Mayank Agarwal: ಮೊದಲ ದಿನದಾಟದ ಬಳಿಕ ತನ್ನ ಶತಕದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ಮಯಾಂಕ್ ಅಗರ್ವಾಲ್

| Updated By: Vinay Bhat

Updated on: Dec 04, 2021 | 8:26 AM

India vs New Zealand Test: ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಿದ ಮಯಾಂಕ್ ಅಗರ್ವಾಲ್, ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ಶತಕಕ್ಕೆ ನೆರವಾದವರ ಬಗ್ಗೆ ಹೇಳಿಕೊಂಡಿದ್ದಾರೆ.

Mayank Agarwal: ಮೊದಲ ದಿನದಾಟದ ಬಳಿಕ ತನ್ನ ಶತಕದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ಮಯಾಂಕ್ ಅಗರ್ವಾಲ್
Mayank Agarwal India vs New Zealand
Follow us on

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಟೀಕೆಗಳಿಗೆ ಗುರಿಯಾಗಿದ್ದ ಮಯಾಂಕ್ ಅಗರ್ವಾಲ್ (Mayank Agarwal) ಇದೀಗ ಟೀಕಾಕಾರರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟಿದ್ದಾರೆ. ಎರಡನೇ ಟೆಸ್ಟ್​ನಿಂದ (2nd Test) ಇವರನ್ನು ಕೈಬಿಡುವ ಸಂಭವವಿದ್ದರೂ ಕೊನೇ ಕ್ಷಣದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಜಿಕೊಂಡಿದ್ದಾರೆ. ಅನುಭವಿ ಹಾಗೂ ಸ್ಟಾರ್ ಆಟಗಾರರ ವೈಫಲ್ಯದ ನಡುವೆಯೂ ಏಕಾಂಗಿ ನಿರ್ವಹಣೆ ತೋರಿದ ಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್ವಾಲ್ ಮನಮೋಹಕ ಶತಕದ ನೆರವಿನಿಂದ ವಾಂಖೆಡೆಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ (India vs New Zealand) ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ (Team India) ಆಸರೆಯಾಗಿದ್ದಾರೆ. ಮೊದಲ ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ವಾಲ್ ತಮ್ಮ ಶತಕಕ್ಕೆ ನೆರವಾದವರ ಬಗ್ಗೆ ಹೇಳಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸತತ ವೈಫಲ್ಯ ಅನುಭವಿಸುತ್ತಿದ್ದ ಮಯಾಂಕ್‌ ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ವೃತ್ತಿ ಜೀವನದ ನಾಲ್ಕನೇ ಶತಕ ಸಿಡಿಸುವ ಮೂಲಕ ಭರ್ಜರಿ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಿದರು. ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೆಲ ಅಮೂಲ್ಯ ಸಲಹೆಗಳನ್ನು ನಿಡಿದ್ದರಂತೆ. ಈ ಸಲಹೆಗಳ ಕಾರಣದಿಂದಾಗಿಯೇ ತಾನು ಶತಕ ಸಿಡಿಸಲು ಸಾಧ್ಯವಾಯಿತು ಎಂದು ಸ್ವತಃ ಮಯಾಂಕ್ ಅಗರ್ವಾಲ್ ಹೇಳಿಕೊಂಡಿದ್ದಾರೆ.

“ಸುನಿಲ್ ಗವಾಸ್ಕರ್ ನನ್ನ ಬಳಿ ಇನ್ನಿಂಗ್ಸ್‌ನ ಆರಂಭದಲ್ಲಿ ಬ್ಯಾಟ್‌ ಅನ್ನು ಸ್ವಲ್ಪ ಕೆಳಕ್ಕೆ ಹಿಡಿದುಕೊಳ್ಳುವಂತೆ ಸಲಹೆ ನೀಡಿದ್ದರು. ನಾನು ಅದನ್ನು ಸಣ್ಣ ಅವಧಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಲಾರದು. ಆದರೆ ಅದನ್ನು ನಾನು ಖಂಡಿತಾ ಮಾಡುತ್ತೇನೆ. ನಾನು ಅವರ ಭುಜದ ಸ್ಥಾನವನ್ನು ಗಮನಿಸಿಕೊಂಡೆ. ನಾನು ಯಾವ ಕಡೆಗೆ ಹೆಚ್ಚು ವಾಲಿಕೊಂಡಿರಬೇಕು ಎಂಬುದನ್ನು ಅರ್ಥೈಸಿಕೊಂಡೆ” ಎಂದು ಹೇಳಿದ್ದಾರೆ.

ಇದೇವೇಳೆ ದ್ರಾವಿಡ್ ಆಡಿದ ಮಾತನ್ನು ನೆನಪಿಸಿದ ಮಯಾಂಕ್, “ನನ್ನನ್ನು ಈ ಪಂದ್ಯದಲ್ಲಿ ಆಡುವ ಬಳಗಕ್ಕೆ ಸೇರಿಸಿಕೊಂಡ ನಂತರ ರಾಹುಲ್ ದ್ರಾವಿಡ್ ಅವರು ನನ್ನ ಬಳಿ ಬಂದು ಮಾತನಾಡಿದರು. ಈ ಸಂದರ್ಭದಲ್ಲಿ ನನ್ನ ಕೈಯ್ಯಲ್ಲಿರುವುದನ್ನು ನಿಯಂತ್ರಿಸಲು ಹೇಳಿದರು. ಮೈದಾನಕ್ಕೆ ಇಳಿ ಅಲ್ಲಿ ನಿನ್ನಿಂದ ಎಷ್ಟು ಉತ್ತಮ ಆಟ ಆಡಲು ಸಾಧ್ಯವಾಗುತ್ತದೋ ಅದನ್ನು ಆಡು. ನಾವು ನಿನ್ನಿಂದ ಅಷ್ಟು ಮಾತ್ರವೇ ಬಯಸುತ್ತಿದ್ದೇವೆ” ಎಂದು ರಾಹುಲ್ ದ್ರಾವಿಡ್ ಹೇಳಿದರು ಎಂಬುದನ್ನು ಮಯಾಂಕ್ ಬಹಿರಂಗಪಡಿಸಿದರು.

ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭದ ನಡುವೆಯೂ ಪ್ರವಾಸಿ ತಂಡದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ (73ಕ್ಕೆ 4) ಮಾರಕ ದಾಳಿಗೆ ತತ್ತರಿಸಿತು. ಬಳಿಕ ಮಯಾಂಕ್ ಏಕಾಂಗಿ ನಿರ್ವಹಣೆ ಫಲವಾಗಿ ಭಾರತ ತಂಡ ಮೊದಲ ದಿನದಂತ್ಯಕ್ಕೆ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್ ಕಲೆಹಾಕಿದೆ.

India vs New Zealand: ಮಯಾಂಕ್ ಮೇಲೆ ಹೆಚ್ಚಿದ ನಿರೀಕ್ಷೆ: ಕುತೂಹಲ ಕೆರಳಿಸಿದ ಎರಡನೇ ದಿನದಾಟ

(Mayank Agarwal said how suggestions from Sunil Gavaskar and Rahul Dravid helped to improve batting in IND vs NZ Test)