಲಿ ಆಟವಾಡಲು ನಮಗೆ ತುಂಬಾನೆ ಖುಷಿ” ಎಂದು ಬಾಬರ್ ಹೇಳಿದರು.
ಇನ್ನು ಸೋಲಿನ ಸುಳಿಯಲ್ಲಿದ್ದ ಪಂದ್ಯವನ್ನು ಆಸೀಸ್ ಗೆಲುವಿನ ಕಡೆ ವಾಲಿಸಿದ ಮ್ಯಾಥ್ಯೂ ವೇಡ್ ಮಾತನಾಡಿ, “ಪಂದ್ಯ ಗೆಲ್ಲುತ್ತೇವೆ ಎಂಬ ವಿಶ್ವಾಸ ನನ್ನಲ್ಲಿ ಇರಲಿಲ್ಲ. ಆದರೆ, ಮಾರ್ಕಸ್ ಬಹಳಾ ವಿಶ್ವಾಸದಿಂದ ಇದ್ದರು. ನನಗೂ ಧೈರ್ಯ ತುಂಬಿದರು. ಬಳಿಕ ಒಂದು ಕಡೆಯ ಬೌಂಡರಿ ಚಿಕ್ಕದಾಗಿದೆ ಆ ಕಡೆಗೆ ಗುರಿ ಮಾಡಿ ಗೆಲ್ಲುವ ಪ್ರಯತ್ನ ಮಾಡಬಹುದು ಅಂದುಕೊಂಡೆ. ಅದೃಷ್ಟವಶಾತ್ ಹೊಡೆದ ಎಲ್ಲಾ ಎಸೆತಗಳಲ್ಲಿ ಬೌಂಡರಿ ಸಿಕ್ಕಿತು. 2-3 ವರ್ಷ ತಂಡದಿಂದ ಹೊರಗಿಳಿದು, 20 ಪಂದ್ಯಗಳ ಹಿಂದಷ್ಟೇ ಕಮ್‌ಬ್ಯಾಕ್ ಮಾಡಿದ್ದೆ. ಈಗ ತಂಡದ ಜಯಕ್ಕೆ ಕೊಡುಗೆ ಸಲ್ಲಿಸಿರುವುದು ತೃಪ್ತಿ ನೀಡಿದೆ” ಎಂದು ವೇಡ್ ಪಂದ್ಯದ ಬಳಿಕ ಹೇಳಿಕೊಂಡರು.
(Pakistan captain Babar Azam said that Hasan Ali dropped catch was the turning point in the game)